ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL ಸಾಧನೆ, ವಿರಾಟ್ ಕೊಹ್ಲಿ ಸಾಧನೆಗೆ ಹೋಲಿಕೆ ಸರಿಯಲ್ಲ ಎಂದ ಸ್ಮೃತಿ ಮಂದಾನ

Published 19 ಮಾರ್ಚ್ 2024, 12:35 IST
Last Updated 19 ಮಾರ್ಚ್ 2024, 12:35 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ತಂಡವು ಡಬ್ಲ್ಯುಪಿಎಲ್ ಟ್ರೋಫಿ ಗೆದ್ದ ಕಾರಣಕ್ಕೆ ಬೆಂಗಳೂರು ಫ್ರಾಂಚೈಸಿಯ ಡಬ್ಲ್ಯುಪಿಎಲ್–ಐಪಿಎಲ್ ತಂಡಗಳಿಗೆ ಹೋಲಿಕೆ ಮಾಡಿ, ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ನೀಡಿರುವ ಕೊಡುಗೆಯನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ.

ಇತ್ತೀಚೆಗೆ, ನಡೆದ ಡಬ್ಲ್ಯುಪಿಎಲ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಮಣಿಸಿ ಬೆಂಗಳೂರು ಮಹಿಳೆಯರ ತಂಡ 2ನೇ ಆವೃತ್ತಿಯಲ್ಲೇ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಪುರುಷರ ತಂಡ 16 ಆವೃತ್ತಿಗಳಲ್ಲಿ ಮಾಡಲಾಗದ ಸಾಧನೆಯನ್ನು ಮಾಡಿದ ಮಹಿಳೆಯರ ತಂಡ, ಬೆಂಗಳೂರಿಗೆ ಗೌರವ ತಂದುಕೊಟ್ಟಿತ್ತು.

‘ಡಬ್ಲ್ಯುಪಿಎಲ್ ಬೇರೆ ವಿಷಯ. ಆದರೆ, ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾದದ್ದಾಗಿದೆ. ನನ್ನ ವೃತ್ತಿಜೀವನ ಮತ್ತು ಅವರ ಸಾಧನೆಗೆ ಹೋಲಿಕೆ ಮಾಡುವುದು ಸರಿಯಲ್ಲ’ಎಂದು ಸ್ಮೃತಿ ಮಂದಾನ ಹೇಳಿದ್ದಾರೆ.

‘ವಿರಾಟ್ ಕೊಹ್ಲಿ ಮಾಡಿರುವ ಸಾಧನೆ ಅದ್ಬುತವಾದದ್ದು. ಅವರೊಬ್ಬ ಸ್ಫೂರ್ತಿಯ ಆಟಗಾರ. ಒಂದು ಟ್ರೋಫಿ ಹಲವು ವಿಷಯಗಳನ್ನು ವ್ಯಾಖ್ಯಾನಿಸುವುದಿಲ್ಲ. ನಾನೂ ಸೇರಿದಂತೆ ಎಲ್ಲರೂ ಅವರನ್ನು ಗೌರವಿಸುತ್ತೇವೆ. ಹಾಗಾಗಿ, ಹೋಲಿಕೆ ಬೇಡ ಎಂದು ನಾನು ಹೇಳುತ್ತಿದ್ದೇನೆ’ಎಂದಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಸ್ಮೃತಿ ಮಂದಾನ ಇಬ್ಬರೂ ನಂ.18ರ ಜೆರ್ಸಿ ತೊಡುತ್ತಾರೆ. ಈ ಕುರಿತಂತೆ ಹೋಲಿಕೆ ಬೇಡ ಎಂದು ಅವರು ಹೇಳಿದ್ದಾರೆ.

‘ಜೆರ್ಸಿ ಸಂಖ್ಯೆ 18 ಎಂಬ ಮಾತ್ರಕ್ಕೆ ಹೋಲಿಕೆಯನ್ನು ನಾನು ಒಪ್ಪುವುದಿಲ್ಲ. ಜೆರ್ಸಿ ಸಂಖ್ಯೆಯ ಆಯ್ಕೆ ವೈಯಕ್ತಿಕವಾದದ್ದು. ನಾನು ಹುಟ್ಟಿದ ದಿನಾಂಕ 18 ಹಾಗಾಗಿ, ನನ್ನ ಬೆನ್ನ ಹಿಂದೆ 18 ಎಂಬ ಸಂಖ್ಯೆ ಹೊಂದಿದ್ದೇನೆ. ಆ ಸಂಖ್ಯೆ ನಾನು ಹೇಗೆ ಕ್ರಿಕೆಟ್ ಆಡುತ್ತೇನೆ. ವಿರಾಟ್ ಹೇಗೆ ಕ್ರಿಕೆಟ್ ಆಡುತ್ತಾರೆ ಎಂಬುದನ್ನು ನಿರ್ಧರಿಸುವುದಿಲ್ಲ. ಹಲವು ವಿಷಯಗಳಲ್ಲಿ ಅವರು ನಮಗೆ ಸ್ಫೂರ್ತಿಯಾಗಿದ್ದಾರೆ’ ಎಂದು ಸ್ಮೃತಿ ಹೇಳಿದ್ದಾರೆ.

‘ಕಳೆದ 16 ವರ್ಷಗಳಿಂದ ಐಪಿಎಲ್‌ನಲ್ಲಿ ಪುರುಷರ ತಂಡವು ಅತ್ಯುತ್ತಮವಾಗಿ ಆಡುತ್ತಿದೆ. ಕಪ್ ಅವರಿಗೆ ಸಿಕ್ಕಿಲ್ಲ ಎಂಬ ಮಾತ್ರಕ್ಕೆ ಅವರು ಉತ್ತಮವಾಗಿ ಆಡಿಲ್ಲ ಎಂದು ಅರ್ಥವಲ್ಲ. ಈ ಹೋಲಿಕೆ ಸರಿಯಾದುದಲ್ಲ. ಆರ್‌ಸಿಬಿ ಒಂದು ಫ್ರಾಂಚೈಸಿ. ಮಹಿಳೆಯರ ಮತ್ತು ಪುರುಷರ ತಂಡಗಳನ್ನು ಬೇರೆ ಬೇರೆಯಾಗಿ ನೋಡಿರಿ. ಏಕೆಂದರೆ, ಹೋಲಿಕೆ ನಮಗೆ ಬೇಕಿಲ್ಲ’ ಎಂದು ಸ್ಮೃತಿ ಹೇಳಿದ್ದಾರೆ.

‘ಅವರು(ಪುರುಷರ ತಂಡ) ಏನು ಮಾಡುತ್ತಿದ್ದಾರೊ ಅದರಲ್ಲಿ ಅವರು ಉತ್ತಮವಾಗಿದ್ದಾರೆ. ನಮ್ಮದರಲ್ಲಿ ನಾವು ಉತ್ತಮವಾಗಿದ್ದೇವೆ’ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT