ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಹೊಸ ಸವಾಲಿಗೆ ಸೈನಾ, ಸಮೀರ್‌ ಸನ್ನದ್ಧ

ಸೋಮವಾರ, ಮಾರ್ಚ್ 25, 2019
24 °C
12ರಿಂದ ಅರ್ಹತಾ ಸುತ್ತಿನ ಪಂದ್ಯಗಳು

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌: ಹೊಸ ಸವಾಲಿಗೆ ಸೈನಾ, ಸಮೀರ್‌ ಸನ್ನದ್ಧ

Published:
Updated:
Prajavani

ಬಾಸೆಲ್‌, ಸ್ವಿಟ್ಜರ್‌ಲೆಂಡ್‌: ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದ ಸೈನಾ ನೆಹ್ವಾಲ್‌ ಮತ್ತು ಸಮೀರ್‌ ವರ್ಮಾ, ಹೊಸ ಸವಾಲು ಎದುರಿಸಲು ಸನ್ನದ್ಧರಾಗಿದ್ದಾರೆ.

ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೈನಾ ಮತ್ತು ಸಮೀರ್‌ ಭಾರತದ ಭರವಸೆಯಾಗಿದ್ದು, ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದಾರೆ. ಮಂಗಳವಾರದಿಂದ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ.

ಸೈನಾ, ಈ ವರ್ಷ ಪಾಲ್ಗೊಳ್ಳುತ್ತಿರುವ ನಾಲ್ಕನೇ ಬಿಡಬ್ಲ್ಯುಎಫ್‌ ವಿಶ್ವ ಟೂರ್‌ ಸೂಪರ್‌ 300 ಟೂರ್ನಿ ಇದಾಗಿದೆ. ಇಂಡೊನೇಷ್ಯಾ ಮಾಸ್ಟರ್ಸ್‌ನಲ್ಲಿ ಚಾಂಪಿಯನ್‌ ಆಗಿದ್ದ ಅವರು, ಮಲೇಷ್ಯಾ ಮಾಸ್ಟರ್ಸ್‌ ಮತ್ತು ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಸೆಮಿಫೈನಲ್‌ ಮತ್ತು ಕ್ವಾರ್ಟರ್‌ ಫೈನಲ್‌ನಲ್ಲಿ ಸೋತಿದ್ದರು.

ಮಹಿಳಾ ಸಿಂಗಲ್ಸ್‌ ವಿಭಾಗದಲ್ಲಿ ಕಣಕ್ಕಿಳಿಯಲಿರುವ ಸೈನಾ, ಅರ್ಹತಾ ಹಂತದಲ್ಲಿ ಗೆದ್ದು ಬಂದ ಆಟಗಾರ್ತಿಯ ವಿರುದ್ಧ ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ.

ಭಾರತದ ಆಟಗಾರ್ತಿ, ಈ ಟೂರ್ನಿಯಲ್ಲಿ ಮೂರನೇ ಪ್ರಶಸ್ತಿ ಜಯಿಸುವತ್ತ ಚಿತ್ತ ಹರಿಸಿದ್ದಾರೆ. 2011 ಮತ್ತು 2012ರಲ್ಲಿ  ಟ್ರೋಫಿಗೆ ಮುತ್ತಿಕ್ಕಿದ್ದರು. ಟೂರ್ನಿಯಲ್ಲಿ ಸೈನಾ, ಮೂರನೇ ಶ್ರೇಯಾಂಕ ಪಡೆದಿದ್ದಾರೆ.

ವೈಷ್ಣವಿ ಜಕ್ಕಾ ರೆಡ್ಡಿ, ಮೊದಲ ಸುತ್ತಿನಲ್ಲಿ ಎಸ್ಟೋನಿಯಾದ ಕ್ರಿಸ್ಟಿನಾ ಕುಬಾ ಎದುರು ಆಡಲಿದ್ದಾರೆ.

ಪುರುಷರ ಸಿಂಗಲ್ಸ್‌ ವಿಭಾಗದ ಆರಂಭಿಕ ಸುತ್ತಿನಲ್ಲಿ ಹಾಲಿ ಚಾಂಪಿಯನ್‌ ಸಮೀರ್‌, ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಆಟಗಾರನ ವಿರುದ್ಧ ಹೋರಾಡಲಿದ್ದಾರೆ.

ಮೊದಲ ಸುತ್ತಿನಲ್ಲಿ ಬಿ.ಸಾಯಿ ಪ್ರಣೀತ್‌ಗೆ ಇಂಗ್ಲೆಂಡ್‌ನ ರಾಜೀವ್‌ ಔಸೆಫ್‌ ಸವಾಲು ಎದುರಾಗಲಿದೆ.

ಪರುಪಳ್ಳಿ ಕಶ್ಯಪ್‌ ಮತ್ತು ಶುಭಂಕರ್‌ ಡೇ ಅವರೂ ಸಿಂಗಲ್ಸ್‌ ವಿಭಾಗದಲ್ಲಿ ಪ್ರಶಸ್ತಿ ಜಯಿಸುವ ಕನಸು ಹೊತ್ತಿದ್ದಾರೆ.

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ ಅವರು ಮಹಿಳಾ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಪೂಜಾ ದಂಡು ಮತ್ತು ಸಂಜನಾ ಸಂತೋಷ್‌ ಕೂಡಾ ಕಣದಲ್ಲಿದ್ದಾರೆ.

ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಮತ್ತು ಬಿ.ಸುಮೀತ್‌ ರೆಡ್ಡಿ ಭಾರತದ ಭರವಸೆಯಾಗಿದ್ದಾರೆ. ಎಂ.ಆರ್‌.ಅರ್ಜುನ್‌ ಮತ್ತು ರಾಮಚಂದ್ರನ್‌ ಶ್ಲೋಕ್‌ ಅವರೂ ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದಾರೆ.

ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಆಡಲಿದ್ದಾರೆ.

ರಿಯಾ ಮುಖರ್ಜಿ ಮತ್ತು ವೃಷಾಲಿ ಗುಮ್ಮಾಡಿ ಅವರು ಸಿಂಗಲ್ಸ್‌ ವಿಭಾಗದ ಅರ್ಹತಾ ಸುತ್ತಿನಲ್ಲಿ ಅಂಗಳಕ್ಕಿಳಿಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !