ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾವಣ ದಹನ ಕಣ್ತುಂಬಿಕೊಳ್ಳಲು ಹಳಿ ಮೇಲೆ ನಿಂತರು; ರೈಲಿನೊಂದಿಗೆ ಮರೆಯಾದರು!

Last Updated 20 ಅಕ್ಟೋಬರ್ 2018, 5:17 IST
ಅಕ್ಷರ ಗಾತ್ರ

ಅಮೃತಸರ: ದಸರಾ ಆಚರಣೆಯ ಭಾಗವಾಗಿರುವ ರಾವಣ ಪ್ರತಿಕೃತ ದಹನವನ್ನು ಕಣ್ಣರಳಿಸಿ, ಮೊಬೈಲ್‌ ಕ್ಯಾಮೆರಾ ಹಿಡಿದು ಅನುಭವವನ್ನು ದಾಖಲಿಸಿಕೊಳ್ಳುತ್ತಿದ್ದವರು ನೂರಾರು ಮಂದಿ. ಪಟಾಕಿ ಸಿಡಿತ, ಸಂಭ್ರಮ ಎಷ್ಟಿತ್ತೆಂದರೆ; ತಾವು ಎಲ್ಲಿದ್ದೇವೆ, ಯಾವುದರ ಮೇಲೆ ನಿಂತಿದ್ದೇವೆ ಎಲ್ಲವನ್ನೂ ಮರೆತಿದ್ದರು. ಮಿಂಚಿನ ವೇಗದಲ್ಲಿ ಬಂದ ರೈಲುಹಳಿಗಳ ಮೇಲಿನ ಎಲ್ಲರನ್ನೂ ಸರ್ರನೇ ಎಳೆದು ದೂರಕ್ಕೆ ಬಿಸಾಡಿ ಮುಂದೆ ನುಗ್ಗಿತ್ತು. ವಿಡಿಯೊದಲ್ಲಿ ದಾಖಲಾಗಿರುವ ದೃಶ್ಯಗಳನ್ನು ನೋಡಿದರೆ; ಸಂಭ್ರಮದ ನಡುವೆ ಹಾದು ಹೋದ ದುರಂತವು ಕೆಲ ನಿಮಿಷಗಳ ವರೆಗೂ ಗ್ರಹಿಕೆಗೂ ಸಿಕ್ಕಿರಲಿಲ್ಲ.

ಸಾವಿನ ಸಂಖ್ಯೆ 61 ಮೀರಿದೆ. ಗಾಯಗೊಂಡಿರುವ 70ಕ್ಕೂ ಹೆಚ್ಚು ಜನರ ಪೈಕಿ 7 ಮಂದಿಯ ಸ್ಥಿತಿ ಗಂಭೀರಗೊಂಡಿದೆ.ಜೋದಾ ಪಾಠಕ್‌ ಮೈದಾನದಲ್ಲಿ ಎದುರಿಗೆ ರಾವಣನ ಪ್ರತಿಕೃತಿ ದಹನ, ಪಟಾಕಿ ಸದ್ದು, ಸದ್ದಿನೊಳಗೆ ದೇಹಗಳನ್ನು ಸೀಳಿ ಚಿಮ್ಮಿಸಿ ಜಲಂಧರ್‌ನಿಂದ ಅಮೃತಸರ ಕಡೆಗೆ ಮರೆಯಾದ ರೈಲು. ಅಮೃತಸರದ ಆಸ್ಪತ್ರೆಗಳಲ್ಲಿ ಗಾಯಗೊಂಡಿರುವವರಿಗೆ ಚಿಕಿತ್ಸೆ ಮುಂದುವರಿದಿದೆ, ಮೃತಪಟ್ಟಿರುವ ಅನೇಕರನ್ನು ಈವರೆಗೂ ಗುರುತಿಸಲು ಸಾಧ್ಯವಾಗಿಲ್ಲ.

ವಿಧಿವಿಜ್ಞಾನ ಪರೀಕ್ಷೆ ನಡೆಸುವ ತಂಡ ಈಗಾಗಲೇ ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದೆ. ಪಂಜಾಬ್‌ ಸರ್ಕಾರ ಘಟನೆ ತನಿಖೆಗೆ ಆದೇಶಿಸಿದೆ. ಶುಕ್ರವಾರ ಸಂಜೆ ರೈಲ್ವೆ ಹಳಿಗಳ ಅಕ್ಕಪಕ್ಕದಲ್ಲಿ ನಿಂತು ಕನಿಷ್ಠ 300 ಜನ ರಾವಣ ದಹನ ವೀಕ್ಷಿಸುತ್ತಿದ್ದರು ಎಂದು ವರದಿಯಾಗಿದೆ.

ಮೃತ ವ್ಯಕ್ತಿಯ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿರುವ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ನಿಗದಿಯಾಗಿದ್ದ ಇಸ್ರೇಲ್‌ ಪ್ರವಾಸವನ್ನು ಮುಂದೂಡಿದ್ದು, ದುರಂತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ. ಸಂತ್ರಸ್ತರ ಕುಟುಂಬಗಳ ಭೇಟಿ ಮಾಡಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುರಂತದಿಂದಾಗಿ ಆಘಾತಗೊಂಡಿರುವ ಜನರು ಶೋಕದಲ್ಲಿ ಮುಳುಗಿದ್ದಾರೆ. ಶನಿವಾರ ಇಲ್ಲಿನ ಎಲ್ಲ ಕಚೇರಿಗಳು ಹಾಗೂ ವಿದ್ಯಾ ಸಂಸ್ಥೆಗಳು ಮುಚ್ಚುವ ಮೂಲಕ ಸಂತಾಪ ಸೂಚಿಸಿವೆ.

ಅಮೃತಸರ ಮಾರ್ಗದಲ್ಲಿ ಸಂಚರಿಸುವ 8 ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಐದು ರೈಲುಗಳ ಮಾರ್ಗ ಬದಲಾವಣೆ ಹಾಗೂ ಇನ್ನೂ ಕೆಲವು ರೈಲುಗಳ ಸಂಚಾರವನ್ನು ಮೊಟುಕುಗೊಳಿಸಲಾಗಿದೆ.

ಶನಿವಾರ ಪಂಜಾಬ್‌ ಸರ್ಕಾರದ ಸಚಿವ ನವಜೋತ್‌ ಸಿಂಗ್‌ ಸಿಧು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿರುವವರ ಆರೋಗ್ಯ ವಿಚಾರಿಸಿದರು. ದುರಂತ ನಡೆದ ದಸರಾ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ನವಜೋತ್‌ ಸಿಂಗ್‌ ಸಿಧು ಪತ್ನಿ ಕಾಂಗ್ರೆಸ್‌ ಮುಖಂಡೆ ನವಜೋತ್‌ ಕೌರ್‌ ಸಿಧು, 60ಕ್ಕೂ ಹೆಚ್ಚು ಮಂದಿ ಮೃತ ಪಟ್ಟಿರುವುದು ತಿಳಿದರೂ ಸ್ಥಳಿದಿಂದ ಮರಳಿದರು. ಇದನ್ನು ವಿರೋಧಿಸಿ ಅನೇಕರುನವಜೋತ್‌ ಕೌರ್ ವಿರುದ್ಧ ಘೋಷಣೆಗಳನ್ನು ಕೂಗಿರುವುದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT