ಬ್ಲೂ ಸವಾಲು ಮೀರಿದ ಗ್ರೀನ್‌

7
ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿ

ಬ್ಲೂ ಸವಾಲು ಮೀರಿದ ಗ್ರೀನ್‌

Published:
Updated:
Deccan Herald

ಬೆಂಗಳೂರು: ಪ್ರಿಯಾ ಪೂನಿಯಾ (ಔಟಾಗದೆ 46; 51ಎ, 1ಬೌಂ, 4ಸಿ) ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಇಂಡಿಯಾ ಗ್ರೀನ್‌ ತಂಡ ಮಹಿಳಾ ಟ್ವೆಂಟಿ–20 ಚಾಲೆಂಜರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಇಂಡಿಯಾ ಬ್ಲೂ ಎದುರಿನ ಪಂದ್ಯದಲ್ಲಿ ವಿ.ಜಯದೇವನ್‌ (ವಿಜೆಡಿ) ನಿಯಮದ ಅನ್ವಯ 7 ವಿಕೆಟ್‌ಗಳಿಂದ ಗೆದ್ದಿದೆ.

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನ ಮೂರನೆ ಮೈದಾನದಲ್ಲಿ ಬುಧವಾರ ನಡೆದ ಹಣಾಹಣಿಗೆ ಮಳೆ ಅಡ್ಡಿಯಾಯಿತು. ಹೀಗಾಗಿ ಪಂದ್ಯವನ್ನು 17 ಓವರ್‌ಗಳಿಗೆ ಕಡಿತಗೊಳಿಸಲಾಯಿತು.

ಮೊದಲು ಬ್ಯಾಟ್‌ ಮಾಡಿದ ಮಿಥಾಲಿ ರಾಜ್‌ ಸಾರಥ್ಯ ಬ್ಲೂ ತಂಡ 17 ಓವರ್‌ಗಳಲ್ಲಿ 5 ವಿಕೆಟ್‌ಗೆ 82ರನ್‌ ಪೇರಿಸಿತು.

ಗುರಿ ಬೆನ್ನಟ್ಟಿದ ಗ್ರೀನ್‌ ತಂಡ 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 78ರನ್‌ ಕಲೆಹಾಕಿದ್ದ ವೇಳೆ ಮತ್ತೆ ಮಳೆ ಸುರಿಯಿತು. ಹೀಗಾಗಿ ವಿಜೆಡಿ ನಿಯಮದ ಅನುಸಾರ ಉತ್ತಮ ರನ್‌ ಸರಾಸರಿ ಹೊಂದಿದ್ದ ಗ್ರೀನ್‌ ತಂಡವನ್ನು ವಿಜಯೀ ಎಂದು ಘೋಷಿಸಲಾಯಿತು.

ಮೊದಲ ಪಂದ್ಯದಲ್ಲಿ ಇಂಡಿಯಾ ರೆಡ್‌ ಎದುರು ಪರಾಭವಗೊಂಡಿದ್ದ ಬ್ಲೂ ತಂಡಕ್ಕೆ ಈ ಹೋರಾಟದಲ್ಲಿ ಜಯ ಅನಿವಾರ್ಯ ವಾಗಿತ್ತು. ಬ್ಯಾಟಿಂಗ್‌ ಆರಂಭಿಸಿದ ತಂಡ ನಾಯಕಿ ಮಿಥಾಲಿ ಅವರ ವಿಕೆಟ್‌ ಬೇಗನೆ ಕಳೆದುಕೊಂಡಿತು. ಮೊದಲ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮಿಥಾಲಿ 12 ಎಸೆತಗಳಲ್ಲಿ ಆರು ರನ್‌ ಗಳಿಸಿ ಅರುಂಧತಿ ರೆಡ್ಡಿಗೆ ವಿಕೆಟ್‌ ನೀಡಿದರು.

ಕರ್ನಾಟಕದ ವಿ.ಆರ್‌.ವನಿತಾ (35; 39ಎ, 5ಬೌಂ, 1ಸಿ) ಜವಾಬ್ದಾರಿಯುತ ಆಟ ಆಡಿ ತಂಡದ ಮೊತ್ತ ಹೆಚ್ಚಿಸುವ ಪ್ರಯತ್ನ ನಡೆಸಿದರು. ಒಂಬತ್ತನೆ ಓವರ್‌ನಲ್ಲಿ ವನಿತಾ ಔಟಾದರು. ಬಳಿಕ ಬ್ಲೂ ತಂಡ ಕುಸಿತದ ಹಾದಿ ಹಿಡಿಯಿತು. ಮಧ್ಯಮ ಕ್ರಮಾಂಕದ ಆಟಗಾರ್ತಿಯರು ವಿಕೆಟ್‌ ನೀಡಲು ಅವಸರಿಸಿದರು!

ಗುರಿ ಬೆನ್ನಟ್ಟಿದ ವೇದಾ ಕೃಷ್ಣಮೂರ್ತಿ ಮುಂದಾಳತ್ವದ ಗ್ರೀನ್‌ ತಂಡ ಆರಂಭಿಕ ಸಂಕಷ್ಟ ಎದುರಿಸಿತು. ಜೆಮಿಮಾ ರಾಡ್ರಿಗಸ್‌ (10; 8ಎ, 2ಬೌಂ) ಐದನೆ ಓವರ್‌ನಲ್ಲಿ ಪೆವಿಲಿಯನ್‌ ಸೇರಿಕೊಂಡರು. ಮೋನಿಕಾ ದಾಸ್‌ (9), ನಾಯಕಿ ವೇದಾ (11; 14ಎ, 1ಬೌಂ) ಕೂಡಾ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು.

ಹೀಗಿದ್ದರೂ ಎದೆಗುಂದದ ಆರಂಭಿಕ ಆಟಗಾರ್ತಿ ಪ್ರಿಯಾ, ಉತ್ತಮ ಆಟ ಆಡಿ ತಂಡವನ್ನು ಗೆಲುವಿನ ಹಾದಿಯಲ್ಲಿ ಕೊಂಡೊಯ್ದರು.

ಸಂಕ್ಷಿಪ್ತ ಸ್ಕೋರ್‌: ಇಂಡಿಯಾ ಬ್ಲೂ: 17 ಓವರ್‌ಗಳಲ್ಲಿ 5 ವಿಕೆಟ್‌ಗೆ 82 (ಮಿಥಾಲಿ ರಾಜ್‌ 6, ವಿ.ಆರ್‌.ವನಿತಾ 35, ದಯಾಳನ್‌ ಹೇಮಲತಾ 9, ಅನುಜಾ ಪಾಟೀಲ್‌ 14, ರಾಧಾ ಯಾದವ್‌ ಔಟಾಗದೆ 11; ಜೂಲನ್‌ ಗೋಸ್ವಾಮಿ 20ಕ್ಕೆ1, ಅರುಂಧತಿ ರೆಡ್ಡಿ 13ಕ್ಕೆ2, ಕೃತಿಕಾ ಚೌಧರಿ 11ಕ್ಕೆ1, ಮೋನಿಕಾ ದಾಸ್‌ 17ಕ್ಕೆ1).

ಇಂಡಿಯಾ ಗ್ರೀನ್‌: 15.4 ಓವರ್‌ಗಳಲ್ಲಿ 3 ವಿಕೆಟ್‌ಗೆ 78 (ಜೆಮಿಮಾ ರಾಡ್ರಿಗಸ್‌ 10, ಪ್ರಿಯಾ ಪೂನಿಯಾ ಔಟಾಗದೆ 46, ಮೋನಿಕಾ ದಾಸ್‌ 9, ವೇದಾ ಕೃಷ್ಣಮೂರ್ತಿ 11; ಅನುಜಾ ಪಾಟೀಲ್‌ 8ಕ್ಕೆ1, ರಾಧಾ ಯಾದವ್‌ 15ಕ್ಕೆ1, ಪೂನಮ್‌ ಯಾದವ್‌ 18ಕ್ಕೆ1).

ಫಲಿತಾಂಶ: ವಿಜೆಡಿ ನಿಯಮದ ಅನ್ವಯ ಇಂಡಿಯಾ ಗ್ರೀನ್‌ ತಂಡಕ್ಕೆ 7 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !