ಪ್ರಧಾನಿ ಮೋದಿ ಭ್ರಮೆಯಿಂದ ಹೊರಬರಲಿ: ಶಿವಸೇನಾ

7
ಬಡವರಿಗಾಗಿ ಕೆಲಸ ಮಾಡಲು ಸಲಹೆ

ಪ್ರಧಾನಿ ಮೋದಿ ಭ್ರಮೆಯಿಂದ ಹೊರಬರಲಿ: ಶಿವಸೇನಾ

Published:
Updated:

ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರು ‘ಭ್ರಮೆ’ಯಿಂದ ಹೊರಬರಲು ಇದು ಸೂಕ್ತ ಸಮಯ. ಅವರು ಇನ್ನಾದರೂ ಬಡವರಿಗಾಗಿ ಏನನ್ನಾದರೂ ಮಾಡಲಿ ಎಂದು ಶಿವಸೇನಾ ಹೇಳಿದೆ.

ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಉಲ್ಲೇಖಿಸಿ ಸೇನಾ ಈ ಹೇಳಿಕೆ ನೀಡಿದೆ. ಬಾಂದ್ರಾದಲ್ಲಿ ಒಂದೇ ಕುಟುಂಬದ ನಾಲ್ವರು ಮತ್ತು ಮುಂಬೈನಲ್ಲಿ ಒಂದೇ ಕುಟುಂಬದ ಮೂವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇಂತಹ ಹಲವು ಪ್ರಕರಣಗಳು ಇತ್ತೀಚೆಗೆ ರಾಜ್ಯದಲ್ಲಿ ನಡೆದಿವೆ.

‘ಬಡವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲ. ಬುಲೆಟ್ ಟ್ರೈನ್, ಮೆಟ್ರೊ, ಹೈಪರ್ ಸಿಟಿಯಂಥ ದುಬಾರಿ ಯೋಜನೆಗಳು ಆತ್ಮಹತ್ಯೆಯನ್ನು ತಡೆಯುವುದಿಲ್ಲ’ ಎಂದು ಪಕ್ಷದ ಮುಖವಾಣಿ ಸಾಮ್ನಾದಲ್ಲಿ ಉಲ್ಲೇಖಿಸಲಾಗಿದೆ.

ಬ್ರಿಟಿಷರ ಆಡಳಿತದ ಜತೆ ಹೋಲಿಕೆ: ‘ಅಧಿಕಾರದಲ್ಲಿರುವವರು ರಾಜಕಾರಣ, ಪಕ್ಷದ ಚಟುವಟಿಕೆಗಳಲ್ಲಿ ವ್ಯಸ್ತರಾಗಿದ್ದಾರೆ. ಬ್ರಿಟಿಷರ ಆಡಳಿತವನ್ನು ಕೆಲವು ಜನ ದೇವರ ಆಶೀರ್ವಾದವೆಂದೇ ಭಾವಿಸಿದ್ದಲ್ಲದೆ ಸ್ವಾಗತಿಸಿದ್ದರು. ಅದೇ ರೀತಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿರುವ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರವನ್ನೂ ಅನೇಕರು ದೇವರ ಆಶೀರ್ವಾದ ಎಂದೇ ಪರಿಗಣಿಸಿದ್ದಾರೆ.

ವಾಸ್ತವದಲ್ಲಿ ಮಹಾರಾಷ್ಟ್ರದ ಸ್ಥಿತಿ ಗಂಭೀರವಾಗಿದೆ. ಅರಾಜಕತೆ, ಹಸಿವು ತಾಂಡವವಾಡುತ್ತಿದೆ. ಜೀವಿಸುವುದು ಕಷ್ಟವಾಗುತ್ತಿರುವುದರಿಂದ ಸಾಮಾನ್ಯ ಜನ ಕುಟುಂಬದ ಸದಸ್ಯರ ಜತೆ ಸಾವಿಗೆ ಶರಣಾಗುತ್ತಿದ್ದಾರೆ’ ಎಂದು ಸೇನಾ ಹೇಳಿದೆ.

ಇದು ನಿಮ್ಮ ಅಚ್ಛೇ ದಿನವೇ?: ‘ಇಲ್ಲಿಯವರೆಗೆ ವಿದರ್ಭದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಇದೀಗ ಮುಂಬೈ ಮತ್ತು ಮಹಾರಾಷ್ಟ್ರದ ಇತರ ಪ್ರದೇಶಗಳಲ್ಲಿ ಹಸಿವು ಮತ್ತು ಬಡತನದಿಂದಾಗಿ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ನಿಮ್ಮ ಅಚ್ಛೇ ದಿನವೇ’ ಎಂದು ಪ್ರಶ್ನಿಸಲಾಗಿದೆ.

ಬಿಜೆಪಿಯ ಸಂಪರ್ಕ ಅಭಿಯಾನದ ಬಗ್ಗೆ ವ್ಯಂಗ್ಯವಾಡಿರುವ ಸೇನಾ, ಆಡಳಿತಾರೂಢ ಪಕ್ಷದವರು ಬಾಲಿವುಡ್ ತಾರೆಯರನ್ನು, ಕೈಗಾರಿಕೋದ್ಯಮಿಗಳನ್ನು ಭೇಟಿಯಾಗುತ್ತಿದ್ದಾರೆ. ಬಡವರ ಸಂಪರ್ಕ ಕಳೆದುಕೊಂಡಿದ್ದಾರೆ ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 2

  Sad
 • 1

  Frustrated
 • 3

  Angry

Comments:

0 comments

Write the first review for this !