ಶುಕ್ರವಾರ, ಡಿಸೆಂಬರ್ 6, 2019
17 °C
ಮಕ್ಕಳನ್ನು ಪಡೆದ ಕೇರಳದ ಮಕ್ಕಳ ಕಲ್ಯಾಣ ಮಂಡಳಿ

ಮದ್ಯ ವ್ಯಸನಿ ಅಪ್ಪ, ನಿತ್ರಾಣಗೊಂಡ ತಾಯಿ: ಹಸಿವು ನೀಗಿಸಲು ಮಣ್ಣು ಸೇವಿಸಿದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ: ಕಿತ್ತು ತಿನ್ನುವ ಬಡತನ, ಮದ್ಯ ವ್ಯಸನಿ ಅಪ್ಪ, ಹಸಿವಿನಿಂದ ಬಳಲುತ್ತಿರುವ ತಾಯಿ, ಹಸಿವನ್ನು ನೀಗಿಸಿಕೊಳ್ಳಲು ಮಗು ಮಣ್ಣನ್ನು ಸೇವಿಸುವ ಪರಿಸ್ಥಿತಿ. 

ಇದು ತಿರುವನಂತಪುರದ ಹೃದಯಭಾಗದಲ್ಲಿರುವ ಕಂದಾಯ ಭೂಮಿಯಲ್ಲಿನ ಶೆಡ್‌ವೊಂದರಲ್ಲಿ ಕಂಡು ಬಂದಿದ್ದು. ಮೂರು ತಿಂಗಳಿನಿಂದ ಏಳು ವರ್ಷದ ವರೆಗಿನ ಆರು ಮಕ್ಕಳು ಹಸಿವು ನೀಗಿಸಿಕೊಳ್ಳಲು ಮಣ್ಣು ಸೇವಿಸಲು ಮುಂದಾಗಿದ್ದರು. ಈ ಕುಟುಂಬದ ಹಸಿವು ನೀಗಿಸಲು ಇದೀಗ ಕೇರಳ ಸರ್ಕಾರ ಕ್ರಮ ತೆಗೆದುಕೊಂಡಿದೆ.

‘ಕೇರಳ ಮಕ್ಕಳ ಕಲ್ಯಾಣ ಮಂಡಳಿಯ ಸಹಾಯವನ್ನು ಕೋರಿ ಮಕ್ಕಳ ತಾಯಿ ಮನವಿ ಮಾಡಿದ್ದರು. ತಾಯಿಯ ಕೋರಿಕೆಯಂತೆ ಇಬ್ಬರು ಬಾಲಕಿಯರು ಸೇರಿ ನಾಲ್ಕು ಮಕ್ಕಳನ್ನು ಮಂಡಳಿ ಪಡೆದುಕೊಂಡಿದೆ. ತಾಯಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಸರ್ಕಾರದ ನಿರ್ಗತಿಕರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ತಿರುವನಂತಪುರ ನಗರಸಭೆ ತಾಯಿಗೆ ಕೆಲಸ ನೀಡಿದೆ. ಮದ್ಯವ್ಯಸನಿಯಾಗಿರುವ ಪತಿ ನಿತ್ಯ ಪತ್ನಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದನು’ ಎಂದು ಪರಿಷತ್‌ ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ದೀಪಕ್‌ ತಿಳಿಸಿದ್ದಾರೆ.

ಸಮಾಜ ಕಲ್ಯಾಣ ಇಲಾಖೆ ಯೋಜನೆಗಳ ಬಗ್ಗೆ ಅತ್ಯಂತ ಹೆಮ್ಮೆ ವ್ಯಕ್ತಪಡಿಸುವ ಕೇರಳ ಸರ್ಕಾರಕ್ಕೆ ಈ ಕುಟುಂಬದ ಅವಸ್ಥೆ ತೀವ್ರ ಮುಜುಗುರವನ್ನುಂಟು ಮಾಡಿದೆ. 

ಈ ಕುಟುಂಬವು ಕೆಲವು ದಿನಗಳಿಂದ ಈ ಭೂಮಿಯಲ್ಲಿ ವಾಸಿಸುತ್ತಿತ್ತು. ಸಮೀಪದ ನಿವಾಸಿಗಳು ಅಲ್ಪಸ್ವಲ್ಪ ಸಹಾಯ ಮಾಡುತ್ತಿದ್ದರು. ಕೆಲವು ಆರೋಗ್ಯ ಕಾರ್ಯಕರ್ತರು ಸಹ ಇಲ್ಲಿಗೆ ಭೇಟಿ ನೀಡಿ ಸಲಹೆ ನೀಡಿದ್ದರು.

ಕುಟುಂಬದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದಂತೆ ಬಡತನವು ತೀವ್ರ ಮಟ್ಟವನ್ನು ತಲುಪಿತು. ಹಿರಿಯ ಪುತ್ರ ಹಸಿವನ್ನು ನೀಗಿಸಿಕೊಳ್ಳಲು ಮಣ್ಣನ್ನು ಸೇವಿಸಬೇಕಾಯಿತು. ಉಳಿದ ಮಕ್ಕಳೂ ಆತನ ದಾರಿಯನ್ನೇ ಹಿಡಿದಿದ್ದರು. ಇದನ್ನು ಕಂಡ ತಾಯಿ ಮಕ್ಕಳ ಕಲ್ಯಾಣ ಮಂಡಳಿಗೆ ಸಹಾಯಕ್ಕಾಗಿ ಮನವಿ ಮಾಡಿದರು. ಪರಿಷತ್‌ ಅಧಿಕಾರಿಗಳು ಮಕ್ಕಳ ಸಹಾಯವಾಣಿ ಮತ್ತು ನಗರಸಭೆ ಮೂಲಕ ಸಂಪರ್ಕಿಸಿ ಕ್ರಮ ತೆಗೆದುಕೊಂಡಿದ್ದಾರೆ.

to suppress hunger; Mother seeks government care

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು