ಭಾನುವಾರ, ಮೇ 16, 2021
23 °C
ಗುಜರಾತ್‌ ತೀರದಲ್ಲಿ ಪತ್ತೆ l ಸೇನಾಧಿಕಾರಿ ಸೈನಿ ಮಾಹಿತಿ

ವಾರಸುದಾರರಿಲ್ಲದ ದೋಣಿಗಳು ಪತ್ತೆ l ದಕ್ಷಿಣದತ್ತ ಉಗ್ರರ ದೃಷ್ಟಿ: ಕಟ್ಟೆಚ್ಚರ

ಪಿಟಿಐ Updated:

ಅಕ್ಷರ ಗಾತ್ರ : | |

ಪುಣೆ : ‘ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆ ಇದೆ ಎಂಬ ಮಾಹಿತಿಯು ಸೇನೆಗೆ ಲಭಿಸಿದೆ’ ಎಂದು ಸೇನೆಯ ದಕ್ಷಿಣ ಕಮಾಂಡ್‌ನ ಹಿರಿಯ ಅಧಿಕಾರಿ ಎಸ್‌.ಕೆ. ಸೈನಿ ಸೋಮವಾರ ತಿಳಿಸಿದರು.

ಗುಜರಾತ್‌ ಸಮೀಪದ ಸರ್‌ ಕ್ರೀಕ್‌ ಪ್ರದೇಶದಲ್ಲಿ ಪಾಕಿಸ್ತಾನದ ಸೇನಾ ಚಟುವಟಿಕೆ ಚುರುಕುಗೊಂಡಿದೆಯೇ ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ‘ಸರ್‌ ಕ್ರೀಕ್‌ ಪ್ರದೇಶದಲ್ಲಿ ವಾರಸುದಾರರಿಲ್ಲದ ಕೆಲವು ದೋಣಿಗಳು ಪತ್ತೆಯಾಗಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಉಗ್ರರ ಯೋಜನೆಗಳು ಸಫಲವಾಗದಂತೆ ನೋಡಿಕೊಳ್ಳಲಾಗುವುದು’ ಎಂದರು.

ನೆರೆರಾಷ್ಟ್ರದಿಂದ ಬರುತ್ತಿರುವ ಬೆದರಿಕೆ ಮತ್ತು ಗಡಿಯಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಕುರಿತ ಪ್ರಶ್ನೆಗೆ ಉತ್ತರಿಸುತ್ತಾ, ‘ಸಾಂಪ್ರದಾಯಿಕವಲ್ಲದ ಯಾವುದೇ ಸಂಘರ್ಷಕ್ಕೆ ಆಂತರಿಕ ಮತ್ತು ಬಾಹ್ಯ ಸ್ವರೂಪದ ಆಯಾಮಗಳಿರುತ್ತವೆ. ಜಮ್ಮು ಕಾಶ್ಮೀರ ವಿಚಾರದಲ್ಲಿ ಬಾಹ್ಯ ಆಯಾಮಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮ್ಮಲ್ಲಿ ಈ ಬಗ್ಗೆ ಸ್ಪಷ್ಟವಾದ ನೀತಿ ಇದೆ. ಅದರ ಆಧಾರದಲ್ಲೇ ಆಂತರಿಕ ಸಂಘರ್ಷವನ್ನು ನಿಯಂತ್ರಿಸಲಾಗುವುದು. ಪ್ರತಿ ಸಂಘರ್ಷಕ್ಕೂ ರಾಜಕೀಯ, ಆರ್ಥಿಕ, ಸಾಮಾಜಿಕ ಹಾಗೂ ರಾಜತಾಂತ್ರಿಕ ಪರಿಹಾರಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ಇದಕ್ಕೆ ಅನುಕೂಲಕರ ಪರಿಸ್ಥಿತಿ ನಿರ್ಮಾಣ ಮಾಡುವುದಷ್ಟೇ ಸೇನೆಯ ಕೆಲಸ. ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಉದ್ಭವಿಸಬಹುದಾದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸೇನೆ ಸನ್ನದ್ಧವಾಗಿದೆ’ ಎಂದರು.

‘ಪಾಕಿಸ್ತಾನದ ಕಮಾಂಡೊಗಳು ಕಛ್‌ ಪ್ರದೇಶದಿಂದ ಜಲಮಾರ್ಗದ ಮೂಲಕ ಭಾರತದೊಳಗೆ ನುಸುಳಿ ಗುಜರಾತ್‌ನಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುವ ಸಾಧ್ಯತೆ ಇದೆ’ ಎಂದು ಕಳೆದ ವಾರವಷ್ಟೇ ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿತ್ತು. ಇದಾದ ನಂತರ ಗುಜರಾತ್‌ನಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.

ಜೈಷ್‌ ಎ–ಮೊಹಮ್ಮದ್‌ ಸಂಘಟನೆಯು ತನ್ನ ಸದಸ್ಯರಿಗೆ ಆಳ ಸಮುದ್ರದ ಮೂಲಕ ದಾಳಿ ನಡೆಸುವ ತರಬೇತಿಯನ್ನು ನೀಡುತ್ತಿದೆ ಎಂಬ ಮಾಹಿತಿಯನ್ನು ಸಹ ಗುಪ್ತಚರ ಇಲಾಖೆ ಸೇನೆಗೆ ನೀಡಿತ್ತು.

ಬಸ್‌, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಭದ್ರತೆ

ತಿರುವನಂತಪುರ: ದಕ್ಷಿಣ ಭಾರತದಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಸೇನೆಯು ನೀಡಿದ ನಂತರ ದಕ್ಷಿಣದ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಸಾರ್ವಜನಿಕರು ಹೆಚ್ಚಾಗಿ ಓಡಾಡುವ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ಇಡುವಂತೆ ಎಲ್ಲಾ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕೇರಳ ಪೊಲೀಸ್‌ ಮಹಾನಿರ್ದೇಶಕ ಲೋಕನಾಥ ಬೆಹರ ಸೂಚನೆ ನೀಡಿದ್ದಾರೆ. ಯಾವುದೇ ಶಂಕಾಸ್ಪದ ಬೆಳವಣಿಗೆ ಕಂಡುಬಂದರೂ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

‘ಬಸ್‌, ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗುವುದು. ಓಣಂ ಹಬ್ಬ ಸಮೀಪಿಸುತ್ತಿದ್ದು, ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಜನರು ಸೇರುವ ಕಡೆಗಳಲ್ಲಿ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗುವುದು’ ಎಂದು ಪೊಲೀಸ್‌ ಇಲಾಖೆಯ ಪ್ರಕಟಣೆ ತಿಳಿಸಿದೆ.

‘ಸೇನೆಯ ದಕ್ಷಿಣ ಕಮಾಂಡ್‌ ಎಂದರೆ ದಕ್ಷಿಣ ಭಾರತ ಮಾತ್ರವಲ್ಲ, ದಕ್ಷಿಣದ ಪರ್ಯಾಯ ದ್ವೀಪವಿಡೀ ಈ ವ್ಯಾಪ್ತಿಗೆ ಬರುತ್ತದೆ. ಗುಜರಾತ್‌ನ ಕೆಲವು ಭಾಗಗಳೂ ಇದರ ವ್ಯಾಪ್ತಿಯಲ್ಲಿ ಬರುತ್ತವೆ’ ಎಂದು ಸೇನೆಯ ವಕ್ತಾರರೊಬ್ಬರು ಚೆನ್ನೈನಲ್ಲಿ ತಿಳಿಸಿದ್ದಾರೆ.

‘ಶ್ರೀಹರಿಕೋಟಾ, ತಿರುಮಲ ದೇವಸ್ಥಾನ ಸೇರಿದಂತೆ ಆಂಧ್ರ ಪ್ರದೇಶದ ಪ್ರಮುಖ ಸ್ಥಳಗಳು ಮತ್ತು 974 ಕಿ.ಮೀ. ಕರಾವಳಿಯುದ್ದಕ್ಕೂ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರಮುಖ ಪ್ರದೇಶಗಳಲ್ಲಿ ವಿಶೇಷ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಆಂಧ್ರದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು