ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಚರಿ: ಸೆಮಿಗೆ ದೀಪಿಕಾ

ವಿವಿಧ ವಿಭಾಗಗಳಲ್ಲಿ ಭಾರತಕ್ಕೆ ನಾಲ್ಕು ಪದಕ ಖಚಿತ
Published 26 ಏಪ್ರಿಲ್ 2024, 16:17 IST
Last Updated 26 ಏಪ್ರಿಲ್ 2024, 16:17 IST
ಅಕ್ಷರ ಗಾತ್ರ

ಶಾಂಘೈ : ಒಲಿಂಪಿಯನ್ ಆರ್ಚರಿಪಟು ದೀಪಿಕಾ ಕುಮಾರಿ ಅವರು ಕೊರಿಯಾದ ಜಿಯೊನ್ ಹುನ್ಯುಂಗ್ ಅವರನ್ನು ಸೋಲಿಸಿ ವಿಶ್ವಕಪ್ ಆರ್ಚರಿಯಲ್ಲಿ  ಸೆಮಿಫೈನಲ್‌ ಪ್ರವೇಶಿಸಿದರು. ಕಂಪೌಂಡ್ ವಿಭಾಗದಲ್ಲಿ ಸ್ಪರ್ಧಿಗಳು ಭಾರತಕ್ಕೆ ನಾಲ್ಕನೇ ಪದಕವನ್ನು ಖಚಿತಪಡಿಸಿದರು.

ಮೂರು ಬಾರಿಯ ಒಲಿಂಪಿಯನ್, ವಿಶ್ವ ಕ್ರಮಾಂಕದಲ್ಲಿ 142ನೇ ಸ್ಥಾನದಲ್ಲಿರುವ ದೀಪಿಕಾ, ಮಹಿಳೆಯರ ರಿಕರ್ವ್ ವೈಯಕ್ತಿಕ ಕ್ವಾರ್ಟರ್ ಫೈನಲ್‌ನಲ್ಲಿ ಜಿಯೊನ್ ಅವರನ್ನು 6-4 (27-28, 27-27, 29-28, 29-27, 28-28) ಅಂತರದಿಂದ ಸೋಲಿಸಿದರು. ಮಗುವಿನ ತಾಯಿಯಾದ ನಂತರ ವಿಶ್ವ ಸ್ಪರ್ಧಾ ಕಣಕ್ಕೆ ಮರಳಿರುವ ಅವರು ಭರವಸೆಯ ಹೆಜ್ಜೆಗಳನ್ನಿಟ್ಟರು. 

ಮೊದಲ ಸೆಟ್ ಅನ್ನು 27-28 ರಿಂದ ಸೋತಿದ್ದ ದೀಪಿಕಾ, ಎರಡನೇ ಸೆಟ್ ಅನ್ನು 27-27ರಿಂದ  ಸಮಬಲಗೊಳಿಸಿದರು. ಕೇವಲ ಒಂದು ಅಂಕದ ಮೂಲಕ ಮೂರನೇ (29-28) ಸೆಟ್‌ ಗೆದ್ದರು. 

ದೀಪಿಕಾ ಅವರು 2021ರ ನಂತರ ಈಗ ಮತ್ತೊಮ್ಮೆ ಚಿನ್ನ ಗೆಲ್ಲುವ ಅವಕಾಶವಿದೆ. ಅದಕ್ಕಾಗಿ ಅವರು ಮುಂದಿನ ಹಂತದಲ್ಲಿ ಕೊರಿಯಾದ ಪ್ರತಿಸ್ಪರ್ಧಿಯನ್ನು ಸೋಲಿಸಬೇಕು. ಏಳನೇ ಶ್ರೇಯಾಂಕದ ಕೊರಿಯಾದ ನಾಮ್ ಸುಹ್ಯೋನ್ ಸೆಮಿಫೈನಲ್‌ನಲ್ಲಿ ದೀಪಿಕಾ ಅವರನ್ನು ಎದುರಿಸಲಿದ್ದಾರೆ.  ಎರಡನೇಯ ಸೆಮಿಯಲ್ಲಿ   ಅಗ್ರ ಶ್ರೇಯಾಂಕಿತ ವಿಶ್ವದ ಎರಡನೇ ರ‍್ಯಾಂಕ್‌ ಆಟಗಾರ್ತಿ, ಕೊರಿಯಾದ ಲಿಮ್ ಸಿಹ್ಯಾನ್ ಅವರು ಚೀನಾದ ಲಿ ಜಿಯಾಮನ್ ಅವರನ್ನು ಎದುರಿಸಲಿದ್ದಾರೆ. 

ಕಂಪೌಂಡ್‌ ಮಿಶ್ರ ತಂಡದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಅಭಿಷೇಕ್ ವರ್ಮಾ ಫೈನಲ್ ಪ್ರವೇಶಿಸಿದರು. ಮೆಕ್ಸಿಕನ್ ಎದುರಾಳಿಗಳಾದ ಆ್ಯಂಡ್ರಿಯಾ ಬೆಸೆರಾ ಮತ್ತು ಲಾಟ್ ಮ್ಯಾಕ್ಸಿಮೊ ಮೆಂಡೆಜ್ ಒರ್ಟಿಜ್ ವಿರುದ್ಧ 155-151 ಅಂಕಗಳ ಅಂತರದಲ್ಲಿ ಜಯ ಸಾಧಿಸಿದರು.

ಶನಿವಾರ ನಡೆಯಲಿರುವ ಚಿನ್ನದ ಪದಕದ ಹೋರಾಟದಲ್ಲಿ ಅವರು ಕೆಳಶ್ರೇಯಾಂಕದ ಎಸ್ಟೋನಿಯಾವನ್ನು ಎದುರಿಸಲಿದ್ದಾರೆ. ಒಟ್ಟಾರೆ ಭಾರತದ ಆರ್ಚರಿ ಸ್ಪರ್ಧಿಗಳು ‌ನಾಲ್ಕು ವಿಭಾಗಗಳಲ್ಲಿ ಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿದ್ದಾರೆ. 

ಜ್ಯೋತಿ ಮತ್ತು ಪ್ರಿಯಾಂಶ್ ಸೆಮಿಫೈನಲ್ ತಲುಪಿದ್ದಾರೆ. ಕಂಪೌಂಡ್‌ ವಿಭಾಗದಲ್ಲಿ ಪುರುಷರ, ಮಹಿಳಾ, ಮಿಶ್ರ ಮತ್ತು ಪುರುಷರ ರಿಕರ್ವ್ ವಿಭಾಗಗಳಲ್ಲಿ ಭಾರತ ತಂಡ ಚಿನ್ನದ ಪದಕದ ಸುತ್ತಿಗೆ ಪ್ರವೇಶಿಸಿವೆ.

ನಾಲ್ಕನೇ ಶ್ರೇಯಾಂಕಿತ ಭಾರತದ ರಿಕರ್ವ್ ಮಿಶ್ರ ಜೋಡಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಸೆಮಿಫೈನಲ್‌ನಲ್ಲಿ ಕೊರಿಯಾದ ಅಗ್ರ ಶ್ರೇಯಾಂಕಿತ ಜೋಡಿ ಲಿಮ್ ಮತ್ತು ಕಿಮ್ ವೂಜಿನ್ ವಿರುದ್ಧ 0-6 (38-39, 35-36, 36-38) ನೇರ ಸೆಟ್‌ಗಳಲ್ಲಿ ಸೋತಿತು. ಅವರು ಮೆಕ್ಸಿಕೊ ವಿರುದ್ಧ ಕಂಚಿನ ಪದಕಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT