ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆಂಧ್ರ ಕ್ರಿಕೆಟ್‌ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ಪಡೆದ ವಿಹಾರಿ

Published 4 ಜೂನ್ 2024, 14:03 IST
Last Updated 4 ಜೂನ್ 2024, 14:03 IST
ಅಕ್ಷರ ಗಾತ್ರ

ನವದೆಹಲಿ : ರಣಜಿ ಟ್ರೋಫಿ ಟೂರ್ನಿ ಸಂದರ್ಭದಲ್ಲಿ ಆಂಧ್ರ ತಂಡದ ನಾಯಕತ್ವದಿಂದ ತಮ್ಮನ್ನು ಕೆಳಗಿಳಿಸಿದ್ದನ್ನು ಟೀಕಿಸಿ ಆಂಧ್ರ ಕ್ರಿಕೆಟ್‌ ಸಂಸ್ಥೆಯ (ಎಸಿಎ) ಅವಕೃಪೆಗೆ ಒಳಗಾಗಿದ್ದ ಕ್ರಿಕೆಟಿಗ ಹನುಮ ವಿಹಾರಿ, ಸಂಸ್ಥೆಯಿಂದ ಕೊನೆಗೂ ನಿರಾಕ್ಷೇಪಣಾ ಪತ್ರವನ್ನು (ಎನ್‌ಒಸಿ) ಪಡೆದಿದ್ದಾರೆ.

‘ತನ್ನನ್ನು ನಿರ್ದಾಕ್ಷಿಣ್ಯವಾಗಿ ನಾಯಕತ್ವದಿಂದ ಕೆಳಗಿಳಿಸಿ ಅವಮಾನಿಸಿದೆ. ಮುಂದೆಂದೂ ನಾನು ಆಂಧ್ರ ತಂಡಕ್ಕೆ ಆಡುವುದಿಲ್ಲ’ ಎಂದು ಅವರು ಮಾರ್ಚ್‌ನಲ್ಲಿ ಹೇಳಿದ್ದರು. ಈ ಸಂಬಂಧ ವಿಹಾರಿ ಅವರಿಗೆ ಎಸಿಎ ನೋಟಿಸ್ ನೀಡಿತ್ತು.‌

ವಿಹಾರಿ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿ ಬೇರೆ ರಾಜ್ಯಗಳ ತಂಡಗಳಿಗೆ ಆಡಬೇಕಾದರೆ ಹಿಂದಿನ ತಂಡದಿಂದ ನಿರಾಕ್ಷೇಪಣಾ ಪತ್ರ ಅಗತ್ಯವಿತ್ತು. ಅದು ಸೋಮವಾರ ಅವರ ಕೈಸೇರಿದ್ದು, ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ಎರಡು ತಿಂಗಳಿಂದ ನಾನು ಎನ್‌ಒಸಿ ಕೇಳುತ್ತಿದ್ದೆ. ಎಸಿಎಗೆ ನಾಲ್ಕು ಬಾರಿ ಮೇಲ್ ಮಾಡಿದ್ದೇನೆ. ಆದರೂ ನೀಡಿರಲಿಲ್ಲ. ಈಗ ರಾಜ್ಯದಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಹೀಗಾಗಿ, ತಕ್ಷಣ ಎನ್‌ಒಸಿ ನೀಡಿದ್ದಾರೆ’ ಎಂದು ಅವರು ಬರೆದುಕೊಂಡಿದ್ದಾರೆ. ಆಂಧ್ರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಸೋತು, ತೆಲುಗು ದೇಶಂ ಪಕ್ಷ ಬಹುಮತ ಪಡೆದಿದೆ.

‘ವಿಹಾರಿ ಅವರು 2024-25ರ ಋತುವಿನಲ್ಲಿ ಬಿಸಿಸಿಐಗೆ ಸಂಯೋಜಿತವಾಗಿರುವ ಯಾವುದೇ ತಂಡವನ್ನು ಪ್ರತಿನಿಧಿಸಲು ಆಂಧ್ರ ಕ್ರಿಕೆಟ್ ಸಂಸ್ಥೆಯಿಂದ ಯಾವುದೇ ಅಭ್ಯಂತರವಿಲ್ಲ’ ಎಂದು ಎಸಿಎ ಕಾರ್ಯದರ್ಶಿ ಗೋಪಿನಾಥ್‌ ರೆಡ್ಡಿ ಎನ್‌ಒಸಿಯಲ್ಲಿ ಉಲ್ಲೇಖಿಸಿದ್ದಾರೆ.

ಭಾರತ ತಂಡದಲ್ಲಿ 16 ಟೆಸ್ಟ್‌ ಪಂದ್ಯಗಳನ್ನು ಆಡಿರುವ ವಿಹಾರಿ, 2022ರಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT