ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಕೋರ್ಸ್‌ನಲ್ಲಿ ಅವಕಾಶ

ಬಾಗಲಕೋಟೆ ಜಿಲ್ಲೆ: ಎಸ್‌ಎಸ್‌ಎಲ್‌ಸಿ ನಂತರ ಮುಂದೇನು?; ಕಾಲೇಜು ಮೆಟ್ಟಿಲೇರುವ ಕನವರಿಕೆ
Last Updated 28 ಮೇ 2018, 9:56 IST
ಅಕ್ಷರ ಗಾತ್ರ

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಈಗ ಕಾಲೇಜಿಗೆ ಸೇರುವ ಹೊತ್ತು. ಕೆಲವರಿಗೆ ಕೈ ತುಂಬಾ ಅಂಕ ಬಂದಿವೆ ಹಾಗಾಗಿ ಸಾಗುವ ದಾರಿಯಲ್ಲಿ ಅವಕಾಶಗಳು ಮುಕ್ತವಾಗಿವೆ. ನಿರೀಕ್ಷೆಯಷ್ಟು ಅಂಕ ಬರಲಿಲ್ಲ ಎಂಬ ಬೇಸರ ಇನ್ನೂ ಕೆಲವರಿಗೆ! ಅಬ್ಬಾ ಜಸ್ಟ್‌ ಪಾಸ್ ಆದೆನಲ್ಲಾ ಎಂಬ ನೆಮ್ಮದಿ ಮತ್ತಷ್ಟು ಮಂದಿಗೆ... ಇದರ ನಡುವೆ ನಾಳಿನ ಭವಿಷ್ಯಕ್ಕೆ ಇಂದೇ ಅಡಿಪಾಯ ಹಾಕಿಕೊಳ್ಳಬೇಕಾದ ಅನಿವಾರ್ಯತೆ.. ಈಗ ಬದುಕು ಹತ್ತಾರು ಕವಲುಗಳತ್ತ ತೆರೆದುಕೊಳ್ಳುವ ಸಮಯ..

ಮುಂದೇನು ಎಂಬ ಪ್ರಶ್ನೆಗೆ ಪಿಯುಸಿ, ಡಿಪ್ಲೊಮಾ, ಐಟಿಐ, ಜೆಒಸಿ, ಸರ್ಟಿಫಿಕೆಟ್‌ ಕೋರ್ಸ್‌ ಹೀಗೆ ಹತ್ತಾರು ಆಯ್ಕೆಗಳು ವಿದ್ಯಾರ್ಥಿಗಳ ಮುಂದೆ ನಿಲ್ಲುತ್ತವೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳ ಆಯ್ಕೆ ಪದವಿಪೂರ್ವ ಶಿಕ್ಷಣ ಆಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಪಿಯುಸಿ ಅಧ್ಯಯನಕ್ಕೆ ಇರುವ ಅವಕಾಶಗಳ ಅವಲೋಕನದ ಪುಟ್ಟ ಪ್ರಯತ್ನವಿದು..

ವಿಜ್ಞಾನ ವಿಭಾಗ: ಪಿಯುಸಿಯಲ್ಲಿ ವಿಜ್ಞಾನ ವಿಷಯ ಓದಿದಲ್ಲಿ ಮುಂದೆ ವೈದ್ಯಕೀಯ, ಎಂಜಿನಿಯರಿಂಗ್, ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಹೀಗೆ ಬೇರೆ ವೃತ್ತಿಪರಕೋರ್ಸ್‌ಗಳಲ್ಲಿ ಪದವಿ ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದು. ವಿಜ್ಞಾನ ವಿಷಯದಲ್ಲಿ ಪಿಸಿಎಂಬಿ (ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತಶಾಸ್ತ್ರ, ಜೀವಶಾಸ್ತ್ರ), ಪಿಸಿಎಂಇ (ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತಶಾಸ್ತ್ರ, ಎಲೆಕ್ಟ್ರಾನಿಕ್ಸ್), ಪಿಸಿಎಂಸಿ (ಭೌತವಿಜ್ಞಾನ, ರಸಾ ಯನ ವಿಜ್ಞಾನ, ಗಣಿತಶಾಸ್ತ್ರ, ಕಂಪ್ಯೂಟರ್‌ ಸೈನ್ಸ್), ಪಿಸಿಎಂಎಸ್ (ಭೌತವಿಜ್ಞಾನ, ರಸಾಯನ ವಿಜ್ಞಾನ, ಗಣಿತಶಾಸ್ತ್ರ, ಸಂಖ್ಯಾಶಾಸ್ತ್ರ) ಅಧ್ಯಯನಕ್ಕೆ ಅವಕಾಶವಿದೆ.

ಎಂಜಿನಿಯರಿಂಗ್ ಹಾಗೂ ಬೇರೆ ಬೇರೆ ವೃತ್ತಿಪರ ಶಿಕ್ಷಣ ಪಡೆಯಲಿಚ್ಛಿಸುವವರು ಉಳಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ವೃತ್ತಿಪರ ಶಿಕ್ಷಣದತ್ತ ಒಲವು ಇಲ್ಲದವರು ಪಿಯುಸಿಯಲ್ಲಿ ವಿಜ್ಞಾನ ಕಲಿತು ಮುಂದೆ ಬಿಎಸ್‌ಸಿ ಪದವಿ ಪಡೆದು ಸ್ನಾತಕೋತ್ತರ ಪದವಿಯ (ಎಂಎಸ್‌ಸಿ) ನಂತರ ಸಂಶೋಧನಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಲಿದ್ದಾರೆ. ಬಿ.ಇಡಿ, ಎಂ.ಇಡಿ ಮಾಡಿದಲ್ಲಿ ಶಿಕ್ಷಕರಾಗಲೂ ಅವಕಾಶವಿದೆ.

ಕಲಾ ವಿಭಾಗ: ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ಶಾಸ್ತ್ರ, ಶಿಕ್ಷಣ ಶಾಸ್ತ್ರ, ಸಾರ್ವಜನಿಕ ಆಡಳಿತ, ಸಂಖ್ಯಾಶಾಸ್ತ್ರ, ಭೂಗೋಳಶಾಸ್ತ್ರ ಹೀಗೆ 17ಕ್ಕೂ ಹೆಚ್ಚು ವಿಷಯಗಳ ಅಧ್ಯಯನಕ್ಕೆ ಕಲಾವಿಭಾಗದಲ್ಲಿ ಅವಕಾಶವಿದೆ. ಮುಂದೆ ಬಿಎ ಪದವಿ ಪಡೆದು ಬೇರೆ ಬೇರೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು ಉದ್ಯೋಗ ಗಿಟ್ಟಿಸಿಕೊಳ್ಳಲು ಇಲ್ಲವೇ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶವಿದೆ. ಸಂಶೋಧನೆಗೂ ಕಲಾ ವಿಭಾಗದಲ್ಲಿ ಹೆಚ್ಚಿನ ಆಯ್ಕೆಗಳು ಇವೆ. ಪದವಿಯ ನಂತರ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ), ಕೇಂದ್ರೀಯ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕುಳಿತು ಆಡಳಿತಾತ್ಮಕ ಹುದ್ದೆಗಳನ್ನು ಅಲಂಕರಿಸಬಹುದಾಗಿದೆ. ಪಿಯುಸಿ ನಂತರ ಟಿಸಿಎಚ್ ಮಾಡಲು, ಪದವಿ ಪಡೆದು ಬಿಇಡಿ, ಎಂಇಡಿ ಮಾಡಿ ಶಿಕ್ಷಕರಾಗಲೂ ಅವಕಾಶವಿದೆ.

ವಾಣಿಜ್ಯ ವಿಭಾಗ: ಜಾಗತೀಕರಣದ ನಂತರ ಮುಕ್ತ ಆರ್ಥಿಕ ನೀತಿ ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಿದೆ. ಪಿಯುಸಿಯಲ್ಲಿ ವಾಣಿಜ್ಯ ವಿಷಯ ಅಧ್ಯಯನ ನಡೆಸುವ ವಿದ್ಯಾರ್ಥಿಗಳು ಮುಂದೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಲೆಕ್ಕಪರಿಶೋಧನೆ (ಸಿ.ಎ) , ಬ್ಯಾಂಕಿಂಗ್, ವಿಮೆ, ಷೇರು ಮಾರುಕಟ್ಟೆ, ವಾಣಿಜ್ಯ ವಹಿವಾಟು ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಕ್ತ ಅವಕಾಶಗಳಿವೆ..

ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಅವಕಾಶ..

ಜಿಲ್ಲೆಯಲ್ಲಿ ಪಿಯುಸಿ ಪ್ರವೇಶಕ್ಕೆ ಕಾಲೇಜುಗಳ ನಡುವೆ ಪೈಪೋಟಿ ಇದೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಪ್ರವೇಶಾವಕಾಶವಿದೆ. ಕೇವಲ ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ಕ್ರೀಡಾ ಶುಲ್ಕ ಎಂದು ₹200 ಮಾತ್ರ ಪಾವತಿಸಬೇಕಿದೆ. ಉಳಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ
ಕಾಲೇಜುಗಳಲ್ಲಿನ ಸವಲತ್ತು, ಶಿಕ್ಷಣ ವ್ಯವಸ್ಥೆ ಆಧರಿಸಿ ಶುಲ್ಕ ಹಾಗೂ ಇತರೆ ಹಣ ಕೂಡ ಪಾವತಿಸಬೇಕಿದೆ.

ಖಾಸಗಿ ಕಾಲೇಜುಗಳ ಜೊತೆಗೆ ಬಿಸಿಎಂ, ಪರಿಶಿಷ್ಟ ಜಾತಿ ಮತ್ತು ಪಂಗಡದ ಹಾಸ್ಟೆಲ್‌ಗಳು ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ನೆರವಾಗಲಿವೆ. ಕಾಲೇಜು ದಾಖಲಾತಿ ಆಗುತ್ತಿದ್ದಂತೆಯೇ ಹಾಸ್ಟೆಲ್‌ಗಳಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ತೋಟಗಾರಿಕೆ ಸರ್ಟಿಫಿಕೇಟ್ ಕೋರ್ಸ್...

ನವನಗರದ ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ತೋಟಗಾರಿಕೆ ವಿಷಯದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಕೋರ್ಸ್ ಇದೆ.

ತಲಾ 100 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತಿದೆ. ಒಟ್ಟು ನಾಲ್ಕು ಸೆಮಿಸ್ಟರ್‌ನ ಈ ಕೋರ್ಸ್‌ ಮುಗಿಸಿದಲ್ಲಿ ಮುಂದೆ ಬಿಎಸ್‌ಸಿ ತೋಟಗಾರಿಕೆ ವಿಷಯದಲ್ಲಿ ಪದವಿ ಅಧ್ಯಯನಕ್ಕೆ ಶೇ 5ರಷ್ಟು ಮೀಸಲಾತಿ ದೊರೆಯಲಿದೆ. ಜೊತೆಗೆ ಸ್ವ ಉದ್ಯೋಗ ಕೈಗೊಳ್ಳಲು ಅವಕಾಶವಿದೆ.

ಸರ್ಟಿಫಿಕೇಟ್ ಕೋರ್ಸ್ ಮಾತ್ರ ಮುಗಿಸಿದಲ್ಲಿ ಬ್ಯಾಂಕ್, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ತೋಟಗಾರಿಕೆ ಇಲಾಖೆಯಿಂದ ಆರ್ಥಿಕ ನೆರವು ಪಡೆದು ತೋಟಗಾರಿಕೆಗೆ ಪೂರಕವಾದ ಸ್ವಯಂ ಉದ್ಯೋಗಗಳನ್ನು ಪಡೆಯಬಹುದಾಗಿದೆ.

ಜಿಲ್ಲೆಯಲ್ಲಿ ಒಟ್ಟು 123 ಪಿಯು ಕಾಲೇಜು

ಜಿಲ್ಲೆಯಲ್ಲಿರುವ ಪದವಿಪೂರ್ವ ಶಿಕ್ಷಣಕ್ಕೆ 40 ಸರ್ಕಾರಿ ಕಾಲೇಜು, 42 ಅನುದಾನಿತ, 41 ಅನುದಾನರಹಿತ ಸೇರಿದಂತೆ ಒಟ್ಟು 123 ಕಾಲೇಜುಗಳಿವೆ.

ಇದರಲ್ಲಿ ಪಿಸಿಎಂಬಿ ಅಧ್ಯಯನ ವಿಭಾಗ 16 ಕಾಲೇಜುಗಳಲ್ಲಿದೆ. ಪಿಸಿಎಂಎಸ್‌ 10 ಕಾಲೇಜು, ಪಿಸಿಎಂಇ ಎರಡು ಕಾಲೇಜುಗಳಲ್ಲಿ (ಮುಧೋಳದ ಸಾಯಿನಿಕೇತನ, ಜಮಖಂಡಿಯ ತುಂಗಳ ಕಾಲೇಜು) ಅಧ್ಯಯನಕ್ಕೆ ಅವಕಾಶವಿದೆ.

ಮುಂದೆ ವೈದ್ಯಕೀಯ ಶಿಕ್ಷಣ, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಶಿಕ್ಷಣ ಪಡೆಯುವವರು ಪಿಸಿಎಂಬಿ ಕಲಿಯಲು ಆದ್ಯತೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT