ಬುಧವಾರ, ಫೆಬ್ರವರಿ 26, 2020
19 °C
ಗೋವಿಗೆ ರಾಷ್ಟ್ರಮಾತೆಯ ಸ್ಥಾನ ಸಿಗುವವರೆಗೂ ಗುಂಪುದಾಳಿ ಹತ್ಯೆಗಳು ನಿಲ್ಲುವುದಿಲ್ಲ: ಬಿಜೆಪಿ ಶಾಸಕ

ಗೋರಕ್ಷಣೆಯ ಯುದ್ಧ ನಿಲ್ಲುವುದಿಲ್ಲ: ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಲೋಧ್

ಪಿಟಿಐ Updated:

ಅಕ್ಷರ ಗಾತ್ರ : | |

ಇಂದ್ರೇಶ್‌ ಕುಮಾರ್‌

ಹೈದರಾಬಾದ್: ‘ಗೋವುಗಳಿಗೆ ‘ರಾಷ್ಟ್ರಮಾತೆ’ಯ ಸ್ಥಾನ ಸಿಗುವವರೆಗೂ ಗೋರಕ್ಷಣೆಯ ಯುದ್ಧ ನಿಲ್ಲುವುದಿಲ್ಲ. ಗೋರಕ್ಷಕರನ್ನು ಜೈಲಿಗೆ ತಳ್ಳಿದರೂ, ಅವರಿಗೆ ಗುಂಡಿಕ್ಕಿದರೂ ಈ ಯುದ್ಧ ಕೊನೆಯಾಗದು ಎಂದು ನನಗನಿಸುತ್ತಿದೆ’ ಎಂದು ಹೈದರಾಬಾದ್‌ನ ಗೋಷಮಹಲ್‌ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್ ಲೋಧ್ ಹೇಳಿದ್ದಾರೆ.

‘ಗೋಸಂರಕ್ಷಣೆ ಹೆಸರಿನಲ್ಲಿ ಗುಂಪುಗೂಡಿ ಹೊಡೆದು ಸಾಯಿಸುವುದು ಮತ್ತು ರಕ್ತ ಹರಿಸುವುದನ್ನು ನಾನು ಬಯಸುವುದಿಲ್ಲ. ಆದರೆ ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸುವವರೆಗೂ ಇಂತಹ ಗುಂಪುದಾಳಿ ಹತ್ಯೆಗಳು ನಿಲ್ಲುವುದಿಲ್ಲ’ ಎಂದು ಲೋಧ್ ಹೇಳಿದ್ದಾರೆ.

ಅಲ್ವರ್‌ನಲ್ಲಿ ಹಸುಕಳವು ಆರೋಪದಲ್ಲಿ ಅಕ್ಬರ್‌ ಖಾನ್‌ ಅವರನ್ನು ಸ್ವಯಂಘೋಷಿತ ಗೋಸಂರಕ್ಷಕರು ಹೊಡೆದು ಸಾಯಿಸಿದ್ದಕ್ಕೆ ಸಂಬಂಧಿಸಿದಂತೆ ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಅವರು ಪ್ರಕಟಿಸಿದ್ದ 7 ನಿಮಿಷದ ವಿಡಿಯೊದಲ್ಲಿ ಈ ಮಾತುಗಳಿವೆ.

‘ಗೋವುಗಳನ್ನು ಕದ್ದು ಸಾಗಿಸಿದ ಹಲವು ಪ್ರಕರಣಗಳು ಅಕ್ಬರ್‌ ಅಲಿಯಾಸ್‌ ರಕ್ಬರ್‌ ಖಾನ್‌ ವಿರುದ್ಧ ದಾಖಲಾಗಿವೆ ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಲ್ಲ ರಾಜ್ಯಗಳಲ್ಲೂ ಗೋರಕ್ಷಣಾ ಇಲಾಖೆ ಸ್ಥಾಪನೆಯಾಗಬೇಕು. ಗೋರಕ್ಷಣೆಗೆ ಕಠಿಣ ಕಾನೂನು ಜಾರಿಯಾಗಬೇಕು. ಎಲ್ಲಿಯವರೆಗೆ ಗೋಹತ್ಯೆ ಇರುತ್ತದೋ ಅಲ್ಲಿಯವರೆಗೆ ಗುಂಪುದಾಳಿ ಹತ್ಯೆಗಳು ನಿಲ್ಲುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅವರ ಈ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಅವರು ತಮ್ಮ ವಿಡಿಯೊವನ್ನು ಡಿಲೀಟ್ ಮಾಡಿದ್ದಾರೆ. ಆದರೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು ಮಾಧ್ಯಮಗಳಿಗೆ ಮತ್ತೊಂದು ಹೇಳಿಕೆ ನೀಡಿದ್ದಾರೆ.

**

ಆಂತರಿಕ ರಕ್ತಸ್ರಾವದಿಂದ ಆಘಾತವಾಗಿ ಅಕ್ಬರ್‌ ಸಾವು

ಹಸುಕಳವು ಶಂಕೆಯಲ್ಲಿ ಸ್ವಯಘೋಷಿತ ಗೋರಕ್ಷಕರಿಂದ ಒದೆ ತಿಂದು ಸತ್ತಿದ್ದ ಅಕ್ಬರ್ ಖಾನ್ ಅವರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದೆ. ವರದಿಯ ಮುಖ್ಯಾಂಶಗಳು ಈ ಮುಂದಿನಂತಿವೆ.

ಅಕ್ಬರ್ ಖಾನ್

* ಮೊಂಡಾದ ಆಯುಧ ಅಥವಾ ವಸ್ತುವಿನಿಂದ ದೇಹದ ಎಲ್ಲೆಡೆ ಹಲ್ಲೆ ನಡೆಸಲಾಗಿದೆ. ಇದರಿಂದ ಆಂತರಿಕ ಸ್ರಾವವಾಗಿದೆ. ಸ್ರಾವದ ಕಾರಣ ಆಘಾತವಾಗಿ ಸಾವು ಸಂಭವಿಸಿದೆ

* ಪೆಟ್ಟು ಜೋರಾಗಿ ಬಿದ್ದಿರುವುದರಿಂದ ದೇಹದ ಹಲವೆಡೆ ಮೂಳೆಗಳು ಮುರಿದಿವೆ. ಬೆನ್ನಿನ ಮೂಳೆ, ಎದೆಯ ಒಂದು ಮೂಳೆ, ಪಕ್ಕೆಯ ಒಂದು ಮೂಳೆ, ಮೊಣಕೈ ಮತ್ತು ಕಾಲಿನ ಮೂಳೆಗಳು ಮುರಿದಿವೆ

**

ವಿಡಿಯೊದಲ್ಲಿ ನಾನು ಹೇಳಿರುವುದರಲ್ಲಿ ಯಾವುದೇ ತಪ್ಪು ಇಲ್ಲ. ನನಗನ್ನಿಸಿ ದ್ದನ್ನು ಹೇಳಿದ್ದೇನೆ. ನಾನು ಏನನ್ನು ಹೇಳಿದ್ದೇನೋ, ಅವೆಲ್ಲವೂ ಸತ್ಯ

-ಟಿ. ರಾಜಾ ಸಿಂಗ್ ಲೋಧ್ , ಗೋಷಮಹಲ್ ಶಾಸಕ

ಟಿ. ರಾಜಾ ಸಿಂಗ್ ಲೋಧ್

**

ಹಲ್ಲೆ ಖಂಡನೀಯ. ಬೇರೆಯವರ ಭಾವನೆಗಳಿಗೂ ನೋವು ಮಾಡುವುದೂ ಖಂಡನೀಯ. ಗೋಮಾಂಸ ಭಕ್ಷಣೆ ನಿಲ್ಲುವವರೆಗೂ, ಗುಂಪುದಾಳಿ ಹತ್ಯೆಯಂತಹ ಅಪರಾಧಗಳು ನಿಲ್ಲುವುದಿಲ್ಲ.

-ಇಂದ್ರೇಶ್ ಕುಮಾರ್, ಆರ್‌ಎಸ್‌ಎಸ್‌ ನಾಯಕ

ಇಂದ್ರೇಶ್ ಕುಮಾರ್

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು