ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೆಂಚ್‌ ಓಪನ್‌ ಟೆನಿಸ್‌: ಅಲ್ಕರಾಜ್‌ ಮುಡಿಗೆ ಮತ್ತೊಂದು ಕಿರೀಟ

Published 10 ಜೂನ್ 2024, 4:16 IST
Last Updated 10 ಜೂನ್ 2024, 4:16 IST
ಅಕ್ಷರ ಗಾತ್ರ

ಪ್ಯಾರಿಸ್‌: ಮೂರನೇ ಶ್ರೇಯಾಂಕದ ಕಾರ್ಲೋಸ್‌ ಅಲ್ಕರಾಜ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನ ಫೈನಲ್‌ನಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ಅವರನ್ನು ಮಣಿಸಿ ಕಿರೀಟ ಮುಡಿಗೇರಿಸಿಕೊಂಡರು. ಜೊತೆಗೆ ಮೂರು ಮಾದರಿಗಳ ಕೋರ್ಟ್‌ನಲ್ಲಿ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು.

ರೋಲ್ಯಾಂಡ್‌ ಗ್ಯಾರೋಸ್‌ನ ಫಿಲೀಪ್ ಚೆಟ್ರಿಯರ್‌ ಕೋರ್ಟ್‌ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸ್ಪೇನ್‌ನ 21 ವರ್ಷದ ಅಲ್ಕರಾಜ್‌ ಅವರು 6-3, 2-6, 5-7, 6-1, 6-2ರಿಂದ ಜರ್ಮನಿಯ 26 ವರ್ಷದ ಜ್ವೆರೇವ್‌ ಅವರನ್ನು ಹಿಮ್ಮೆಟ್ಟಿಸಿದರು. ನಾಲ್ಕು ಗಂಟೆ 19 ನಿಮಿಷಗಳ ಕಾಲ ನಡೆದ ಐದು ಸೆಟ್‌ಗಳ ರೋಚಕ ಹಣಾಹಣಿಯಲ್ಲಿ ಅಲ್ಕರಾಜ್‌ ಮೇಲುಗೈ ಸಾಧಿಸಿದರು.

2022ರಲ್ಲಿ ಅಮೆರಿಕ ಓಪನ್‌ ಪ್ರಶಸ್ತಿ ಗೆದ್ದಿದ್ದ ಅಲ್ಕರಾಜ್, ಕಳೆದ ವರ್ಷ ವಿಂಬಲ್ಡನ್‌ ಫೈನಲ್‌ನಲ್ಲಿ ನೊವಾಕ್‌ ಜೊಕೊವಿಚ್‌ ಅವರನ್ನು ಮಣಿಸಿ, ಕಿರೀಟವನ್ನು ಜಯಿಸಿದ್ದರು. ಅವರು ಮುಂದಿನ ವರ್ಷ ಆಸ್ಟ್ರೇಲಿಯನ್ ಓಪನ್‌ ಗೆದ್ದರೆ, ನಾಲ್ಕೂ ಗ್ರ್ಯಾನ್‌ಸ್ಲಾಮ್ ಗೆದ್ದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗುವರು.

2020ರಲ್ಲಿ ಅಮೆರಿಕ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಜ್ವೆರೇವ್‌ ಅಲ್ಲೂ ಐದು ಸೆಟ್‌ಗಳ ಹೋರಾಟದಲ್ಲಿ ಡೊಮಿನಿಕ್ ಥೀಮ್ ಅವರಿಗೆ ಮಣಿದಿದ್ದರು. ಇಲ್ಲಿ ಚೊಚ್ಚಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಸ್ವಲ್ಪದರಲ್ಲಿ ಕಳೆದುಕೊಂಡರು. ಎರಡು ದಿನಗಳ ಹಿಂದೆಯಷ್ಟೇ ಜ್ವರೇವ್‌ ವಿರುದ್ಧದ ಹಲ್ಲೆ ಪ್ರಕರಣವನ್ನು ಜರ್ಮನಿಯ ಕೋರ್ಟ್‌ ಕೈಬಿಟ್ಟಿತ್ತು.

ಮೊದಲ ಸೆಟ್‌ನಲ್ಲಿ ಅಲ್ಕರಾಜ್‌ ಮೇಲುಗೈ ಸಾಧಿಸಿದರೆ, ಎರಡು ಮತ್ತು ಮೂರನೇ ಸೆಟ್‌ನಲ್ಲಿ ಜ್ವರೇವ್‌ ಹಿಡಿತ ಸಾಧಿಸಿ ಮುನ್ನಡೆ ಪಡೆದರು. ಆದರೆ, ಮತ್ತೆ ನಾಲ್ಕನೇ ಸೆಟ್‌ನಲ್ಲಿ ಅಲ್ಕರಾಜ್‌ ಲಯ ಕಂಡುಕೊಂಡು ಸ್ಕೋರ್‌ ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್‌ನಲ್ಲಿ ಸ್ಪೇನ್‌ ಆಟಗಾರ ಪ್ರಾಬಲ್ಯ ಮೆರೆದರು. ಈ ಮೂಲಕ ಅಲ್ಕರಾಜ್‌ ಅವರು ಜ್ವೆರೇವ್‌ ವಿರುದ್ಧ ಗೆಲುವಿನ ದಾಖಲೆಯನ್ನು 5–5ಕ್ಕೆ ಸಮಬಲಗೊಳಿಸಿದರು.

ಕೊಕೊ–ಸಿನಿಯಾಕೋವಾಗೆ ಪ್ರಶಸ್ತಿ

ಅಮೆರಿಕದ ಕೊಕೊ ಗಾಫ್‌ ಅವರು ಜೆಕ್‌ ಗಣರಾಣ್ಯದ ಕಟೆರಿನಾ ಸಿನಿಯಾಕೋವಾ ಅವರೊಂದಿಗೆ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಚೊಚ್ಚಲ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದರು.

ಮಹಿಳೆಯರ ಸಿಂಗಲ್ಸ್‌ನಲ್ಲಿ ಅಮೆರಿಕಾ ಓಪನ್‌ ಚಾಂಪಿಯನ್‌ ಆಗಿರುವ 20 ವರ್ಷದ ಕೊಕೊ, ಇಲ್ಲಿ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಇಗಾ ಶ್ವಾಂಟೆಕ್‌ ವಿರುದ್ಧ ಪರಾಭವಗೊಂಡು ನಿರಾಸೆ ಅನುಭವಿಸಿದ್ದರು. ಅದರೆ, ಡಬಲ್ಸ್‌ನಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.

ಕೊಕೊ ಮತ್ತು 28 ವರ್ಷದ ಕಟೆರಿನಾ ಜೋಡಿಯು ಭಾನುವಾರ ಫೈನಲ್‌ ಹಣಾಹಣಿಯಲ್ಲಿ 7-6 (5), 6-3 ಇಟಲಿಯ ಜಾಸ್ಮಿನ್ ಪಾವ್ಲೀನಿ ಮತ್ತು ಸಾರಾ ಎರಾನಿ ಅವರನ್ನು ನೇರ ಸೇಟ್‌ಗಳಲ್ಲಿ ಮಣಿಸಿತು.

ಕಟೆರಿನಾ ಅವರಿಗೆ ಡಬಲ್ಸ್‌ನಲ್ಲಿ ಇದು ಎಂಟನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯಾಗಿದೆ. ಈ ಹಿಂದಿನ ಏಳು ಪ್ರಶಸ್ತಿಯನ್ನು ಸ್ವದೇಶದ ಬಾರ್ಬೊರಾ ಕ್ರೆಜ್ಸಿಕೋವಾ ಅವರೊಂದಿಗೆ ಗೆದ್ದಿದ್ದಾರೆ.

ಜಾಸ್ಮಿನ್ ಅವರು ಇಲ್ಲಿ ಮಹಿಳಾ ಸಿಂಗಲ್ಸ್‌ನಲ್ಲೂ ರನ್ನರ್ ಅಪ್‌ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT