ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೀಫಾ ವಿಶ್ವಕಪ್ ಕ್ವಾಲಿಫೈರ್ಸ್: ಅಫ್ಗನ್ ವಿರುದ್ಧ ಭಾರತಕ್ಕೆ ಗೆಲುವಿನ ವಿಶ್ವಾಸ

Published 20 ಮಾರ್ಚ್ 2024, 15:15 IST
Last Updated 20 ಮಾರ್ಚ್ 2024, 15:15 IST
ಅಕ್ಷರ ಗಾತ್ರ

ಅಭಾ (ಸೌದಿ ಅರೇಬಿಯಾ),: ಫೀಫಾ ವಿಶ್ವಕಪ್‌ ಕ್ವಾಲಿಫೈರ್ಸ್‌ನ ಮೂರನೇ ಸುತ್ತಿಗೆ ಪ್ರವೇಶ ಪಡೆಯುವ ಪ್ರಯತ್ನದಲ್ಲಿರುವ ಭಾರತ ಫುಟ್‌ಬಾಲ್‌ ತಂಡ ಗುರುವಾರ ರಾತ್ರಿ ಇಲ್ಲಿ ನಡೆಯುವ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ದುರ್ಬಲ ಅಫ್ಗಾನಿಸ್ತಾನ ತಂಡವನ್ನು ಗುರುವಾರ ಎದುರಿಸಲಿದೆ.

ಮಿಡ್‌ಫೀಲ್ಡ್‌ನಲ್ಲಿ ಆಡುವ ಜೀಕ್ಸನ್ ಸಿಂಗ್ ಮತ್ತು ಸೆಂಟರ್‌ ಬ್ಯಾಕ್ ಅನ್ವರ್ ಅಲಿ ಅವರು ಮರಳಿರುವುದು ‘ಬ್ಲೂ ಟೈಗರ್ಸ್‌’ ತಂಡಕ್ಕೆ ಬಲತುಂಬಿದೆ. ಆದರೆ ಮಿಡ್‌ಫೀಲ್ಡರ್ ಸಹಲ್ ಅಬ್ದುಲ್ ಸಮದ್ ಅವರು ಮಂಗಳವಾರ ತರಬೇತಿ ವೇಳೆ ಗಾಯಗೊಂಡಿದ್ದು ಕೊಂಚ ಹಿನ್ನಡೆ.

ಎರಡು ಪಂದ್ಯಗಳಲ್ಲಿ ಒಂದು ಗೆಲುವಿನೊಡನೆ ಭಾರತ ‘ಎ’ ಗುಂಪಿನಲ್ಲಿ ಮೂರು ಪಾಯಿಂಟ್ಸ್‌ ಹೊಂದಿದ್ದು, ಸದ್ಯ ಎರಡನೇ ಸ್ಥಾನದಲ್ಲಿದೆ. ಹಾಲಿ ಏಷ್ಯನ್ ಚಾಂಪಿಯನ್ ಕತಾರ್ ಎರಡು ಗೆಲುವಿನೊಡನೆ ಆರು ಪಾಯಿಂಟ್ಸ್ ಶೇಖರಿಸಿ ಅಗ್ರಸ್ಥಾನದಲ್ಲಿದೆ. ಕುವೈತ್ ಕೂಡ ಎರಡನೇ ಸ್ಥಾನದಲ್ಲಿದೆ. ಎರಡೂ ಪಂದ್ಯ ಸೋತಿರುವ ಅಫ್ಗಾನಿಸ್ತಾನ ನಾಲ್ಕು ತಂಡಗಳ ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.‌

ಕುವೈತ್ ವಿರುದ್ಧದ ಗೆಲುವು, ವಿಶ್ವ ಕ್ರಮಾಂಕದಲ್ಲಿ 117ನೇ ಸ್ಥಾನದಲ್ಲಿರುವ ಭಾರತಕ್ಕೆ ವಿಶ್ವಾಸ ತುಂಬಿದ್ದು, ಇಲ್ಲಿ ಪೂರ್ಣ ಮೂರು ಪಾಯಿಂಟ್‌ ಪಡೆದು ಅರ್ಹತಾ ಸುತ್ತಿನಿಂದ ಮೇಲೆರುವ ಸಾಧ್ಯತೆ ಬಲಗೊಳಿಸಿದೆ. ಅಫ್ಗಾನಿಸ್ತಾನ 158ನೇ ಕ್ರಮಾಂಕ ಪಡೆದಿದೆ.

ಭಾರತ ಕುವೈತ್‌ ಸಿಟಿಯಲ್ಲಿ ನಡೆದ ಪಂದ್ಯದಲ್ಲಿ ಕುವೈತ್‌ ಮೇಲೆ 1–0 ಜಯ ಪಡೆದಿತ್ತು. ಭುವನೇಶ್ವರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಕತಾರ್ ಎದುರು 0–3ರಿಂದ ಸೋತಿತ್ತು.

ಆದರೆ ಕ್ರಮಾಂಕಪಟ್ಟಿಯಲ್ಲಿ ಕೆಳಗಿದ್ದರೂ ಅಫ್ಗಾನಿಸ್ತಾನವು ಕೊನೆಯವರೆಗೂ ಹೋರಾಟ ನೀಡಬಲ್ಲ ತಂಡ. ಅನುಭವಿ ಸುನಿಲ್ ಚೆಟ್ರಿ ಅವರು ಮನ್ವಿರ್ ಸಿಂಗ್ ಅವರೊಡನೆ ದಾಳಿಯ ನೇತೃತ್ವ ವಹಿಸಲಿದ್ದಾರೆ.

ಅಫ್ಗಾನಿಸ್ತಾನ ತಂಡ ಕೆಲವು ಪ್ರಮುಖ ಆಟಗಾರರನ್ನು ಕಳೆದುಕೊಂಡಿದೆ. ಅಲ್ಲಿನ ಫೆಡರೇಷನ್‌ ಜೊತೆ ಸಂಘರ್ಷದಿಂದ ತಂಡ ದುರ್ಬಲಗೊಂಡಿದೆ. ಕುವೈತ್ ಮತ್ತು ಕತಾರ್ ವಿರುದ್ಧ ಕ್ವಾಲಿಫೈರ್ ಪಂದ್ಯಗಳಿಗೆ 18 ಆಟಗಾರರು ಬಹಿಷ್ಕಾರ ಹಾಕಿದ್ದರು. ಆದರೂ ಝೊಹಿಬ್ ಇಸ್ಲಾಂ ಅಮಿರಿ, ಒಮಿಡ್‌ ಮುಸಾವಿ, ಬಲಾಲ್‌ ಅರೆಝೌ ಅವರು ತಂಡದಲ್ಲಿ ಪ್ರಮುಖ ಆಟಗಾರರಾಗಿದ್ದು ತಮ್ಮ ಆಟದಿಂದ ಎದುರಾಳಿಗಳಿಗೆ ಸಮಸ್ಯೆ ತಂದಿಡಬಲ್ಲರು.

ಪಂದ್ಯದ ಆರಂಭ: ರಾತ್ರಿ 12.30 (ಶುಕ್ರವಾರ, ಭಾರತೀಯ ಕಾಲಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT