ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಟೂರ್ನಿ: ಗ್ಯಾಲಕ್ಸಿ ತಂಡಕ್ಕೆ 319 ರನ್‌ಗಳ ಜಯ

ಕೆಎಸ್‌ಸಿಎ ರಾಯಚೂರು ವಲಯ ಯು–16 ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿ
Published 21 ಮೇ 2024, 5:53 IST
Last Updated 21 ಮೇ 2024, 5:53 IST
ಅಕ್ಷರ ಗಾತ್ರ

ಕಲಬುರಗಿ: ಅಬ್ಬರದ ಬ್ಯಾಟಿಂಗ್‌ ಹಾಗೂ ಮಾರಕ ಬೌಲಿಂಗ್‌ ದಾಳಿ ನಡೆಸಿದ ಕಲಬುರಗಿಯ ಗ್ಯಾಲಕ್ಸಿ ಕ್ರಿಕೆಟ್‌ ಕ್ಲಬ್‌ ತಂಡವು ಕೆಎಸ್‌ಸಿಎ ರಾಯಚೂರು ವಲಯದ 16 ವರ್ಷದೊಳಗಿನವರ ಅಂತರ ಕ್ಲಬ್‌ ಕ್ರಿಕೆಟ್‌ ಟೂರ್ನಿಯ ಸೋಮವಾರದ ಪಂದ್ಯದಲ್ಲಿ 319 ರನ್‌ಗಳ ಬೃಹತ್‌ ಅಂತರದ ಗೆಲುವು ದಾಖಲಿಸಿತು.

ಆಯುಷ್ ಎಸ್‌.ಕೆ. (111 ರನ್‌, 4x12) ಹಾಗೂ ರೋಹನ ವಾಡೇಕರ (103 ರನ್‌, 4x15) ಸಿಡಿಸಿದ ಅಮೋಘ ಶತಕಗಳ ಬಲದಿಂದ ನಗರದ ಎನ್‌ವಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಗ್ಯಾಲಕ್ಸಿ ತಂಡವು ಬೀದರ್‌ನ ಗಜಾನನ ಕ್ರಿಕೆಟ್‌ ಕ್ಲಬ್‌(ಜಿಸಿಸಿ) ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 366 ರನ್‌ ಗಳಿಸಿತು. ಈ ಬೃಹತ್‌ ಮೊತ್ತದಲ್ಲಿ 61 ಇತರೆ ರನ್‌ಗಳೂ ಸೇರಿವೆ.

ಆರಂಭಿಕ ಆಟಗಾರ ಆಯುಷ್‌ ಎದುರಾಳಿ ತಂಡದ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಬರೋಬ್ಬರಿ ಮೂರೂವರೆ ಗಂಟೆಗೂ ಹೆಚ್ಚು ಅವಧಿ ಕ್ರೀಸ್‌ನಲ್ಲಿದ್ದ ಆಯುಷ್‌, 128 ಎಸೆತಗಳಲ್ಲಿ 12 ಬೌಂಡರಿ ಸೇರಿದಂತೆ 111 ರನ್‌ ಸಿಡಿಸಿದರು. ಅವರಿಗೆ ಸಾಯಿ ರಾಮ್‌ (53 ರನ್‌, 4x9) ಉತ್ತಮ ಸಾಥ್‌ ನೀಡಿದರು.

ಬಳಿಕ ಬಂದ ವರುಣ ರೆಡ್ಡಿ(12 ರನ್‌) ಹಾಗೂ ಯಶ ಕುಲಕರ್ಣಿ (10 ರನ್‌) ತುಂಬ ಹೊತ್ತು ನಿಲ್ಲಲಿಲ್ಲ. ನಂತರ ಕ್ರೀಸ್‌ಗಿಳಿದ ರೋಹನ, 74 ಎಸೆತಗಳಲ್ಲಿ 15 ಬೌಂಡರಿ ಸೇರಿದಂತೆ 103 ರನ್‌ ಬಾರಿಸಿ ತಂಡವನ್ನು ಬೃಹತ್‌ ಮೊತ್ತದತ್ತ ಕೊಂಡೊಯ್ದರು.

367 ರನ್‌ಗಳ ಬೃಹತ್‌ ಗುರಿ ಬೆನ್ನಟ್ಟಿದ ಗಜಾನನ ಕ್ರಿಕೆಟ್‌ ಕ್ಲಬ್‌ ತಂಡವನ್ನು ಗ್ಯಾಲಕ್ಸಿ ತಂಡದ ಬೌಲರ್‌ಗಳು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಫರಾನ್‌ (11 ರನ್‌) ಎರಡಂಕಿ ಮೊತ್ತ ಗಳಿಸಿದರೆ, ಶ್ರೀಹರಿ(4 ರನ್‌), ಮುರಳಿ ಕೃಷ್ಣ(3 ರನ್‌), ಗಣೇಶ (3 ರನ್‌), ರಘುವೀರ(1 ರನ್‌) ಒಂದಂಕಿ ರನ್‌ಗೆ ಸೀಮಿತವಾದರು. ಐವರು ಆಟಗಾರರು ಸೊನ್ನೆ ಸುತ್ತಿದರು.

ಗ್ಯಾಲಕ್ಸಿ ತಂಡದ ಪರ ಸಮರ್ಥ್‌ (1ಕ್ಕೆ4), ಜಾಕ್‌ವಾನ್‌ ಹಬೀಬ (9ಕ್ಕೆ3), ಸಾತ್ವಿಕ್‌ ಕುಲಕರ್ಣಿ (10ಕ್ಕೆ2), ಶ್ರೀಕಾಂತ್ (20ಕ್ಕೆ 1) ಉತ್ತಮ ಬೌಲಿಂಗ್ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಗ್ಯಾಲಕ್ಸಿ ತಂಡ: 50 ಓವರ್‌ಗಳಲ್ಲಿ 7 ವಿಕೆಟ್‌ 366 ರನ್‌ (ಆಯುಷ್ 111, ರೋಹನ 103, ಸಾಯಿರಾಮ 53; ರಘುವೀರ 84ಕ್ಕೆ3).

ಗಜಾನನ ಕ್ರಿಕೆಟ್‌ ಕ್ಲಬ್‌: 25.3 ಓವರ್‌ಗಳಲ್ಲಿ 47 ರನ್‌ಗಳಿಗೆ ಆಲೌಟ್‌ (ಫರಾನ್‌ 11, ಸಮರ್ಥ್ 1ಕ್ಕೆ4, ಜಾಕ್‌ವಾನ್‌ 9ಕ್ಕೆ3, ಸಾತ್ವಿಕ್‌ 10ಕ್ಕೆ2, ಶ್ರೀಕಾಂತ್ 20ಕ್ಕೆ 1).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT