ಏಷ್ಯನ್‌ ಕ್ರೀಡಾಕೂಟ: ಭಾರತಕ್ಕೆ ಮೊದಲ ಪದಕ ತಂದ ರವಿಕುಮಾರ್‌, ಅಪೂರ್ವಿ ಚಾಂಡೇಲಾ

7

ಏಷ್ಯನ್‌ ಕ್ರೀಡಾಕೂಟ: ಭಾರತಕ್ಕೆ ಮೊದಲ ಪದಕ ತಂದ ರವಿಕುಮಾರ್‌, ಅಪೂರ್ವಿ ಚಾಂಡೇಲಾ

Published:
Updated:

ಪಲೆಂಬಂಗ್‌ : ಅಪೂರ್ವಿ ಚಾಂಡೇಲಾ ಮತ್ತು ರವಿಕುಮಾರ್‌ ಜೋಡಿ ಭಾನುವಾರ ಜೆಎಸ್‌ಸಿ ಶೂಟಿಂಗ್‌ ರೇಂಜ್‌ನಲ್ಲಿ ಮೋಡಿ ಮಾಡಿತು.

10 ಮೀಟರ್ಸ್‌ ಏರ್‌ ರೈಫಲ್‌ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಪೂರ್ವಿ ಮತ್ತು ರವಿ ಅವರು ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದರೊಂದಿಗೆ ಭಾರತ 18ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಮೊದಲ ದಿನವೇ ಪದಕದ ಖಾತೆ ತೆರೆಯಿತು.

48 ಶಾಟ್ಸ್‌ಗಳ ಫೈನಲ್‌ನಲ್ಲಿ ಭಾರತದ ಜೋಡಿ 429.9 ಸ್ಕೋರ್‌ ಕಲೆಹಾಕಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು.

ಚೀನಾ ತೈಪೆಯ ಯಿಂಗ್‌ಶಿನ್‌ ಲಿನ್‌ ಮತ್ತು ಶಾವೊಚುವಾನ್‌ ಲು ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಈ ಜೋಡಿ 494.1 ಸ್ಕೋರ್‌ ಗಳಿಸಿ ಕೂಟ ದಾಖಲೆ ನಿರ್ಮಿಸಿತು.

ಈ ವಿಭಾಗದ ಬೆಳ್ಳಿಯ ಪದಕ ಚೀನಾದ ರುವೊಜು ಜಾವೊ ಮತ್ತು ಹಾವೊರನ್‌ ಯಾಂಗ್‌ ಅವರ ಪಾಲಾಯಿತು. ರುವೊಜು ಮತ್ತು ಯಾಂಗ್‌ 492.5 ಸ್ಕೋರ್‌ ಸಂಗ್ರಹಿಸಿ ಈ ಸಾಧನೆ ಮಾಡಿದರು.

ದಕ್ಷಿಣ ಕೊರಿಯಾದ ಎವುನ್‌ಹಿ ಜಂಗ್‌ ಮತ್ತು ಹೆವೊನ್‌ಜುನ್‌ ಕಿಮ್‌ (389.4) ಹಾಗೂ ಮಂಗೋಲಿಯಾದ ನಾಂದಿನ್‌ಜಾಯ ಗಾಂಕುಯಾಗ್‌ ಮತ್ತು ಬಯಾರಾ ನ್ಯಾನ್‌ತೈ (346.6) ಅವರು ಕ್ರಮವಾಗಿ ನಾಲ್ಕು ಮತ್ತು ಐದನೆ ಸ್ಥಾನಗಳೊಂದಿಗೆ ಸ್ಪರ್ಧೆ ಮುಗಿಸಿದರು.

ಜೈಪುರದ ಅಪೂರ್ವಿ ಏಷ್ಯನ್‌ ಕೂಟದಲ್ಲಿ ಗೆದ್ದ ಮೊದಲ ಪದಕ ಇದಾಗಿದೆ. 25 ವರ್ಷ ವಯಸ್ಸಿನ ಈ ಶೂಟರ್‌ 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಕ್ರೀಡಾಕೂಟದ 10 ಮೀಟರ್ಸ್‌ ಏರ್‌ ರೈಫಲ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಉತ್ತರ ಪ್ರದೇಶದ ರವಿ, ಏಷ್ಯನ್‌ ಕೂಟದಲ್ಲಿ ಗೆದ್ದ ಎರಡನೆ ಕಂಚಿನ ಪದಕ ಇದಾಗಿದೆ. ನಾಲ್ಕು ವರ್ಷಗಳ ಹಿಂದೆ (2014) ಇಂಚೆನ್‌ನಲ್ಲಿ ನಡೆದಿದ್ದ ಕೂಟದ ಪುರುಷರ 10 ಮೀಟರ್ಸ್‌ ಏರ್‌ ರೈಫಲ್‌ ತಂಡ ವಿಭಾಗದಲ್ಲಿ ಅವರು ಕಂಚು ಗೆದ್ದಿದ್ದರು. ಈ ಬಾರಿಯ ಕಾಮನ್‌ವೆಲ್ತ್‌ ಕೂಟದ ವೈಯಕ್ತಿಕ ವಿಭಾಗದಲ್ಲೂ ಕಂಚಿನ ಪದಕದ ಸಾಧನೆ ಮಾಡಿದ್ದರು.

50 ನಿಮಿಷಗಳ ಅವಧಿಯ ಅರ್ಹತಾ ಹಂತದಲ್ಲಿ ಅಪೂರ್ವಿ ಮತ್ತು ರವಿ ಮಿಂಚಿದ್ದರು. 40 ಶಾಟ್ಸ್‌ಗಳಿಂದ 835.3 ಸ್ಕೋರ್‌ ಕಲೆಹಾಕಿ ಎರಡನೆ ಸ್ಥಾನದೊಂದಿಗೆ ಫೈನಲ್‌ಗೆ ಅರ್ಹತೆ ಗಳಿಸಿದ್ದರು.

ದಕ್ಷಿಣ ಕೊರಿಯಾದ ಎವುನ್‌ಹಿ ಜಂಗ್‌ ಮತ್ತು ಹೆವೊನ್‌ಜುನ್‌ ಕಿಮ್‌ ಅವರು ಅಗ್ರಸ್ಥಾನದೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದ್ದರು. ಈ ಜೋಡಿ 836.7 ಸ್ಕೋರ್‌ ಕಲೆಹಾಕಿತ್ತು.

ಮಂಗೋಲಿಯಾ (832.1 ಸ್ಕೋರ್‌), ಚೀನಾ (831.1) ಮತ್ತು ಚೀನಾ ತೈಪೆ (829.8) ಜೋಡಿಗಳು ಕ್ರಮವಾಗಿ ಮೂರರಿಂದ ಐದನೆ ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದವು.

ಮನು–ಅಭಿಷೇಕ್‌ ಜೋಡಿಗೆ ನಿರಾಸೆ: ಪಿಸ್ತೂಲ್‌ ಮಿಶ್ರ ತಂಡ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಮನು ಭಾಕರ್‌ ಮತ್ತು ಅಭಿಷೇಕ್‌ ವರ್ಮಾ, ಫೈನಲ್‌ಗೆ ಅರ್ಹತೆ ಗಳಿಸಲು ವಿಫಲರಾದರು.

ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿ 80 ಶಾಟ್ಸ್‌ಗಳಿಂದ 759 ಪಾಯಿಂಟ್ಸ್‌ ಕಲೆಹಾಕಲಷ್ಟೇ ಶಕ್ತವಾಯಿತು. ಕಜಕಸ್ತಾನದ ಜವುರೆಸ್‌ ಬೈಬುಸ್ಸಿನೋವಾ ಮತ್ತು ವ್ಲಾದಿಮಿರ್‌ ಐಸಾಚೆಂಕೊ ಅವರೂ ಇಷ್ಟೇ ಪಾಯಿಂಟ್ಸ್‌ ಸಂಗ್ರಹಿಸಿದ್ದರು. ಅತಿ ಹೆಚ್ಚು ಬಾರಿ 10 ಪಾಯಿಂಟ್ಸ್‌ಗಳಿಗೆ (25 ಸಲ) ಗುರಿ ಇಟ್ಟಿದ್ದ ಕಜಕಸ್ತಾನದ ಜೋಡಿ ಐದನೆ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿತು.

‘ಮನು, ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರಲಿಲ್ಲ. ಅವರು ಕೋಪ ಕಡಿಮೆ ಮಾಡಿಕೊಳ್ಳುವುದು ಒಳಿತು. ಮಹತ್ವದ ಕೂಟಗಳಲ್ಲಿ ಒತ್ತಡವನ್ನು ಹೇಗೆ ಮೀರಿ ನಿಲ್ಲಬೇಕು ಎಂಬುದನ್ನು ಅಭಿಷೇಕ್‌ ಕಲಿಯಬೇಕು’ ಎಂದು ಪಿಸ್ತೂಲ್‌ ವಿಭಾಗದ ಕೋಚ್‌ ಜಸ್ಪಾಲ್‌ ರಾಣಾ ತಿಳಿಸಿದರು.

ಶ್ರೇಯಸಿಗೆ ಎರಡನೆ ಸ್ಥಾನ: ಮಹಿಳೆಯರ ಟ್ರ್ಯಾಪ್‌ ವಿಭಾಗದಲ್ಲಿ ಸ್ಪರ್ಧಿಸಿದ್ದ ಶ್ರೇಯಸಿ ಸಿಂಗ್‌ ಮತ್ತು ಸೀಮಾ ತೋಮರ್‌ ಅವರು ಅರ್ಹತಾ ಸುತ್ತಿನಲ್ಲಿ ಉತ್ತಮ ಸಾಮರ್ಥ್ಯ ತೋರಿದರು.

ಶ್ರೇಯಸಿ ಅವರು ಮೂರು ಸುತ್ತುಗಳಿಂದ 71 ಸ್ಕೋರ್‌ ಕಲೆಹಾಕಿ ಎರಡನೆ ಸ್ಥಾನ ತಮ್ಮದಾಗಿಸಿಕೊಂಡರು. ಸೀಮಾ ಕೂಡಾ ಇಷ್ಟೇ ಸ್ಕೋರ್‌ ಗಳಿಸಿ ನಾಲ್ಕನೆ ಸ್ಥಾನದಲ್ಲಿ ಕಾಣಿಸಿಕೊಂಡರು.

ಪುರುಷರ ಟ್ರ್ಯಾಪ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಮಾನವ್‌ಜಿತ್‌ ಸಿಂಗ್‌ ಸಂಧು ಅಗ್ರಸ್ಥಾನ ಗಳಿಸಿದರು. ಅವರು 72 ಸ್ಕೋರ್‌ ಸಂಗ್ರಹಿಸಿ ಗಮನ ಸೆಳೆದರು.

71 ಸ್ಕೋರ್‌ ಗಳಿಸಿದ ಲಕ್ಷ್ಯ ಐದನೆ ಸ್ಥಾನ ತಮ್ಮದಾಗಿಸಿಕೊಂಡರು.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !