ಭಾನುವಾರ, ಆಗಸ್ಟ್ 1, 2021
27 °C

ಸೌರಾಷ್ಟ್ರ ತೊರೆದು ಪುದುಚೇರಿ ಸೇರಿದ ಶೆಲ್ಡನ್ ಜಾಕ್ಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ/ಮುಂಬೈ: ಸೌರಾಷ್ಟ್ರ ಕ್ರಿಕೆಟ್ ತಂಡಕ್ಕೆ ರಣಜಿ ಕ್ರಿಕೆಟ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗಳಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸ್ಫೋಟಕ, ಮೋಹಕ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಮುಂದಿನ ರಣಜಿ ಋತುವಿನಲ್ಲಿ ಅವರು ಪುದುಚೇರಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಅವರಿಗೆ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯಿಂದ (ಎಸ್‌ಸಿಎ) ಹಸಿರು ನಿಶಾನೆ ಲಭಿಸಿದೆ. 

ಈ ನಿರ್ಧಾರವನ್ನು ಎಸ್‌ಸಿಎ ಮೂಲಕ ಬಹಿರಂಗಗೊಳಿಸಿರುವ ಶೆಲ್ಡನ್ ಜಾಕ್ಸನ್  ‘ಈ ತೀರ್ಮಾನ ತೆಗೆದುಕೊಳ್ಳುವುದು ಸುಲಭವಾಗಿರಲಿಲ್ಲ. ಆದರೂ ವೃತ್ತಿಪರ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಬೇರೆ ತಂಡ ಸೇರಲು ಇದು ಸಕಾಲ ಎಂದು ತೋರಿದ್ದರಿಂದ ಹೀಗೆ ಮಾಡಿದ್ದೇನೆ’ ಎಂದು ಹೇಳಿದ್ದಾರೆ. 

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಪಂಕಜ್ ಸಿಂಗ್‌ ಪುದುಚೇರಿ ತಂಡಕ್ಕೆ ವಾಪಸಾಗಿದ್ದಾರೆ. ಕಳೆದ ಬಾರಿ ಗಾಯದ ಸಮಸ್ಯೆಯಿಂದಾಗಿ ಅವರಿಗೆ ಆಡಲು ಸಾಧ್ಯವಾಗಲಿಲ್ಲ. ದೇಶಿ ಕ್ರಿಕೆಟ್‌ನಲ್ಲಿ ರನ್‌ ಮಳೆ ಸುರಿಸಿರುವ ಪಾರಸ್ ದೋಗ್ರ ಅವರನ್ನು ಪುದುಚೇರಿ ತಂಡ ಮೂರನೇ ಅತಿಥಿ ಆಟಗಾರನನ್ನಾಗಿ ಕರೆಸಿಕೊಂಡಿದೆ. ಪುದುಚೇರಿ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ವಿ.ಚಂದ್ರನ್ ಸುದ್ದಿಸಂಸ್ಥೆಗೆ ಈ ವಿಷಯ ತಿಳಿಸಿದ್ದಾರೆ. ಕಳೆದ ಬಾರಿ ಪಂಕಜ್ ಸಿಂಗ್ ಬದಲಿಗೆ ಕರ್ನಾಟಕದ ವಿನಯ್ ಕುಮಾರ್ ಅವರನ್ನು ಪುದುಚೇರಿ ತಂಡ ಸೇರಿಸಿಕೊಂಡಿತ್ತು.

ಬಲಗೈ ಬ್ಯಾಟ್ಸ್‌ಮನ್ ಶೆಲ್ಡನ್ ಜಾಕ್ಸನ್ 2019–20ರ ರಣಜಿ ಋತುವಿನ 10 ಪಂದ್ಯಗಳ 18 ಇನಿಂಗ್ಸ್‌ಗಳಲ್ಲಿ 50.56ರ ಸರಾಸರಿಯೊಂದಿಗೆ 809 ರನ್ ಕಲೆ ಹಾಕಿದ್ದರು. 2011ರಲ್ಲಿ ಸೌರಾಷ್ಟ್ರ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ಆ ವರ್ಷ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 5634 ರನ್ ಗಳಿಸಿದ್ದರು. 19 ಶತಕ ಮತ್ತು 27 ಅರ್ಧಶತಕಗಳು ಇದರಲ್ಲಿ ಸೇರಿದ್ದವು. 

‘ಎಸ್‌ಸಿಎ ಕಾರ್ಯದರ್ಶಿ ನಿರಂಜನ್ ಶಾ ಮತ್ತು ಅಧ್ಯಕ್ಷ ಜಯದೇವ ಶಾ ಅವರಿಗೆ ನಾನು ಅಭಾರಿ. ಅಂಗಣದ ಒಳಗೆಯೂ ಹೊರಗೆಯೂ ಅವರಿಬ್ಬರು ನನಗೆ ನೀಡಿದ ಪ್ರೋತ್ಸಾಹ ಮರೆಯಲು ಸಾಧ್ಯವಿಲ್ಲ. ಸಾಮರ್ಥ್ಯ ಕುಂದಿದ್ದಾಗ ಮತ್ತು ಬೇರೆ ಬೇರೆ ಸಮಸ್ಯೆಯಲ್ಲಿ ಸಿಲುಕಿದ್ದಾಗ ಅವರು ಸಲಹೆಗಳನ್ನು ನೀಡಿ ನನಗೆ ಧೈರ್ಯ ತುಂಬಿದ್ದಾರೆ’ ಎಂದು 33 ವರ್ಷದ ಶೆಲ್ಡನ್ ಹೇಳಿದ್ದಾರೆ.

‘ಶೆಲ್ಡನ್ ಜಾಕ್ಸನ್ ಅತ್ಯಪೂರ್ವ ಕ್ರಿಕೆಟ್ ಪ್ರತಿಭೆ ಮತ್ತು ಮಾನವೀಯ ಗುಣಗಳುಳ್ಳ ವ್ಯಕ್ತಿ’ ಎಂದು ಜಯದೇವ ಶಾ ಅಭಿಪ್ರಾಯಪಟ್ಟಿದ್ದಾರೆ.

‘ಶೆಲ್ಡನ್ ಜಾಕ್ಸನ್, ಪಾರಸ್ ದೋಗ್ರಾ ಮತ್ತು ಪಂಕಜ್ ಸಿಂಗ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂವರೂ ದೇಶಿ ಕ್ರಿಕೆಟ್‌ನಲ್ಲಿ ಮಾಡಿರುವ ಸಾಧನೆ ಅಪಾರ. ಅವರಿಂದ ನಮ್ಮ ತಂಡದ ಸಾಮರ್ಥ್ಯ ಇನ್ನಷ್ಟು ಹೆಚ್ಚುವ ಭರವಸೆ ಇದೆ’ ಎಂದು ಪುದುಚೇರಿ ಕ್ರಿಕೆಟ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕಳೆದ ಋತುವಿನಲ್ಲಿ ಪಾರಸ್ ದೋಗ್ರ ಅವರು ಹಿಮಾಚಲಪ್ರದೇಶ ತಂಡದ ಪರ ಒಂಬತ್ತು ಪಂದ್ಯಗಳನ್ನು ಆಡಿದ್ದು 967 ರನ್ ಗಳಿಸಿದ್ದಾರೆ. ನಾಲ್ಕು ಶತಕಗಳು ಅವರ ಖಾತೆಗೆ ಸೇರಿವೆ. 

ಭಾರತ ತಂಡದ ಬೌಲರ್ ಆಗಿದ್ದ ಮುಂಬೈನ ಆವಿಷ್ಕಾರ್ ಸಾಳ್ವಿ ಅವರನ್ನು ಪುದುಚೇರಿ ತಂಡ ಇತ್ತೀಚೆಗೆ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.

ಗುಜರಾತ್‌ನ ಭಾವನಗರ್‌ನಲ್ಲಿ ಜನಿಸಿದ ಶೆಲ್ಡನ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲೂ ಆಡಿದ್ದಾರೆ. 2009ರ ಆವೃತ್ತಿಯಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ನಲ್ಲಿ ಆಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶೆಲ್ಡನ್ ಅವರನ್ನು 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನತ್ತ ಸೆಳೆದುಕೊಂಡಿತ್ತು. ಆದರೆ ತಂಡದಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ. ಐಪಿಎಲ್‌ನಲ್ಲಿ ಒಟ್ಟಾರೆ ನಾಲ್ಕು ಪಂದ್ಯಗಳನ್ನು ಆಡಿದ್ದು ಮೂರು ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಒಟ್ಟು 38 ರನ್‌ ಕಲೆಹಾಕಿರುವ ಅವರ ಗರಿಷ್ಠ ಸ್ಕೋರ್ 16.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು