ನಾಲ್ಕು ವರ್ಷಗಳಲ್ಲಿ ನಾಲ್ವರು ಅಧ್ಯಕ್ಷರು!

7
ಇದು ಹೊಸಪೇಟೆ ನಗರಸಭೆ ರಾಜಕೀಯ; ಶಾಸಕರೇ ಅಧ್ಯಕ್ಷರ ನಿರ್ಧಾರ

ನಾಲ್ಕು ವರ್ಷಗಳಲ್ಲಿ ನಾಲ್ವರು ಅಧ್ಯಕ್ಷರು!

Published:
Updated:
ನಗರಸಭೆ

ಹೊಸಪೇಟೆ: ಇಲ್ಲಿನ ನಗರಸಭೆಯು ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ವರು ಅಧ್ಯಕ್ಷರನ್ನು ಕಂಡಿದೆ! ಇನ್ನುಳಿದ ಎಂಟು ತಿಂಗಳಿಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಅವಧಿ ಕೊನೆಗೊಳ್ಳುವುದರ ಒಳಗೆ ಒಟ್ಟು ಐವರು ಅಧ್ಯಕ್ಷರನ್ನು ಕಂಡಿದಂತಾಗುತ್ತದೆ.

35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್‌ 20 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು. ನಾಯಕ ಸಮುದಾಯದ ಕಣ್ಣಿ ಉಮಾದೇವಿ ಅವರು ಮೊದಲ 19 ತಿಂಗಳು ಅಧ್ಯಕ್ಷೆಯಾಗಿ ಕೆಲಸ ನಿರ್ವಹಿಸಿದರು. ನಂತರ 11 ತಿಂಗಳು ವೀರಶೈವ ಲಿಂಗಾಯತ ಸಮುದಾಯದ ರೋಹಿಣಿ ವೆಂಕಟೇಶ, ಅವರ ಬಳಿಕ ಮುಸ್ಲಿಂ ಸಮುದಾಯದ ಅಬ್ದುಲ್‌ ಖದೀರ್‌ ಅವರು 12 ತಿಂಗಳು ಅಧಿಕಾರ ನಡೆಸಿದರು. ಹತ್ತು ತಿಂಗಳು ಅಧಿಕಾರ ಚಲಾಯಿಸಿದ ಕುರುಬ ಸಮಾಜದ ನಾಗಲಕ್ಷ್ಮಮ್ಮ ಅವರು ಮಂಗಳವಾರ ಅಧ್ಯಕ್ಷೆ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇನ್ನುಳಿದ ಎಂಟು ತಿಂಗಳಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.

ಪುನಃ ನಾಯಕ ಸಮುದಾಯಕ್ಕೆ ಸೇರಿದ ಸದಸ್ಯರೊಬ್ಬರನ್ನು ಅಧ್ಯಕ್ಷ ಗಾದಿಗೆ ತಂದು ಕೂರಿಸುವ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಆ ಸಮುದಾಯದ ಗುಡಿಗುಂಟಿ ಮಲ್ಲಿಕಾರ್ಜುನ, ಗುಜ್ಜಲ್‌ ನಿಂಗಪ್ಪ ಹಾಗೂ ಮಲ್ಲಪ್ಪ ಅವರು ಅಧ್ಯಕ್ಷ ಹುದ್ದೆಯ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅದಕ್ಕಾಗಿ ಅವರು ತೀವ್ರ ಕಸರತ್ತು ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರ ಮಾತೇ ಅಂತಿಮ: ನಗರಸಭೆಯಲ್ಲಿ ಜಾತಿವಾರು ಅಧಿಕಾರ ಹಂಚಿಕೆ ಮಾಡುತ್ತ ಬಂದಿದವರು ವಿಜಯನಗರ ಕ್ಷೇತ್ರದ ಹಾಲಿ ಶಾಸಕ ಆನಂದ್‌ ಸಿಂಗ್‌. ಈ ಹಿಂದೆ ಅವರು ಬಿಜೆಪಿ ಶಾಸಕರಾಗಿದ್ದರೂ ಕಾಂಗ್ರೆಸ್‌ ಆಡಳಿತದ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದರು. ಅವರು ಯಾವ ಸದಸ್ಯನ ಪರ ಒಲವು ಹೊಂದಿರುತ್ತಾರೋ ಅಂಥವರೇ ಅಧ್ಯಕ್ಷರಾಗಿದ್ದಾರೆ. ಅದನ್ನು ಅವರು ಅಕ್ಷರಶಃ ಮಾಡಿ ತೋರಿಸಿದ್ದಾರೆ. ಈಗ ಅವರು ಕಾಂಗ್ರೆಸ್‌ ಶಾಸಕರಾಗಿರುವುದರಿಂದ ಮತ್ತಷ್ಟು ಬಲ ಬಂದಂತಾಗಿದೆ. ಈಗಲೂ ಅವರು ಸೂಚಿಸಿದವರೇ ಅಧ್ಯಕ್ಷರಾಗುವುದು ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಪಸ್ವರ:  ಎಲ್ಲ ಜಾತಿಯವರನ್ನು ಓಲೈಸಲು ಶಾಸಕರು ನಗರಸಭೆಯ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಇದು ನಗರದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಕೆಲ ಸದಸ್ಯರು ಅಪಸ್ವರ ಎತ್ತಿದ್ದಾರೆ. ‘ಸಾಮಾನ್ಯವಾಗಿ ನಗರಸಭೆಯ ಐದು ವರ್ಷಗಳ ಅಧಿಕಾರದ ಅವಧಿಯಲ್ಲಿ ಒಬ್ಬರೋ, ಇಬ್ಬರೋ ಅಧ್ಯಕ್ಷರಾಗುವುದು ಸಹಜ. ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ನಾಲ್ಕೈದು ಜನರನ್ನು ಅಧ್ಯಕ್ಷರಾಗಿ ಮಾಡುವುದು ಎಷ್ಟರಮಟ್ಟಿಗೆ ಸರಿ. ಒಬ್ಬೊಬ್ಬರು ಹತ್ತು–ಹನ್ನೊಂದು ತಿಂಗಳು ಅಧ್ಯಕ್ಷರಾದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ.  ಅಭಿವೃದ್ಧಿ ದೃಷ್ಟಿಯಿಂದ ಇದು ಒಳ್ಳೆಯದಲ್ಲ’ ಎಂದು ಹೆಸರು ಹೇಳಲಿಚ್ಛಿಸದ ಕೆಲವು ಸದಸ್ಯರು ಹೇಳಿದ್ದಾರೆ.

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !