ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮಸ್ಕಾರ ಹೇಳದಿದ್ದಕ್ಕೆ ವಿದ್ಯಾರ್ಥಿಗೆ ಥಳಿತ: ಪ್ರಾಚಾರ್ಯ ಅಮಾನತು

ರಾಷ್ಟ್ರೀಯ ಸಂಕ್ಷಿಪ್ತ ಸುದ್ದಿಗಳು
Last Updated 17 ಡಿಸೆಂಬರ್ 2018, 20:33 IST
ಅಕ್ಷರ ಗಾತ್ರ

ಷಹಜಹಾನ್‌ಪುರ (ಉತ್ತರ ಪ್ರದೇಶ): ನಮಸ್ಕಾರ (ಸಲಾಮ್‌–ಅಲೈಕುಂ) ಹೇಳದಿದ್ದಕ್ಕೆ ಕೋಪಗೊಂಡು ವಿದ್ಯಾರ್ಥಿಯನ್ನು ಥಳಿಸಿದ್ದ ಪ್ರಾಚಾರ್ಯರೊಬ್ಬರನ್ನು ಅಮಾನತು ಮಾಡಲಾಗಿದೆ.

ಇಲ್ಲಿನ ತಿಲ್ಹಾರ್‌ನಲ್ಲಿರುವ ಬಿಲ್ಹಾರಿ ಶಾಲೆಯ ಪ್ರಾಚಾರ್ಯ ಚಾಂದ್‌ ಮಿಯಾನ್‌ ಅಮಾನತು ಶಿಕ್ಷೆಗೊಳಗಾದವರು. ಸ್ಥಳೀಯರೊಂದಿಗೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ಆರನೇ ತರಗತಿ ವಿದ್ಯಾರ್ಥಿ ಪ್ರಿಯಾಂಶು, ಪ್ರಾಚಾರ್ಯರ ವಿರುದ್ಧ ದೂರು ನೀಡಿದ್ದಾನೆ. ವಿದ್ಯಾರ್ಥಿಯ ಕುತ್ತಿಗೆಯ ಮೇಲೆ ಆಗಿದ್ದ ಗಾಯದ ಗುರುತುಗಳನ್ನು ನೋಡಿದ ನಂತರ, ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

ಮಹಿಳೆ ಬಂಧನ
ನವದೆಹಲಿ (ಪಿಟಿಐ):
ಯಾವುದೇ ವಹಿವಾಟು ನಡೆಸದೆ ನಕಲಿ ಜಿಎಸ್‌ಟಿ ಇನ್‌ವಾಯ್ಸ್‌ಗಳನ್ನು (ಸರಕು ಮತ್ತು ಸೇವೆಗಳ ಖರೀದಿ, ಮಾರಾಟಕ್ಕೆ ಸಂಬಂಧಿಸಿದ ಬೆಲೆ ಪಟ್ಟಿ) ನೀಡಿದ ಹಾಗೂ ₹42.93 ಕೋಟಿ ಮೊತ್ತಕ್ಕೆ ಇನ್‌ಪುಟ್‌ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಪಡೆದುಕೊಳ್ಳಲು ನೆರವು ನೀಡಿದ ಆರೋಪದ ಮೇಲೆ ಮೂರು ಕಂಪನಿಗಳ ನಿರ್ದೇಶಕಿಯೊಬ್ಬರನ್ನು ಬಂಧಿಸಲಾಗಿದೆ.

ಬಾಲಕಿ ಪತ್ತೆಗೆ ನೆರವಾದ ‘ದರ್ಪಣ್‌’
ಹೈದರಾಬಾದ್ (ಪಿಟಿಐ): ನಾಪತ್ತೆಯಾಗಿದ್ದ ಬಾಲಕಿಯೊಬ್ಬಳು ತೆಲಂಗಾಣ ಪೊಲೀಸರು ಅಭಿವೃದ್ಧಿ ಪಡಿಸಿರುವ ಮುಖಚಹರೆ ಗುರುತಿಸುವಿಕೆ ತಂತ್ರಜ್ಞಾನದ ನೆರವಿನಿಂದಾಗಿ ಪೋಷಕರ ಮಡಿಲು ಸೇರಿದ್ದಾಳೆ.

ಅಸ್ಸಾಂನ ಲಖಿಂಪುರ್‌ನಗರದ ಅಂಜಲಿ ಟಿಗ್ಗಾಳನ್ನು ಜೀವನೋಪಾಯಕ್ಕಾಗಿ ‍ಪೋಷಕರು ದೆಹಲಿಯಲ್ಲಿ ಕೆಲಸಕ್ಕೆ ಸೇರಿಸಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಪೋಷಕರಿಗೆ ತಿಳಿಸದೆ ಅಸ್ಸಾಂಗೆ ಮರಳಿದ ಆಕೆ, ಸೋನಿತ್ಪುರ್‌ ಜಿಲ್ಲೆಯ ಸಮೀಪ ಕೆಲಸಕ್ಕೆ
ಸೇರಿದ್ದಳು. ಈಕೆಯನ್ನು ಗಮನಿಸಿದ ರೈಲ್ವೆ ಪೊಲೀಸರು ಮಕ್ಕಳ ಕಲ್ಯಾಣ ಕೇಂದ್ರದ ಸುಪರ್ದಿಗೆ ಕೊಟ್ಟಿದ್ದರು.

ಮತ್ತೆ ಬಂಧನ
ಪಾಲಕ್ಕಾಡ್ (ಪಿಟಿಐ): ಅಯ್ಯಪ್ಪ ಧರ್ಮಸೇನಾದ ನಾಯಕ ರಾಹುಲ್ ಈಶ್ವರ್‌ಗೆ ನೀಡಲಾಗಿದ್ದ ಜಾಮೀನನ್ನುಸ್ಥಳೀಯ ನ್ಯಾಯಾಲಯ ಹಿಂಪಡೆದ ಎರಡು ದಿನಗಳ ಬಳಿಕ, ಸೋಮವಾರ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಎಲ್ಲ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಅನುಮತಿ ನೀಡಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ ಶಬರಿಮಲೆಯಲ್ಲಿ ನಡೆದ ಭಾರಿ ಪ್ರತಿಭಟನೆಗೆ ರಾಹುಲ್ ನೇತೃತ್ವ ವಹಿಸಿಕೊಂಡಿದ್ದರು.

ಆನ್‌ಲೈನ್‌ನಲ್ಲಿ ಔಷಧ ಮಾರಾಟ ನಿಷೇಧ
ಚೆನ್ನೈ (ಪಿಟಿಐ): ಕೇಂದ್ರ ಸರ್ಕಾರ ಕಾನೂನುಬದ್ಧಗೊಳಿಸುವವರೆಗೂ ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ಮದ್ರಾಸ್‌ ಹೈಕೋರ್ಟ್‌ ನಿಷೇಧಿಸಿದೆ. ಜನವರಿ 31ರೊಳಗೆ ಸೂಕ್ತ ಕಾನೂನು ನಿಯಮಾವಳಿಗಳ ಅಧಿಸೂಚನೆ ಹೊರಡಿಸುವಂತೆ ಅದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT