ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್ ಫೈನಲ್‌ಗೆ ಸಿಂಧು, ಶ್ರೀಕಾಂತ್‌

ಇಂಡೊನೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್ ಟೂರ್ನಿ: ಕೆಂಟಾ ನಿಶಿಮೋಟೊಗೆ ನಿರಾಸೆ
Last Updated 24 ಜನವರಿ 2019, 18:27 IST
ಅಕ್ಷರ ಗಾತ್ರ

ಜಕಾರ್ತ : ನೇರ ಗೇಮ್‌ಗಳಿಂದ ಎದುರಾಳಿಗಳನ್ನು ಮಣಿಸಿದ ಭಾರತದ ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಇಂಡೊನೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು.

ಗುರುವಾರ ನಡೆದ ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತೆ ಸಿಂಧು, ಸ್ಥಳೀಯ ಆಟಗಾರ್ತಿ ಗ್ರೆಗೋರಿಯಾ ಮರಿಸ್ಕ ತುಂಜಂಗ್‌ ಎದುರು 23–21, 21–7ರಿಂದ ಗೆದ್ದರು. ಕೇವಲ 37 ನಿಮಿಷಗಳಲ್ಲೇ ಎದುರಾಳಿಯನ್ನು ಮಣಿಸಿದ ಸಿಂಧು ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಕರೋಲಿನಾ ಮರಿನ್ ಅವರ ಸವಾಲನ್ನು ಎದುರಿಸಬೇಕಾಗಿದೆ.

ಎಂಟನೇ ಶ್ರೇಯಾಂಕದ ಕಿದಂಬಿ ಶ್ರೀಕಾಂತ್‌, ಏಷ್ಯಾ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದಿದ್ದ ಜಪಾನ್‌ನ ಕೆಂಟಾ ನಿಶಿಮೋಟೊ ಎದುರು 21–14, 21–9ರಿಂದ ಜಯಿಸಿದರು. ಎಂಟರ ಘಟ್ಟದ ಪಂದ್ಯದಲ್ಲಿ ಅವರು ಜೊನಾಥನ್ ಕ್ರಿಸ್ಟಿ ಅಥವಾ ಶಿ ಯೂಕಿ ಅವರನ್ನು ಎದುರಿಸುವರು.

ಮೊದಲ ಗೇಮ್‌ನಲ್ಲಿ ಕಠಿಣ ಸವಾಲು: ಸಿಂಧುಗೆ ಮೊದಲ ಗೇಮ್‌ನಲ್ಲಿ ತುಂಜುಂಗ್‌ ಪ್ರಬಲ ಪೈಪೋಟಿ ಒಡ್ಡಿದರು. ಆದರೆ ಎರಡನೇ ಗೇಮ್‌ನಲ್ಲಿ ಪೂರ್ಣ ಆಧಿಪತ್ಯ ಸ್ಥಾಪಿಸಿದರು. ಇದು ತುಂಜುಂಗ್ ಎದುರು ಅವರು ಆಡಿದ ಐದನೇ ಪಂದ್ಯವಾಗಿದೆ. ಈ ಆಟಗಾರ್ತಿಯ ಎದುರು ಸಿಂಧು ಈ ವರೆಗೆ ಒಂದು ಪಂದ್ಯವನ್ನೂ ಸೋತಿಲ್ಲ.

ಈ ಹಿಂದೆ ಮುಖಾಮುಖಿಯಾಗಿದ್ದಾಗ ಕೆಂಟಾ ನಿಶಿಮೋಟೊಗೆ ಮಣಿದಿದ್ದ ಶ್ರೀಕಾಂತ್ ಗುರುವಾರ ಅಮೋಘ ಆಟವಾಡಿದರು. ಮೊದಲ ಗೇಮ್‌ನ ಆರಂಭದಲ್ಲಿ 2–5ರ ಹಿನ್ನಡೆ ಅನುಭವಿಸಿದರೂ ತಿರುಗೇಟು ನೀಡಿದ ಅವರು ವಿರಾಮದ ವೇಳೆ 11–8ರಿಂದ ಮುನ್ನಡೆದರು. ನಂತರ ಸುಲಭವಾಗಿ ಗೇಮ್ ಗೆದ್ದರು.

ಎರಡನೇ ಗೇಮ್‌ನಲ್ಲಿ ಆರಂಭದಿಂದಲೇ ಎದುರಾಳಿಯನ್ನು ದಂಗುಬಡಿಸಿ 6–0 ಮುನ್ನಡೆ ಸಾಧಿಸಿದರು. ನಂತರ ಇದು 18–8ಕ್ಕೆ ಏರಿತು. ಹೀಗಾಗಿ ಅರ್ಧ ತಾಸಿನಲ್ಲಿ ಪಂದ್ಯ ಮುಗಿಸಲು ಅವರಿಗೆ ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT