ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸೇವೆ ನನ್ನ ‘ಕೈ’ ಹಿಡಿಯಲಿದೆ

ರಾಯಬಾಗ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪಕುಮಾರ್ ಮಾಳಗಿ
Last Updated 29 ಏಪ್ರಿಲ್ 2018, 5:22 IST
ಅಕ್ಷರ ಗಾತ್ರ

ಬೆಳಗಾವಿ: ‘ಹೋದ ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರಿಗೆ ವಿವಿಧ ಸೌಲಭ್ಯ ಕಲ್ಪಿಸಲು ನೆರವಾಗಿದ್ದೇನೆ. ಇದು ಈ ಬಾರಿ ನನ್ನ ಕೈಹಿಡಿಯಲಿದೆ’ ಎಂದು ರಾಯಬಾಗ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪಕುಮಾರ್‌ ಮಾಳಗಿ ವಿಶ್ವಾಸ ವ್ಯಕ್ತಪಡಿಸಿದರು.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ 2013ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅವರು ಪ್ರಬಲ ಪೈಪೋಟಿ ನೀಡಿ 36,706 ಮತಗಳನ್ನು ಪಡೆದಿದ್ದರು. ಗೆದ್ದಿದ್ದ ಬಿಜೆಪಿಯ ದುರ್ಯೋಧನ ಐಹೊಳೆ 37,355 ಮತಗಳನ್ನು ಗಳಿಸಿದ್ದರು. ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. ಆಕಾಂಕ್ಷಿಗಳಾಗಿದ್ದ ಸುಕುಮಾರ ಕಿರಣಗಿ, ಮಹಾವೀರ ಮೋಹಿತೆ ಅವರನ್ನು ಹಿಂದಿಕ್ಕಿ, ಟಿಕೆಟ್‌ ಗಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಚಾರದಲ್ಲೂ ತೊಡಗಿದ್ದಾರೆ. ಈ ನಡುವೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಾವೀರ ಮೋಹಿತೆ, ವರಿಷ್ಠರ ಸೂಚನೆಯ ಮೇರೆಗೂ ಕಣದಲ್ಲಿಯೇ ಉಳಿದಿದ್ದಾರೆ.‌ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಭಿನ್ನಮತದ ಬಿಸಿ ಹೇಗಿದೆ?

ಭಿನ್ನಮತವೇ ಇಲ್ಲ. ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷದ ಅಧಿಕೃತ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುತ್ತಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗುತ್ತಿದ್ದೇನೆ. ಯಾರೋ ಒಬ್ಬರು ಪಕ್ಷೇತರರಾಗಿ ನಿಂತಿದ್ದಾರೆ. ಅದರಿಂದ ನಮಗೇನೂ ಪರಿಣಾಮವಾಗುವುದಿಲ್ಲ, ಫಲಿತಾಂಶದಲ್ಲಿ ವ್ಯತ್ಯಾಸವೂ ಆಗುವುದಿಲ್ಲ. ಠೇವಣಿ ಕಳೆದುಕೊಳ್ಳುತ್ತಾರಷ್ಟೆ.

ಈ ವಿಶ್ವಾಸಕ್ಕೆ ಏನು ಕಾರಣ?

ಕ್ಷೇತ್ರದ ಜನರಿಂದ ದೊರೆಯುತ್ತಿರುವ ಬೆಂಬಲದಿಂದ ಈ ವಿಶ್ವಾಸ ಬಂದಿದೆ. ಹಲವು ವರ್ಷಗಳಿಂದಲೂ ನಾನು ಮಾಡುತ್ತಿರುವ ಕೆಲಸಗಳು ಕೈಹಿಡಿಯಲಿವೆ. ಕಳೆದ ಬಾರಿ ಪಕ್ಷೇತರನಾಗಿ ಸ್ಪರ್ಧಿಸಿ ಸೋತಿದ್ದೆ. ಈ ಬಾರಿ ಕಾಂಗ್ರೆಸ್‌ಗೆ ಸೇರಿರುವುದರಿಂದ ಹೆಚ್ಚಿನ ಬಲ ಬಂದಿದೆ. ನನ್ನ ಅಬಾಜಿ ಪ್ರತಿಷ್ಠಾನದ ಮೂಲಕ ಕೈಗೊಂಡ ವಿವಿಧ ಕಾರ್ಯಕ್ರಮಗಳು ಕೂಡ ನೆರವಾಗಲಿವೆ.

ಯಾವ ವಿಷಯಗಳನ್ನು ಹೇಳಿಕೊಂಡು ಮತ ಕೇಳುತ್ತೀರಿ?

ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಐದು ವರ್ಷಗಳಿಂದ ನಾನು ಮಾಡಿದ ಜನಸೇವೆ, ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ ಜನಪರ ಯೋಜನೆಗಳು, ಕ್ಷೇತ್ರಕ್ಕೆ ಆಗಿರುವ ನೆರವು, ಕೆರೆಗಳನ್ನು ತುಂಬಿಸಿದ ಯೋಜನೆ ಮೊದಲಾದವುಗಳನ್ನು ತಿಳಿಸಿ ಮತ ಕೇಳುತ್ತೇನೆ. ಸರ್ಕಾರದ ಒಂದಿಲ್ಲೊಂದು ಕಾರ್ಯಕ್ರಮಗಳು ಪ್ರತಿ ಕುಟುಂಬವನ್ನು ತಲುಪಿದೆ. ನನ್ನ ಸ್ವಂತ ಖರ್ಚಿನಲ್ಲಿ ಎರಡು ಟ್ಯಾಂಕರ್‌ಗಳನ್ನು ಒದಗಿಸಿದ್ದೇನೆ. ಈ ಟ್ಯಾಂಕರ್‌ಗಳ ಮೂಲಕ ಕರೋಶಿ, ನಾಗರಮುನ್ನೋಳಿ ಭಾಗಗಳಲ್ಲಿ ನಿತ್ಯವೂ ಹಲವು ಹಳ್ಳಿಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡಿಸುತ್ತಿದ್ದೇನೆ. ಕೆಲವೆಡೆ ಐದು ಬೋರ್‌ವೆಲ್‌ಗಳನ್ನು ಕೊರೆಸಿ, ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ.

ಕ್ಷೇತ್ರದಲ್ಲಿರುವ ಸಮಸ್ಯೆಗಳೇನು?

ಶಾಸಕರು ರಸ್ತೆ, ಚರಂಡಿ ನಿರ್ಮಾಣಕ್ಕಷ್ಟೇ ಆದ್ಯತೆ ನೀಡಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ನಿರೀಕ್ಷಿಸಿದಷ್ಟು ಒತ್ತು ಕೊಟ್ಟಿಲ್ಲ. ಇದರಿಂದಾಗಿ ಜನರು ಪರದಾಡುತ್ತಿದ್ದಾರೆ. ನೀರಾವರಿ ಸೌಲಭ್ಯ ವಂಚಿತ ಪ್ರದೇಶಗಳು ಸಾಕಷ್ಟಿವೆ. ಇದರಿಂದ ರೈತರು ಆರ್ಥಿಕವಾಗಿ ಸಬಲರಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಹಲವು ಕಡೆಗಳಲ್ಲಿ ಮೂಲಸೌಲಭ್ಯ ಕೊರತೆ ತಾಂಡವವಾಡುತ್ತಿದೆ.

ಆಯ್ಕೆಯಾದರೆ ನಿಮ್ಮ ಆದ್ಯತೆಗಳೇನು?

ಆಯ್ಕೆಯಾಗುವುದು ಖಚಿತ. ದೊಡ್ಡ ಅಂತರಕ್ಕಾಗಿ ಶ್ರಮಿಸುತ್ತಿದ್ದೇನೆ. ನಾಲೆಗಳನ್ನು ಪೂರ್ಣಗೊಳಿಸಬೇಕು. ಕುಡಿಯುವ ನೀರಿನ ನಿವಾರಣೆಗೆ ಶಾಶ್ವತ ಯೋಜನೆಗಳನ್ನು ರೂಪಿಸಬೇಕು ಎನ್ನುವ ಉದ್ದೇಶವಿದೆ.

ಯಾವ ವಿಷಯಗಳ ಆಧಾರದ ಮೇಲೆ ಮತ ಕೇಳುತ್ತೀರಿ?

ಕ್ಷೇತ್ರದಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಐದು ವರ್ಷಗಳಿಂದ ನಾನು ಮಾಡಿದ ಜನಸೇವೆ, ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ ಜನಪರ ಯೋಜನೆಗಳು, ಕ್ಷೇತ್ರಕ್ಕೆ ಆಗಿರುವ ನೆರವು, ಕೆರೆಗಳನ್ನು ತುಂಬಿಸಿದ ಯೋಜನೆ ಮೊದಲಾದವುಗಳನ್ನು ತಿಳಿಸಿ ಮತ ಕೇಳುತ್ತೇನೆ. ಸರ್ಕಾರದ ಒಂದಿಲ್ಲೊಂದು ಕಾರ್ಯಕ್ರಮಗಳು ಪ್ರತಿ ಕುಟುಂಬವನ್ನು ತಲುಪಿದೆ. ನನ್ನ ಸ್ವಂತ ಖರ್ಚಿನಲ್ಲಿ ಎರಡು ಟ್ಯಾಂಕರ್‌ಗಳನ್ನು ಒದಗಿಸಿದ್ದೇನೆ. ಈ ಟ್ಯಾಂಕರ್‌ಗಳ ಮೂಲಕ ಕರೋಶಿ, ನಾಗರಮುನ್ನೋಳಿ ಭಾಗಗಳಲ್ಲಿ ನಿತ್ಯವೂ ಹಲವು ಹಳ್ಳಿಗಳಿಗೆ ಉಚಿತವಾಗಿ ನೀರು ಪೂರೈಕೆ ಮಾಡಿಸುತ್ತಿದ್ದೇನೆ. ಕೆಲವೆಡೆ ಐದು ಬೋರ್‌ವೆಲ್‌ಗಳನ್ನು ಕೊರೆಸಿ, ಜನರಿಗೆ ಅನುಕೂಲ ಮಾಡಿಕೊಟ್ಟಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT