ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿ: ಪ್ರಜ್ಞಾನಂದ, ಗುಕೇಶ್‌ಗೆ ಪುಟಿದೇಳುವ ಅವಕಾಶ

Published 13 ಏಪ್ರಿಲ್ 2024, 13:59 IST
Last Updated 13 ಏಪ್ರಿಲ್ 2024, 13:59 IST
ಅಕ್ಷರ ಗಾತ್ರ

ಟೊರಾಂಟೊ: ಕ್ಯಾಂಡಿಡೇಟ್ಸ್ ಚೆಸ್‌ ಟೂರ್ನಿಯ ಅರ್ಧ ಭಾಗ ಮುಗಿದಿದ್ದು ಶುಕ್ರವಾರ ವಿರಾಮದ ದಿನವಾಗಿತ್ತು. ಭಾರತದ ಪ್ರತಿಭಾನ್ವಿತ ಗ್ರ್ಯಾಂಡ್‌ಮಾಸ್ಟರ್‌ಗಳಾದ ಆರ್‌.ಪ್ರಜ್ಞಾನಂದ ಮತ್ತು ಡಿ.ಗುಕೇಶ್‌ ಅವರು ಎರಡನೇ ಸ್ಥಾನದಲ್ಲಿದ್ದು, ಎಂಟನೇ ಸುತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ಇಯಾನ್‌ ನೆಪೊಮ್‌ನಿಯಾಚಿ ಅವರನ್ನು ಸರಿಗಟ್ಟಲು ಪ್ರಯತ್ನಿಸಲಿದ್ದಾರೆ.

ವಿಶ್ವಕಪ್‌ ರನ್ನರ್‌ ಅಪ್ ಆಗಿರುವ ಪ್ರಜ್ಞಾನಂದ ಅವರಿಗೆ ಎಂಟನೇ ಸುತ್ತಿನಲ್ಲಿ ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಎದುರಾಳಿ. ಗುಕೇಶ್‌ ಅವರಿಗೆ ಸ್ವದೇಶದ ವಿದಿತ್‌ ಗುಜರಾತಿ ಅವರು ಮುಖಾಮುಖಿಯಾಗಿದ್ದಾರೆ. ಇದುವರೆಗೆ ಭಾರತದ ಆಟಗಾರರ ನಿರ್ವಹಣೆ ಉತ್ತಮವಾಗಿಯೇ ಇದೆ.

ಎರಡು ಬಾರಿ ಕ್ಯಾಂಡಿಡೇಟ್ಸ್ ಟೂರ್ನಿ ಗೆದ್ದಿರುವ ರಷ್ಯಾದ ನೆಪೊಮ್‌ನಿಯಾಚಿ, ಹ್ಯಾಟ್ರಿಕ್‌ ಪ್ರಯತ್ನದಲ್ಲಿದ್ದು, ಆ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದಾರೆ. ಅವರು ನಾಲ್ಕೂವರೆ ಪಾಯಿಂಟ್ಸ್ ಸಂಗ್ರಹಿಸಿದ್ದಾರೆ. ಪ್ರಜ್ಞಾನಂದ, ಗುಕೇಶ್ ಮತ್ತು ಅಗ್ರ ಶ್ರೇಯಾಂಕದ ಫ್ಯಾಬಿಯಾನೊ ಕರುವಾನಾ (ಅಮೆರಿಕ) ಅವರು ನಾಲ್ಕು ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

ಗುಜರಾತಿ 3.5 ಪಾಯಿಟ್ಸ್‌ ಸಂಗ್ರಹಿಸಿದ್ದಾರೆ. ಅವರು ಸಾಮಾನ್ಯವಾಗಿ ಕೊನೆಯ ಕೆಲವು ಸುತ್ತುಗಳಿರುವಾಗ ಪುಟಿದೇಳುವ ಛಾತಿವುಳ್ಳ ಆಟಗಾರ. ಅಮೆರಿಕದ ಹಿಕಾರು ನಕಾಮುರಾ ಅವರು ಗುಜರಾತಿ ಜೊತೆ ಐದನೇ ಸ್ಥಾನ ಹಂಚಿಕೊಂಡಿದ್ದಾರೆ.

ಭಾರತದ ಆಟಗಾರರು ಗೆಲ್ಲುವ ಭರದಲ್ಲಿ, ಒಂದೊ ಡ್ರಾ ಅಥವಾ ಸೋತು ಅಮೂಲ್ಯ ಪಾಯಿಂಟ್ಸ್ ಕಳೆದುಕೊಂಡಿದ್ದು ಇದೆ. ವಿದಿತ್‌ ಗುಜರಾತಿ, ಕರುವಾನಾ ವಿರುದ್ಧ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದರು. ಅಬಸೋವ್‌ ವಿರುದ್ಧವೂ ಅವರ ಪ್ರಾಬಲ್ಯ ಸ್ಪಷ್ಟವಾಗಿತ್ತು. ಆದರೆ ಅಂತಿಮವಾಗಿ ಅವರು ಎರಡೂ ಪಂದ್ಯಗಳಲ್ಲಿ ಅರ್ಧ ಪಾಯಿಂಟ್‌ ಅಷ್ಟೇ ಗಳಿಸಲು ಶಕ್ತರಾದರು.

ಗುಕೇಶ್‌, ಅಲಿರೇಝಾ ವಿರುದ್ಧದ ಪಂದ್ಯದಲ್ಲಿ ಮೇಲುಗೈ ಸಾಧಿಸಿದ್ದರು. ಫ್ರಾನ್ಸ್‌ನ ಆಟಗಾರ ಸಮಯದ ಒತ್ತಡಕ್ಕೂ ಸಿಲುಕಿದ್ದರು. ಆದರೆ ಅದೃಷ್ಟ ಇರಲಿಲ್ಲ. ಕೆಲವು ಗಂಭೀರ ಪ್ರಮಾದಗಳನ್ನು ಎಸಗಿದ್ದರಿಂದ ಇರಾನ್‌ ಸಂಜಾತ ಆಟಗಾರನೆದುರು ಸೋಲನ್ನು ಕಂಡರು.

ಪ್ರಜ್ಞಾನಂದ ಅವರ ಆಟ ಪರಿಣಾಮಕಾರಿಯಾಗಿಯೇ ಇದೆ. ಅವರ ಸಿದ್ಧತೆಯ ಮಟ್ಟವನ್ನೂ ಪಂದ್ಯಗಳಲ್ಲಿ ಅಳೆಯಬಹುದಿತ್ತು. ಕರುವಾನಾ ಜೊತೆ ಕಪ್ಪು ಕಾಯಿಗಳಲ್ಲಿ ಡ್ರಾ ಮಾಡಿಕೊಂಡಿದ್ದು ಅವರ ಆತ್ಮವಿಶ್ವಾಸ ತೋರಿಸಿತು. ವಿದಿತ್ ವಿರುದ್ಧ ಸಾಧಿಸಿದ ಗೆಲುವು ರಿಸ್ಕ್‌ ತೆಗೆದುಕೊಳ್ಳುವ ಅವರ ಧೈರ್ಯಕ್ಕೆ ನಿದರ್ಶನವಾಯಿತು.

ಇಬ್ಬರಷ್ಟೇ ಅಜೇಯ

ಇದುವರೆಗಿನ (ಮೊದಲಾರ್ಧದ) ಏಳು ಪಂದ್ಯಗಳಲ್ಲಿ ನೆಪೊಮ್‌ನಿಯಚಿ ಮತ್ತು ಕರುವಾನಾ ಮಾತ್ರ ಒಂದೂ ಪಂದ್ಯ ಸೋತಿಲ್ಲ.

ಈ ಹಿಂದಿನ ಎರಡು ಕ್ಯಾಂಡಿಡೇಟ್ಸ್ ಟೂರ್ನಿಯಲ್ಲೂ ನೆಪೊಮ್‌ನಿಯಾಚಿ ಅವರು ಅರ್ಧಭಾಗ ಮುಗಿದಾಗ ಮುನ್ನಡೆಯಲ್ಲಿದ್ದರು. ಈ ಬಾರಿಯೂ ಅದನ್ನು ಕಾಪಾಡಿಕೊಂಡಿದ್ದಾರೆ.

ಅನುಭವಿ ಕರುವಾನಾ ಯಾವುದೇ ಕ್ಷಣದಲ್ಲಿ ಉತ್ತಮ ಆಟದ ಲಯ ಕಂಡುಕೊಳ್ಳಬಲ್ಲ ಚಾಣಾಕ್ಷ. ಅವರ ಅಭಿಮಾನಿಗಳು ಅಂಥ ಆಟದ ನಿರೀಕ್ಷೆಯಲ್ಲಿದ್ದಾರೆ.

ಹಂಪಿ, ವೈಶಾಲಿ ನಿರಾಸೆ

ಆದರೆ ಮಹಿಳಾ ವಿಭಾಗದಲ್ಲಿ ಕೋನೇರು ಹಂಪಿ ಮತ್ತು ಆರ್‌.ವೈಶಾಲಿ ಅವರಿಂದ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ಹಂಪಿ ಅವರ ಅನುಭವ, ವೈಶಾಲಿ ಅವರ ನಿರ್ಭೀತ ರೀತಿಯ ಆಟ ಉಪಯೋಗಕ್ಕೆ ಬರಬಹುದೆಂಬ ನಿರೀಕ್ಷೆ ಹಲವರಲ್ಲಿತ್ತು. ಆದರೆ ಮೊದಲ ಏಳು ಪಂದ್ಯಗಳಲ್ಲಿ ಅಂಥದ್ದೇನೂ ಕಂಡಿಲ್ಲ.

ಏಳು ಪಂದ್ಯಗಳ ನಂತರ ಇಬ್ಬರೂ ತಲಾ 2.5 ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಅಗ್ರಸ್ಥಾನದಲ್ಲಿರುವ ಝೊಂಗ್‌ಯಿ ತಾನ್‌ ಐದು ಪಾಯಿಂಟ್ಸ್ ಕಲೆಹಾಕಿದ್ದಾರೆ. ಚೀನಾದ ಅವರನ್ನು ಬೆಂಬತ್ತಿರುವ ರಷ್ಯಾ ಆಟಗಾರ್ತಿ ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ ಅವರು ನಾಲ್ಕೂವರೆ ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ.

ಕೆಲವು ಗೆಲುವುಗಳೊಂದಿಗೆ ಪುಟಿದೇಳುವ ಅವಕಾಶ ಭಾರತದ ಆಟಗಾರ್ತಿಯರಿಗೆ ಇದೆ. ಎಂಟನೇ ಸುತ್ತಿನಲ್ಲಿ ಹಂಪಿ ಮತ್ತು ವೈಶಾಲಿ ಮುಖಾಮುಖಿ ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT