‘ಸುಳ್ಳು ಸುದ್ದಿ ತಡೆಗೆ ಸನ್ನದ್ಧವಾಗಿರಲಿಲ್ಲ’

7
ಸೆನೆಟ್‌ ಸಮಿತಿ ಮುಂದೆ ಟ್ವಿಟರ್‌ ಸಿಇಒ ಜಾಕ್‌ ಡೊರ್ಸಿ ಹೇಳಿಕೆ

‘ಸುಳ್ಳು ಸುದ್ದಿ ತಡೆಗೆ ಸನ್ನದ್ಧವಾಗಿರಲಿಲ್ಲ’

Published:
Updated:

ವಾಷಿಂಗ್ಟನ್‌: ‘ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದನ್ನು ತಡೆಯಲು ಮತ್ತು ಮಾಹಿತಿ ತಿರುಚುವುದನ್ನು ನಿಯಂತ್ರಿಸಲು ಯಾವುದೇ ರೀತಿಯಲ್ಲೂ ಸನ್ನದ್ಧವಾಗಿರಲಿಲ್ಲ’ ಎಂದು ಟ್ವಿಟರ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್‌ ಡೊರ್ಸಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ವಿದೇಶಿ ಪ್ರಭಾವ ಕುರಿತಾದ ಸೆನೆಟ್‌ ಬೇಹುಗಾರಿಕೆ ಸಮಿತಿ ಮುಂದೆ ಹಾಜರಾಗಿ ವಿವರಣೆ ನೀಡಿದ ಅವರು, ‘ಸಂದೇಶ ಒದಗಿಸುವ ಉದ್ದೇಶದಿಂದ ಈ ಸೇವೆ ಆರಂಭಿಸಲಾಗಿತ್ತು. ಆದರೆ, ನಿಂದನೆ, ಕಿರುಕುಳ ಮತ್ತು ಟ್ರೋಲ್‌ ಮಾಡುವ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ನಾವು ಈಗ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ ಮತ್ತು ಸಾಧನಗಳು ಸಹ ಹೊಂದಿರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.

‘ಅಮೆರಿಕ ಅಧ್ಯಕ್ಷೀಯ ಚುನಾವಣೆ ಮತ್ತು ಇತರ ರಾಷ್ಟ್ರಗಳಲ್ಲಿ ನಡೆದ ಚುನಾವಣೆಗಳಿಂದ ನಾವು ಬಹಳಷ್ಟು ಪಾಠ ಕಲಿತಿದ್ದೇವೆ. ಚುನಾವಣೆಗಳ ಸಮಗ್ರತೆ ಮತ್ತು ಪಾರದರ್ಶಕತೆಯನ್ನು ಕಾಪಾಡುವುದು ಮುಖ್ಯವಾಗಿದೆ ಎನ್ನುವುದನ್ನು ನಾವು ಅರಿತಿದ್ದೇವೆ’ ಎಂದು ವಿವರಿಸಿದ್ದಾರೆ.

ಫೇಸ್‌ಬುಕ್‌ ಸಿಒಒ ಶೆರ‍್ಯಾಲ್‌ ಸ್ಯಾಂಡ್‌ಬರ್ಗ್‌ ಸಹ ಸಮಿತಿ ಮುಂದೆ ಹಾಜರಾಗಿ ವಿವರಿಸಿದರು. ಟ್ವೀಟರ್ ಸಿಇಒ ನೀಡಿದ ವಿವರಣೆಯನ್ನು ಸ್ಯಾಂಡ್‌ಬರ್ಗ್‌ ಸಹ ಅನುಮೋದಿಸಿದರು.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಪ್ರಭಾವವನ್ನು ನಿಯಂತ್ರಿಸುವಲ್ಲಿ ಸಾಮಾಜಿಕ ಜಾಲತಾಣಗಳು ವಿಫಲವಾಗಿರುವು
ದನ್ನು ಅವರು ಒಪ್ಪಿಕೊಂಡರು.

‘ಈ ವಿಷಯವನ್ನು ತಡವಾಗಿ ಗುರುತಿಸಲಾಯಿತು. ಜತೆಗೆ ನಿಯಂತ್ರಿಸುವುದು ಸಹ ತಡವಾಯಿತು’ ಎಂದು ತಿಳಿಸಿದರು.

ಗೂಗಲ್‌ಗೂ ವಿವರಣೆ ನೀಡುವಂತೆ ಸೂಚಿಸಲಾಗಿತ್ತು. ಆದರೆ, ಕಂಪನಿಯ ಸಿಇಒ ಹಾಜರಾಗಲಿಲ್ಲ.

ನಕಲಿ ಖಾತೆಗಳ ವಿರುದ್ಧ ಟ್ವಿಟರ್‌ ಸಮರ
ವಾಷಿಂಗ್ಟನ್‌ (ರಾಯಿಟರ್ಸ್‌):
ನಕಲಿ ಖಾತೆಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಲಾಗಿದ್ದು, ಅನುಮಾನಾಸ್ಪದವಾಗಿರುವ 5.3 ಲಕ್ಷ ಖಾತೆಗಳನ್ನು ತೆಗೆದುಹಾಕಲಾಗಿದೆ ಎಂದು ಜಾಕ್‌ ಡೊರ್ಸಿ ತಿಳಿಸಿದ್ದಾರೆ.

ಯಾವುದೇ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ ಟ್ವಿಟರ್‌ ಕಾರ್ಯ ನಿರ್ವಹಿಸುತ್ತಿಲ್ಲ. ನಿಷ್ಪಕ್ಷಪಾತವಾಗಿಯೇ ನಿಯಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !