ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

7
ಕಡ್ತಲ ಪರಿಸರದಲ್ಲಿ ಕಾಣೆಯಾಗುತ್ತಿರುವ ಜಾನುವಾರುಗಳು

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

Published:
Updated:
ಹೆಬ್ರಿ ಸಮೀಪದ ಕಡ್ತಲ ಸಿರಿಬೈಲು ಪರಿಸರದಲ್ಲಿ ಜಾನುವಾರುಗಳು ಕಾಣೆಯಾಗುತ್ತಿರುವ ಬಗ್ಗೆ ಸ್ಥಳೀಯರು ತಮ್ಮ ಅಳಲು ತೋಡಿಕೊಂಡರು.

ಹೆಬ್ರಿ: ‘ಕಡ್ತಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿರಿಬೈಲು ಪರಿಸರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಮೇಯಲು ಬಿಟ್ಟ ಜಾನುವಾರಗಳು ಕಾಣೆಯಾಗುತ್ತಿವೆ. ಹಲವಾರು ಜಾನುವಾರುಗಳು ಈ ತನಕ ಪತ್ತೆಯಾಗಿಲ್ಲ. ರೈತರ ಜೀವನಕ್ಕೆ ಆಧಾರವಾಗಿರುವ ದನಕರುಗಳು ಕಾಣೆಯಾಗುತ್ತಿರುವುದು ನಮ್ಮಲ್ಲಿ ಆತಂಕ ಸೃಷ್ಟಿಸಿದೆ’ ಎಂದು ಕಡ್ತಲ ಸಿರಿಬೈಲು ಪರಿಸರದ ಗ್ರಾಮಸ್ಥರು ಭಾನುವಾರ ಮಾಧ್ಯಮದವರ ಮುಂದೆ  ಅಳಲು ತೋಡಿಕೊಂಡರು.

ನಡುಗುಡ್ಡೆ ಶ್ರೀನಿವಾಸ ಪೂಜಾರಿ, ಜಯಂತಿ ಶೆಟ್ಟಿ, ಪದ್ಮನಾಭ ಪೂಜಾರಿ, ಆನಂದ ಪೂಜಾರಿ, ಸುಶೀಲಾ ಹೆಗ್ಡೆ ಸಹಿತ ಹಲವರು ಜಾನುವಾರುಗಳು ಕಣ್ಮರೆಯಾಗುತ್ತಿರುವ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದರು.

ಸ್ಥಳೀಯರ ಕೈವಾಡದ ಶಂಕೆ: ಮೇಯಲು ಬಿಟ್ಟ ದನಗಳನ್ನು ಹಿಡಿದು ಒಂದೆಡೆ ಕಟ್ಟಿಹಾಕಿ ಬಳಿಕ ಅಕ್ರಮ ಗೋಸಾಗಣೆದಾರರಿಗೆ ನೀಡುವ ಬಗ್ಗೆ ನಮಗೆ ಕೆಲವು ಸ್ಥಳೀಯರ ಮೇಲೆ ಬಲವಾದ ಶಂಕೆಯಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ನಮಗೆ ನ್ಯಾಯ ದೊರಕಿಸಿ ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.

ಸೂಕ್ತ ಕ್ರಮ– ಪೊಲೀಸರ ಭರವಸೆ: ‘ದನ ಸಾಗಣೆ ಸೇರಿದಂತೆ ಯಾವುದೇ ಅಕ್ರಮ ಚಟುವಟಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಈ ಕುರಿತು ಸೂಕ್ತ ತನಿಖೆ ನಡೆಸಿ ರೈತರಿಗೆ ನ್ಯಾಯ ದೊರಕಿಸಿಕೊಡುತ್ತೇವೆ. ಕಡ್ತಲ ಸೇರಿದಂತೆ ಠಾಣಾ ವ್ಯಾಪ್ತಿಯ ವಿವಿಧೆಡೆ ರಾತ್ರಿ ಗಸ್ತು ಬಿಗಿಗೊಳಿಸಿ ತೀವ್ರ ತಪಾಸಣೆ ನಡೆಸಲಾಗುವುದು. ಅಕ್ರಮ ಜಾನುವಾರು ಸಾಗಣೆ ಬಗ್ಗೆ ಸಣ್ಣ ಮಾಹಿತಿ ದೊರೆತರೂ ನಮ್ಮೊಂದಿಗೆ ಹಂಚಿಕೊಳ್ಳಿ. ಜಾನುವಾರು ಕಳೆದುಕೊಂಡವರು ಪೊಲೀಸರನ್ನು ಮುಕ್ತವಾಗಿ ಸಂಪರ್ಕಿಸಿ ದೂರು ನೀಡಬಹುದು. ಇತ್ತೀಚೆಗೆ ದನ ಕಳವು ಆದ ಬಗ್ಗೆ ಕಡ್ತಲದ ಪದ್ಮನಾಭ ಪೂಜಾರಿ ದೂರು ನೀಡಿದ್ದು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ’ ಎಂದು ಅಜೆಕಾರು ಪೊಲೀಸರು ಹೇಳಿದರು.

ಪಂಚಾಯಿತಿಯಿಂದ ಸಹಕಾರ: ‘ಕಡ್ತಲ ಪರಿಸರದಲ್ಲಿ ಜಾನುವಾರುಗಳು ಕಳವು ಆಗುತ್ತಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಜಾನುವಾರುಗಳು ಕಳವು ಆದರೆ ರೈತರಿಗೆ ತೀವ್ರ ತೊಂದರೆಯಾಗುತ್ತದೆ. ಈ ವಿಚಾರದಲ್ಲಿ ಗ್ರಾಮ ಪಂಚಾಯಿತಿ ಕೂಡ ಪೊಲೀಸರಿಗೆ ನೆರವು ನೀಡಲಿದೆ. ಅಕ್ರಮ ಜಾನುವಾರು ಸಾಗಣೆದಾರರನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸಿ ಜನತೆಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಕಡ್ತಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ್ ಕುಮಾರ್ ಹೆಗ್ಡೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !