ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೂಟಿಂಗ್: ಮನು ಭಾಕರ್‌ಗೆ ಜಯ

ಒಲಿಂಪಿಕ್ ಆಯ್ಕೆ ಟ್ರಯಲ್ಸ್
Published 19 ಮೇ 2024, 22:30 IST
Last Updated 19 ಮೇ 2024, 22:30 IST
ಅಕ್ಷರ ಗಾತ್ರ

ಭೋಪಾಲ್: ಒಲಿಂಪಿಯನ್ ಮನು ಭಾಕರ್ ಅವರು ಒಲಿಂಪಿಕ್‌ ಆಯ್ಕೆ ಟ್ರಯಲ್ಸ್‌ನ ಅಂತಿಮ ದಿನವಾದ ಭಾನುವಾರ ಮಹಿಳೆಯರ 10 ಮೀಟರ್ ರೈಫಲ್‌/ ಏರ್‌ಪಿಸ್ತೂಲ್‌ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ಯಶಸ್ವಿ ಕ್ರೀಡಾಪಟುವಾಗಿ  ಹೊರಹೊಮ್ಮಿದರು. 

ಒಟ್ಟಾರೆ ಎರಡು ಸ್ಪರ್ಧೆಗಳ ಟ್ರಯಲ್ಸ್‌ನಲ್ಲಿ ಮನು ಅವರಿಗೆ ನಾಲ್ಕನೇ ಗೆಲುವು. ಮತ್ತೊಂದು ಮಹಿಳೆಯರ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್.

ಮಧ್ಯಪ್ರದೇಶದ ರಾಜ್ಯ ಶೂಟಿಂಗ್ ಅಕಾಡೆಮಿ ರೇಂಜ್‌ನಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ಮನು (240.8)ಮೊದಲ ಸ್ಥಾನ ಪಡೆದರೆ, ಹಾಂಗೌಝೌ ಏಷ್ಯನ್ ಗೇಮ್ಸ್ ಚಾಂಪಿಯನ್ ಪಾಲಕ್ ಎರಡನೇ ಹಾಗೂ ರಿದಮ್ ಸಂಗ್ವಾನ್ ಮೂರನೇ ಸ್ಥಾನ ಗಳಿಸಿದರು.

ಇದಕ್ಕೂ ಮುನ್ನ ಎಲವೆನಿಲ್ ವಲರಿವನ್ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ 254.3 ಅಂಕಗಳೊಂದಿಗೆ ಗೆದ್ದರು. ಇದು ಈ ತಿಂಗಳು ಬಾಕುವಿನಲ್ಲಿ ನಡೆದ ಐಎಸ್ಎಸ್ಎಫ್ ವಿಶ್ವಕಪ್‌ನಲ್ಲಿ ಚೀನಾದ ಹಾನ್ ಜಿಯಾಯು ಸ್ಥಾಪಿಸಿದ ವಿಶ್ವ ದಾಖಲೆ 254.0 ಕ್ಕಿಂತ 0.3 ಹೆಚ್ಚಾಗಿದೆ. ರಮಿತಾ (253.3), ಮೆಹುಲಿ ಘೋಷ್ (230.3) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಪುರುಷರ ಏರ್ ರೈಫಲ್‌ನಲ್ಲಿ ದಿವ್ಯಾಂಶ್ ಪನ್ವಾರ್ 253.3 ಅಂಕಗಳೊಂದಿಗೆ ಗೆಲುವು ಸಾಧಿಸಿದರು. ಅರ್ಜುನ್ ಬಾಬುಟಾ (250.0) ಮತ್ತು ರುದ್ರಾಕ್ಷ ಪಾಟೀಲ್ (229.5) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಪುರುಷರ 10 ಮೀಟರ್ ಏರ್ ಪಿಸ್ತೂಲ್ ಫೈನಲ್‌ನಲ್ಲಿ ರವೀಂದರ್ ಸಿಂಗ್ 242.2 ಅಂಕಗಳೊಂದಿಗೆ ವಿಜಯಶಾಲಿಯಾದರು. ವರುಣ್ ತೋಮರ್ (239.4) ದ್ವಿತೀಯ ಮತ್ತು ಸರಬ್ಜೋತ್ ಸಿಂಗ್ (218.9) ತೃತೀಯ ಸ್ಥಾನ ಗಳಿಸಿದರು.

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಶೂಟಿಂಗ್ ತಂಡವನ್ನು ಆಯ್ಕೆ ಮಾಡಲು ಭಾರತ ರಾಷ್ಟ್ರೀಯ ರೈಫಲ್‌ ಅಸೋಸಿಯೇಷನ್‌ (ಎನ್‌ಆರ್‌ಎಐ) ನಾಲ್ಕು ಟ್ರಯಲ್ಸ್‌ಗಳ ಸರಣಿಯನ್ನು ನಡೆಸುತ್ತಿದೆ. ಮೊದಲ ಮೂರು ಸ್ಥಾನ ಪಡೆದವರು ಒಲಿಂಪಿಕ್ಸ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮ್ಯೂನಿಚ್‌ನಲ್ಲಿ (ಮೇ 31-ಜೂನ್ 08) ನಡೆಯಲಿರುವ ಐಎಸ್ಎಸ್ಎಫ್ ವಿಶ್ವಕಪ್ ರೈಫಲ್/ಪಿಸ್ತೂಲ್‌ನಲ್ಲಿ ಭಾರತದ ಶೂಟರ್‌ಗಳು ಕಣಕ್ಕಿಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT