ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌: ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

Published 29 ಮೇ 2024, 14:26 IST
Last Updated 29 ಮೇ 2024, 14:26 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಹದಿಹರೆಯದ ಚೆಸ್‌ ತಾರೆ ಡಿ.ಗುಕೇಶ್ ಮತ್ತು ಹಾಲಿ ವಿಶ್ವ ಚಾಂಪಿಯನ್‌, ಚೀನಾದ ಡಿಂಗ್ ಲಿರೆನ್ ನಡುವಣ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್‌ಷಿಪ್‌ನ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದೆ. ಈ ವರ್ಷದ ನವೆಂಬರ್‌– ಡಿಸೆಂಬರ್‌ನಲ್ಲಿ ಈ ಚಾಂಪಿಯನ್‌ಷಿಪ್‌ ನಡೆಯಬೇಕಾಗಿದೆ.

ಕಳೆದ ತಿಂಗಳು ಕೆನಡಾದಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಟೂರ್ನಿಯನ್ನು ಗೆಲ್ಲುವ ಮೂಲಕ 17 ವರ್ಷದ ಗುಕೇಶ್‌, ವಿಶ್ವ ಚೆಸ್ ಪಟ್ಟಕ್ಕೆ ಅತಿ ಕಿರಿಯ ಚಾಲೆಂಜರ್ ಎನಿಸಿದ್ದರು. ಭಾರತ ಒಂದೊಮ್ಮೆ ಚಾಂಪಿಯನ್‌ಷಿಪ್‌ ಆತಿಥ್ಯದ ಹಕ್ಕನ್ನು ಪಡೆದರೆ, ಈ ಪ್ರತಿಷ್ಠಿತ ಕೂಟ ನವೆಂಬರ್‌ 20 ರಿಂದ ಡಿಸೆಂಬರ್‌ 15ರವರೆಗೆ ಚೆನ್ನೈನಲ್ಲಿ ನಿಗದಿಯಾಗಲಿದೆ.

ತಮಿಳುನಾಡು ಸರ್ಕಾರದಿಂದ ಬಿಡ್‌ ಹೋಗಿದೆ. ‘ಭಾರತದಿಂದ ಬಿಡ್‌ ಸ್ವೀಕರಿಸಲಾಗಿದೆ’ ಎಂದು ವಿಶ್ವ ಚೆಸ್‌ನ ಅಧಿಕೃತ ಸಂಸ್ಥೆಯಾದ ಫಿಡೆ ಸಿಇಒ ಎಮಿಲ್ ಸುತೋವ್‌ಸ್ಕಿ ಪಿಟಿಐಗೆ ತಿಳಿಸಿದರು.

ಈವರೆಗೆ ಇನ್ಯಾವುದೇ ದೇಶದಿಂದ ಫಿಡೆಯು ಬಿಡ್‌ ಸ್ವೀಕರಿಸಿಲ್ಲ. ಮೇ 31 ಇದಕ್ಕೆ ಕೊನೆಯ ದಿನವಾಗಿದೆ. ಭಾರತದ ಜೊತೆ ಸಿಂಗಪುರ ಕೂಡ ಬಿಡ್‌ ಸಲ್ಲಿಸುವ ನಿರೀಕ್ಷೆಯಿದೆ ಎನ್ನಲಾಗಿದೆ. ಆದರೆ ಇದುವರೆಗೆ ಅದು ಈ ನಿಟ್ಟಿನಲ್ಲಿ ಮುಂದುವರಿದಿಲ್ಲ.

ಇದುವರೆಗೆ ಬೇರಾವುದೇ ದೇಶವು ಬಿಡ್‌ ಸಲ್ಲಿಸಿಲ್ಲ. ಕೊನೆಯ ದಿನದವರೆಗೆ ಕಾಯುತ್ತೇವೆ. ಮುಂದಿನ ಫಿಡೆ ಕೌನ್ಸಿಲ್ ಸಭೆಯಿದೆ. ನಂತರ ನಿಯಮಗಳ ಅನುಸಾರವಾಗಿ ನಾವು ಆತಿಥ್ಯದ ಹಕ್ಕನ್ನು ನಿರ್ಧರಿಸಲಿದ್ದೇವೆ ಎಂದು ಸುತೋವ್‌ಸ್ಕಿ ಹೇಳಿದರು.

ಎಐಸಿಎಫ್‌ ಬಿಡ್‌ ಗೆದ್ದಲ್ಲಿ, ಸುಮಾರು ₹71 ಕೋಟಿ ರೂಪಾಯಿ ನೀಡಬೇಕಾಗುತ್ತದೆ. ಟೂರ್ನಿಯ ಅವಧಿ 25 ದಿನಗಳದ್ದು. ನಿಯಮಗಳನ್ನು ಜುಲೈ 1ರೊಳಗೆ ಪೂರ್ಣಗೊಳಿಸಲಾಗುತ್ತದೆ.‌

ಒಟ್ಟು ಬಹುಮಾನ ನಿಧಿ ₹20 ಕೋಟಿಗೂ ಅಧಿಕ ಇರಲಿದೆ. ಇದು 2023ರ ಚಾಂಪಿಯನ್‌ಷಿಪ್‌ಗಿಂತ (ಆಗ ₹17 ಕೋಟಿ) ಆಧಿಕವಾಗಿದೆ.

ಚೆನ್ನೈನಲ್ಲಿ ನೆಲೆಸಿರುವ ಗುಕೇಶ್‌ ಅವರಿಗೆ ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್ ಆನಂದ್ ಮೆಂಟರ್ ಆಗಿದ್ದಾರೆ. ಏಪ್ರಿಲ್‌ನಲ್ಲಿ ಕ್ಯಾಂಡಿಡೇಟ್ಸ್‌ ಗೆಲ್ಲುವ ಮೂಲಕ ಅವರು ಈ ಸಾಧನೆ ಮಾಡಿದ ಅತಿ ಕಿರಿಯ ಆಟಗಾರ ಎನಿಸಿದ್ದರು. ಈ ಮೊದಲ ಆ ದಾಖಲೆ ಇನ್ನೊಬ್ಬ ದಿಗ್ಗಜ ಗ್ಯಾರಿ ಕ್ಯಾಸ್ಪರೋವ್ ಹೆಸರಿನಲ್ಲಿತ್ತು. ಅವರು 1984ರಲ್ಲಿ ಈ ಪ್ರಶಸ್ತಿ ಗೆದ್ದು, ಅನತೋಲಿ ಕಾರ್ಪೋವ್‌ ಅವರಿಗೆ ಚಾಲೆಂಜರ್ ಆಗಿದ್ದಾಗ 20 ವರ್ಷ ವಯಸ್ಸಿನವರಾಗಿದ್ದರು. ಗುಕೇಶ್‌ಗೆ 17 ವರ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT