ಲೋಕಸಭಾ ಚುನಾವಣೆ: ಬಿಜೆಪಿಗೆ ತಿರುಗೇಟು ನೀಡಿದ ಶಿವಸೇನೆ

7
43 ಕ್ಷೇತ್ರದಲ್ಲಿ ಪಕ್ಷಕ್ಕೆ ಗೆಲುವು– ಫಡಣವೀಸ್ ವಿಶ್ವಾಸ

ಲೋಕಸಭಾ ಚುನಾವಣೆ: ಬಿಜೆಪಿಗೆ ತಿರುಗೇಟು ನೀಡಿದ ಶಿವಸೇನೆ

Published:
Updated:
Prajavani

ಮುಂಬೈ: ಮಹಾರಾಷ್ಟ್ರದ 48 ಲೋಕಸಭಾ ಕ್ಷೇತ್ರಗಳ ಪೈಕಿ 43ರಲ್ಲಿ  ಪಕ್ಷ ಗೆಲುವು ಪಡೆಯಲಿದೆ ಎಂಬ ಬಿಜೆಪಿ ಹೇಳಿಕೆಯು ’ನೈಜತೆಗಿಂತ ದೂರವಾದುದು‘ ಶಿವಸೇನಾ ಲೇವಡಿ ಮಾಡಿದೆ.

’ರಾಜ್ಯದ ಪರಿಸ್ಥಿತಿ ಶೋಚನೀಯವಾಗಿದ್ದು, ಸಾಕಷ್ಟು ಸಮಸ್ಯೆ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಅಷ್ಟೊಂದು ಸೀಟುಗಳನ್ನು ಹೇಗೆ ಗೆಲ್ಲಲು ಸಾಧ್ಯ?‘ ಎಂದು ಪಕ್ಷದ ಮುಖವಾಣಿ ’ಸಾಮ್ನಾ‘ ಸಂಪಾದಕೀಯದಲ್ಲಿ ಪ್ರಶ್ನಿಸಿದೆ.

’ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದಿಂದ ನಡೆಸಲ್ಪಡುವ  ಬಾಲಮಂದಿರ ಕೇಂದ್ರಗಳಲ್ಲಿ 1ಸಾವಿರಕ್ಕೂ ಹೆಚ್ಚಿನ ಮಕ್ಕಳು ಸಾವನ್ನಪ್ಪಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 24 ಸಾವಿರಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿವೆ. ಈರುಳ್ಳಿ ಮತ್ತು ಹಾಲಿನ ಉತ್ಪಾದಕರಿಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಅಹ್ಮದ್‌ನಗರದಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಸರ್ಕಾರ ಪೊಲೀಸ್‌ ಬಲಪ್ರಯೋಗ ಮಾಡಿದೆ‘ ಎಂದು ಫಡಣವೀಸ್‌ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ 48 ಲೋಕಸಭಾ ಕ್ಷೇತ್ರಗಳಿದ್ದು, ದೇಶದಲ್ಲೇ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಎರಡನೇ ಅತೀ ದೊಡ್ಡ ರಾಜ್ಯವಾಗಿದೆ. ’2014ಕ್ಕೆ ಹೋಲಿಸಿದರೆ, ಒಂದು ಹೆಚ್ಚಿನ ಸೀಟು ಅಂದರೆ 43 ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಪಡೆಯಲಿದೆ‘ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಪಕ್ಷದ ಸಭೆಯಲ್ಲಿ ಶನಿವಾರ ತಿಳಿಸಿದ್ದರು.

ಶಿವಸೇನಾ ಪಕ್ಷವೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದು, ಕೇಂದ್ರ ಸರ್ಕಾರ ಮತ್ತು ಮಹಾರಾಷ್ಟ್ರ ಸರ್ಕಾರದಲ್ಲಿ ಪಾಲುದಾರ ಪಕ್ಷವಾಗಿದೆ. ಭವಿಷ್ಯದ ಎಲ್ಲ ಚುನಾವಣೆಗಳಲ್ಲಿ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಈಗಾಗಲೇ ಘೋಷಿಸಿದೆ.

ಹೀಗಿದ್ದರೂ, ಶಿವಸೇನಾ ಜೊತೆಗೆ ಲೋಕಸಭಾ ಚುನಾವಣಾ ಮೈತ್ರಿ ಮಾಡಿಯೇ ಕಣಕ್ಕಿಳಿಯುವ ಬಗ್ಗೆ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !