ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ದಿನ: ಹೆಚ್ಚಲಿದೆ ಪೊಲೀಸ್‌ ಕಣ್ಗಾವಲು

Last Updated 8 ಫೆಬ್ರುವರಿ 2018, 20:10 IST
ಅಕ್ಷರ ಗಾತ್ರ

ಬೆಂಗಳೂರು:‌ ಪ್ರೇಮಿಗಳ ದಿನಾಚರಣೆಗಾಗಿ ಲಾಲ್‌ಬಾಗ್‌ ಹಾಗೂ ಕಬ್ಬನ್‌ ಉದ್ಯಾನಕ್ಕೆ ಹೋಗುವ ಪ್ರೇಮಿಗಳು ತಮ್ಮ ವರ್ತನೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕಿದೆ. ಅಸಭ್ಯವಾಗಿ ನಡೆದುಕೊಂಡರೆ ಪೊಲೀಸರ ಕೆಂಗಣ್ಣಿಗೆ ಗುರಿಯಾಗುವುದು ಖಚಿತ!

ಫೆ.14ರಂದು ಉದ್ಯಾನಗಳಲ್ಲಿ ಅಸಭ್ಯ ಚಟುವಟಿಕೆ ನಡೆಯದಂತೆ ನೋಡಿಕೊಳ್ಳಲು ತೋಟಗಾರಿಕೆ ಇಲಾಖೆ ಪೊಲೀಸರ ನೆರವು ಕೋರಿದೆ. ಹೀಗಾಗಿ ಪ್ರೇಮಿಗಳ ನೆಚ್ಚಿನ ತಾಣ ಎನಿಸಿಕೊಂಡಿರುವ ಎರಡು ಉದ್ಯಾನಗಳಲ್ಲಿ ಅಂದು ಪೊಲೀಸರ ಕಣ್ಗಾವಲು ಹೆಚ್ಚಿರಲಿದೆ. ಕುಟುಂಬ ಸಮೇತರಾಗಿ ಜನ ಉದ್ಯಾನಗಳಿಗೆ ಬರುವುದರಿಂದ ಮುಜುಗರ ಆಗುವಂತಹ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ.

‘ಕೆಲವು ಪ್ರೇಮಿಗಳು ಅಸಭ್ಯವಾಗಿ ನಡೆದುಕೊಳ್ಳುವುದರಿಂದ ಕಬ್ಬನ್‌ ಉದ್ಯಾನಕ್ಕೆ ಈಗಾಗಲೇ ಕೆಟ್ಟ ಹೆಸರು ಬಂದಿದೆ. ಈ ರೀತಿಯ ವರ್ತನೆಗಳನ್ನು ಕಂಡು ಪೋಷಕರು ಅನೇಕ ಬಾರಿ ದೂರು ನೀಡಿದ್ದಾರೆ’ ಎಂದು ಕಬ್ಬನ್ ಉದ್ಯಾನದ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರೇಮಿಗಳ ದಿನದಂದು ಹೆಚ್ಚಿನ ಪೊಲೀಸರನ್ನು ಉದ್ಯಾನಗಳಿಗೆ ಭದ್ರತೆಗೆ ಒದಗಿಸಬೇಕು ಎಂದು ಪೊಲೀಸ್‌ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದ್ದೇವೆ. ಅನೈತಿಕ ಪೊಲೀಸ್‌ಗಿರಿ ಸೇರಿದಂತೆ ಯಾವುದೇ ರೀತಿಯ ಅಸಹಜ ಘಟನೆಗಳು ನಡೆಯದಂತೆ ತಡೆಯಬೇಕೆಂದು ಕೋರಿದ್ದೇವೆ’ ಎಂದು ತೋಟಗಾರಿಕೆ ಇಲಾಖೆಯ ಆಯುಕ್ತ ವೈ.ಎಸ್‌. ಪಾಟೀಲ್‌ ಮಾಹಿತಿ ನೀಡಿದರು.

‘ಪ್ರೇಮಿಗಳ ದಿನದಂದು ಶಾಂತಿನಗರ ಬಳಿಯ ಲಾಲ್‌ಬಾಗ್‌ ದ್ವಾರ ಬಂದ್ ಮಾಡಲಾಗುತ್ತದೆ. ಉಳಿದೆಲ್ಲ ದ್ವಾರಗಳು ತೆರೆದಿರುತ್ತವೆ’ ಎಂದು ತಿಳಿಸಿದರು.

ಕಬ್ಬನ್‌ ಹಾಗೂ ಲಾಲ್‌ಬಾಗ್‌ ಉದ್ಯಾನಗಳಲ್ಲಿ ಒಟ್ಟು 130 ಭದ್ರತಾ ಸಿಬ್ಬಂದಿ ಇದ್ದಾರೆ. 250 ಎಕರೆ ವಿಸ್ತೀರ್ಣದ ಕಬ್ಬನ್‌ ಉದ್ಯಾನದಲ್ಲಿ 10 ಸಿಸಿಟಿವಿ ಕ್ಯಾಮೆರಾಗಳಿವೆ. ‌ಇದರಿಂದ ಸಂಪೂರ್ಣ ಉದ್ಯಾನದ ಮೇಲೆ ನಿಗಾ ವಹಿಸಲು ಸಾಧ್ಯವಿಲ್ಲ ಎಂಬುದು ಲಾಲ್‌ಬಾಗ್‌ ನಡಿಗೆದಾರ ಮಹೇಶ್‌ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT