ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೂಟಿಂಗ್‌ನಲ್ಲಿ ವರುಣ್, ಇಶಾಗೆ ಚಿನ್ನ: ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ

Published 8 ಜನವರಿ 2024, 14:12 IST
Last Updated 8 ಜನವರಿ 2024, 14:12 IST
ಅಕ್ಷರ ಗಾತ್ರ

ಜಕಾರ್ತ: ಭಾರತದ ಯುವ ಶೂಟರ್‌ಗಳಾದ ವರುಣ್ ತೋಮರ್ ಮತ್ತು ಇಶಾ ಸಿಂಗ್ ಸೋಮವಾರ ಇಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಈ ಗೆಲುವಿನೊಂದಿಗೆ ಇಬ್ಬರು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಪ್ಯಾರಿಸ್‌ಗೆ ತೆರಳುವ ಭಾರತೀಯ ಶೂಟರ್‌ಗಳ ಸಂಖ್ಯೆ 15 ತಲುಪಿದೆ. ಇದು ಟೋಕಿಯೊ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದ ಶೂಟರ್‌ಗಳ ದಾಖಲೆ ಸಂಖ್ಯೆಯನ್ನು ಸರಿಗಟ್ಟಿದೆ.

ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ನಡೆಯಲಿದ್ದು, ಇದಕ್ಕೆ ಮೊದಲು ನಡೆಯುವ ಅರ್ಹತಾ ಟೂರ್ನಿಗಳ ಮೂಲಕ ಭಾರತದ ಸ್ಪರ್ಧಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದ.

ಕೂಟದ ಮೊದಲ ದಿನವಾದ ಸೋಮವಾರ ಭಾರತ ಎರಡು ತಂಡ ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದುಕೊಂಡಿತು.

ಫೈನಲ್‌ನಲ್ಲಿ 20 ವರ್ಷದ ತೋಮರ್ 239.6 ಅಂಕ ಗಳಿಸಿ ಅಗ್ರಸ್ಥಾನ ಪಡೆದರೆ, ಅರ್ಜುನ್ ಚೀಮಾ 237.3 ಅಂಕಗಳೊಂದಿಗೆ ಬೆಳ್ಳಿ ಪದಕ ಗೆದ್ದರು. ಮಂಗೋಲಿಯಾದ ದವಾಖುವು ಎಂಖ್ತೈವನ್ (217.2) ಕಂಚಿನ ಪದಕ ಗೆದ್ದರು.

ಇದಕ್ಕೂ ಮುನ್ನ ತೋಮರ್ (586), ಚೀಮಾ (579) ಮತ್ತು ಉಜ್ವಲ್ ಮಲಿಕ್ (575) ಅವರಿದ್ದ ಭಾರತ ತಂಡ ಒಟ್ಟು 1740 ಅಂಕ ಗಳಿಸಿ 10 ಮೀಟರ್ ಏರ್ ಪಿಸ್ತೂಲ್ ಚಿನ್ನ ಗೆದ್ದರೆ, ಇರಾನ್ ಮತ್ತು ಕೊರಿಯಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದವು.

ಮಹಿಳೆಯರ ವಿಭಾಗದಲ್ಲಿ 18 ವರ್ಷದ ಇಶಾ 243.1 ಅಂಕಗಳೊಂದಿಗೆ ಚಿನ್ನ ಗೆದ್ದರು. ಪಾಕಿಸ್ತಾನದ ಕಿಶ್ಮಾಲಾ ತಲಾತ್ (236.3) ಬೆಳ್ಳಿ ಗೆದ್ದರೆ, ಇಶಾ ಅವರ ಸಹವರ್ತಿ ರಿದಮ್ ಸಾಂಗ್ವಾನ್ (214.5) ಕಂಚಿನ ಪದಕ ಗೆದ್ದರು.

ಇಶಾ, ರಿದಮ್ ಮತ್ತು ಸುರಭಿ ರಾವ್ ಒಟ್ಟು 1736 ಅಂಕಗಳೊಂದಿಗೆ ತಂಡ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು.

ಪ್ಯಾರಿಸ್ ಕೋಟಾ ಹೊರತುಪಡಿಸಿ 26 ದೇಶಗಳ 385 ಕ್ರೀಡಾಪಟುಗಳು 256 ಪದಕಗಳಿಗಾಗಿ (84 ಚಿನ್ನ, 84 ಬೆಳ್ಳಿ ಮತ್ತು 88 ಕಂಚಿನ ಪದಕಗಳು) ಜಕಾರ್ತಾದ ಸೆನಾಯನ್ ಶೂಟಿಂಗ್ ರೇಂಜ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT