‘ಒಂದೂ ರಫೇಲ್ ಸೇರ್ಪಡೆಯಾಗಿಲ್ಲ ಏಕೆ?’

ಬುಧವಾರ, ಮಾರ್ಚ್ 20, 2019
23 °C

‘ಒಂದೂ ರಫೇಲ್ ಸೇರ್ಪಡೆಯಾಗಿಲ್ಲ ಏಕೆ?’

Published:
Updated:
Prajavani

ಲಖನೌ: ‘ನಿಮ್ಮ ಅಧಿಕಾರಾವಧಿಯಲ್ಲಿ ಒಂದೇ ಒಂದು ರಫೇಲ್ ಯುದ್ಧವಿಮಾನವನ್ನು ವಾಯುಪಡೆಗೆ ಸೇರ್ಪಡೆ ಮಾಡಲು ಏಕೆ ಆಗಿಲ್ಲ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ. 

‘ಉಗ್ರರ ಶಿಬಿರಗಳ ಮೇಲೆ ನಿಖರ ದಾಳಿ ನಡೆಸಲು ರಫೇಲ್ ಯುದ್ಧವಿಮಾನಗಳು ಇನ್ನಷ್ಟು ಸಮರ್ಥ’ ಎಂದು ಪ್ರಧಾನಿ ನೀಡಿದ್ದ ಹೇಳಿಕೆಗೆ ಮಾಯಾವತಿ ಹೀಗೆ ಪ್ರಶ್ನಿಸಿದ್ದಾರೆ.

‘ನಿಮ್ಮ ಅವಧಿಯಲ್ಲಿ ಇದು ಏಕೆ ಆಗಲಿಲ್ಲ. ದೇಶದ ಭದ್ರತೆ ವಿಚಾರದಲ್ಲಿ ಬಿಜೆಪಿಯೂ ಏಕೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ’ ಎಂದು ಅವರು ಕುಟುಕಿದ್ದಾರೆ. 

ಮೊದಲ ರಫೇಲ್ ವಿಮಾನವು ಇದೇ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಹಸ್ತಾಂತರವಾಗುವ ನಿರೀಕ್ಷೆಯಿದೆ. 

ಮತದಾರರ ಮಾಹಿತಿ ಕಳವು: ಟಿಆರ್‌ಎಸ್‌–ಟಿಡಿಪಿ ವಾಕ್ಸಮರ

ಹೈದರಾಬಾದ್: ಆಂಧ್ರಪ್ರದೇಶದಲ್ಲಿ ಮತದಾರರ ಮಾಹಿತಿ ಕಳವು ಪ್ರಕರಣ ಟಿಡಿಪಿ ಮತ್ತು ಟಿಆರ್‌ಎಸ್ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ಕುರಿತು ತೆಲುಗುದೇಶಂ (ಟಿಡಿಪಿ) ವಿರುದ್ಧ ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್) ಪಕ್ಷದ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ವಾಗ್ದಾಳಿ ನಡೆಸಿದ್ದಾರೆ. 

‘ತೆಲಂಗಾಣ ಸರ್ಕಾರದ ವಿರುದ್ಧವೇ ಆರೋಪ ಹೊರಿಸುವ ನಿಮಗೆ ನಾಚಿಕೆಯಾಗಬೇಕು’ ಎಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ವಿರುದ್ಧ ರಾಮರಾವ್ ಹರಿಹಾಯ್ದಿದ್ದಾರೆ. 

‘ಸೇವಾಮಿತ್ರ’ ಎಂಬ ಆ್ಯಪ್ ಮೂಲಕ ಮತದಾರರ ಮಾಹಿತಿಯನ್ನು ಕದಿಯಲಾಗುತ್ತಿದೆ ಎಂಬ ಆರೋಪದ ಮೇಲೆ ಹೈದರಾಬಾದ್ ಮೂಲದ ಐಟಿ ಕಂಪನಿ ವಿರುದ್ಧ ತೆಲಂಗಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಆ್ಯಪ್ ಅನ್ನು ಆಂಧ್ರಪ್ರದೇಶದಲ್ಲಿ ಟಿಡಿಪಿ ಬಳಕೆ ಮಾಡುತ್ತಿದೆ. 

ಪ್ರಕರಣ ದಾಖಲಿಸಿಕೊಂಡು ಕಂಪನಿ ಸಿಬ್ಬಂದಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆಂಧ್ರ ಸಚಿವ ಎನ್.ಲೋಕೇಶ್ ಅವರು ತೆಲಂಗಾಣ ಸರ್ಕಾರದ ವಿರುದ್ಧ ಆರೋಪ ಮಾಡಿದ್ದರು. 

‘ವೈಯಕ್ತಿಕ ಮಾಹಿತಿಯನ್ನು ರಹಸ್ಯವಾಗಿಡಬೇಕಾದ ಸರ್ಕಾರವು ಅದನ್ನು ಪಕ್ಷಕ್ಕೆ ನೀಡುವ ಮೂಲಕ ತಪ್ಪು ಮಾಡುತ್ತಿದೆ’ ಎಂದು ರಾಮರಾವ್ ದೂರಿದ್ದಾರೆ. ಯಾವುದೇ ತಪ್ಪು ಎಸಗಿಲ್ಲ ಎಂದಾದ ಮೇಲೆ ತನಿಖೆ ಎದುರಿಸಲು ಭಯವೇಕೆ ಎಂದು ಅವರು ಟಿಡಿಪಿಯನ್ನು ಪ್ರಶ್ನಿಸಿದ್ದಾರೆ. 

ಮತ್ತೆ ಅಧಿಕಾರಕ್ಕೆ ಬರುವ ಸಲುವಾಗಿ ಟಿಡಿಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದು, ತೆಲಂಗಾಣ ಸರ್ಕಾರದ ವಿರುದ್ಧ ಸುಳ್ಳು ಆರೋಪ ಹೊರಿಸುತ್ತಿದೆ ಎಂದು ರಾಮರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕರಾಚಿ... ಅಲ್ಲಲ್ಲ ಕೊಚ್ಚಿ!

ಜಾಮ್‌ನಗರ: ‘ಆಯುಷ್ಮಾನ್ ಭಾರತ್ ಕಾರ್ಡ್ ಹೊಂದಿರುವ ವ್ಯಕ್ತಿ ಯಾವುದೇ ಸ್ಥಳದಲ್ಲಿ  ಅನಾರೋಗ್ಯಕ್ಕೆ ಒಳಗಾದರೆ, ಅದೇ ಊರಿನಲ್ಲಿ ಚಿಕಿತ್ಸೆ ಪಡೆಯಬಹುದು. ಅದು ಕೋಲ್ಕತ್ತವೇ ಆಗಿರಲಿ ಅಥವಾ ಕರಾಚಿಯೇ ಆಗಿರಲಿ’

–ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು. 

ಸೋಮವಾರ ಇಲ್ಲಿ ನಡೆದ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, ಕೊಚ್ಚಿ ಎನ್ನುವ ಬದಲು ಕರಾಚಿ ಎಂದು ಹೇಳಿ ಸಭಿಕರಿಗೆ ಅಚ್ಚರಿ ಮೂಡಿಸಿದರು. ಮರುಕ್ಷಣದಲ್ಲೇ ಅವರು ಕೊಚ್ಚಿ ಎಂದು ಹೇಳಿ ತಮ್ಮ ಮಾತು ಸರಿಪಡಿಸಿಕೊಂಡರು. 

‘ನಾನು ಹೇಳಿದ್ದು ಕರಾಚಿ ಬಗ್ಗೆ ಅಲ್ಲ, ಕೊಚ್ಚಿ ಬಗ್ಗೆ. ಇತ್ತೀಚಿನ ದಿನಗಳಲ್ಲಿ ನನ್ನ ಮನಸ್ಸು ಪಕ್ಕದ ದೇಶದ ವಿಚಾರಗಳಲ್ಲಿ ಮುಳುಗಿದೆ’ ಎಂದು ಮೋದಿ ಅವರು ತಮ್ಮ ಮಾತಿಗೆ ಸಮಜಾಯಿಷಿ ನೀಡಿದರು. 

***

ವಾಕ್ ಚತುರರು 

ಬಾಲಾಕೋಟ್‌ನಲ್ಲಿ ಉಗ್ರರು ಸತ್ತಿರುವುದಕ್ಕೆ ಸಾಕ್ಷ್ಯಗಳಿಲ್ಲ ಎಂದು ಅಂತರರಾ‌ಷ್ಟ್ರೀಯ ಮಾಧ್ಯಮಗಳಾದ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಲಂಡನ್ ಮೂಲದ ಜೇನ್ ಇನ್ಫರ್ಮೇಷನ್ ಗ್ರೂಪ್, ಡೈಲಿ ಟೆಲಿಗ್ರಾಫ್, ದಿ ಗಾರ್ಡಿಯನ್ ಮತ್ತು ರಾಯಿಟರ್ಸ್‌ ವರದಿ ಮಾಡಿವೆ. ಈ ಬಗ್ಗೆ ಮೋದಿ ಉತ್ತರಿಸಬೇಕು

–ಕಪಿಲ್ ಸಿಬಲ್, ಕಾಂಗ್ರೆಸ್ ಮುಖಂಡ

300 ಉಗ್ರರು ಸತ್ತಿದ್ದಾರೋ, ಇಲ್ಲವೋ? ನೀವು ಬುಡಮೇಲು ಮಾಡಿದ್ದು ಮರಗಳನ್ನೋ ಅಥವಾ ಉಗ್ರಗಾಮಿಗಳನ್ನೋ? ಇದು ಚುನಾವಣೆಯ ತಂತ್ರವೇ? ಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದನ್ನು ಕೈಬಿಡಿ

–ನವಜೋತ್ ಸಿಂಗ್ ಸಿಧು, ಕಾಂಗ್ರೆಸ್ ಮುಖಂಡ

ಬಾಲಾಕೋಟ್‌ನಲ್ಲಿ 300 ಉಗ್ರರು ಸತ್ತಿದ್ದಾರೆ ಎಂಬ ಸುದ್ದಿವಾಹಿನಿಗಳ ವರದಿಯನ್ನು ಕೇಂದ್ರ ಸಚಿವ ಎಸ್.ಎಸ್. ಅಹ್ಲುವಾಲಿಯಾ ಅಲ್ಲಗಳೆದಿದ್ದಾರೆ. ಇದು ಸತ್ಯ. ಒಂದು ವೇಳೆ ಅದು ಸುಳ್ಳಾಗಿದ್ದರೆ, ದೇಶದ ಜನರಿಗೆ ಪ್ರಧಾನಿ ಸತ್ಯ ತಿಳಿಸಬೇಕು

–ರಣದೀಪ್ ಸುರ್ಜೇವಾಲಾ, ಕಾಂಗ್ರೆಸ್ ವಕ್ತಾರ

ಇಡೀ ದೇಶವೇ ನಮ್ಮ ಸಶಸ್ತ್ರಪಡೆಗಳ ಬಗ್ಗೆ ಹೆಮ್ಮೆಪಡುತ್ತಿದೆ. ಪಾಕಿಸ್ತಾನಕ್ಕೆ ನುಗ್ಗಿ ದಾಳಿ ನಡೆಸಿದ ಬಗ್ಗೆ ಸಂದೇಹ ವ್ಯಕ್ತಪಡಿಸಿ ಸಾಕ್ಷ್ಯಗಳನ್ನು ಕೇಳುವುದರಿಂದ ಆ ದೇಶಕ್ಕೆ ಅನುಕೂಲವಾಗುತ್ತದೆ. ಈ ಪ್ರವೃತ್ತಿಯು ಸೇನಾಪಡೆಗಳ ಮೇಲೆ ವಿಶ್ವಾಸವಿಲ್ಲ ಎಂಬುದನ್ನು ತೋರಿಸುತ್ತದೆ

–ಪ್ರಕಾಶ್ ಜಾವಡೇಕರ್, ಕೇಂದ್ರ ಸಚಿವ

ಪಾಕಿಸ್ತಾನದ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದಿನ ಯುಪಿಎ ಸರ್ಕಾರ ಅಂಜುತ್ತಿತ್ತು. ಆದರೆ ಮೋದಿ ಸರ್ಕಾರ ಈ ಪ್ರವೃತ್ತಿಯನ್ನು ಬದಿಗಿರಿಸಿ, ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನಕ್ಕೆ ದಿಟ್ಟತನದ ಉತ್ತರ ನೀಡಿದೆ. 

–ಹರ್ದೀಪ್‌ಸಿಂಗ್ ಪುರಿ, ಕೇಂದ್ರ ಸಚಿವ

Tags: 

ಬರಹ ಇಷ್ಟವಾಯಿತೆ?

 • 11

  Happy
 • 2

  Amused
 • 0

  Sad
 • 0

  Frustrated
 • 7

  Angry

Comments:

0 comments

Write the first review for this !