ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯೋಜನವಾಗದ ನೀತಿ: ಸಂಕಷ್ಟದಲ್ಲಿ ಜವಳಿ ಉದ್ಯಮ

Last Updated 24 ಏಪ್ರಿಲ್ 2018, 19:16 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಜವಳಿ ಅತ್ಯಂತ ಯಶಸ್ವಿ ಉದ್ಯಮ. ಹೂಡಿಕೆಗೆ ಪ್ರಶಸ್ತ ತಾಣ ಎನ್ನುವ ಭಾವನೆ ಇದೆ. ಆದರೆ, ಉದ್ಯಮದ ಒಳನೋಟ ಹೇಳುವುದೇ ಬೇರೆ. ಕಳೆದ ಒಂದು ವರ್ಷದಿಂದ ತಯಾರಿಕೆ, ರಫ್ತು ಕಡಿಮೆಯಾಗುತ್ತಿರುವುದಷ್ಟೇ ಅಲ್ಲ, ನಷ್ಟದಿಂದ ಬಾಗಿಲು ಮುಚ್ಚುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅನೇಕರು ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ.

ರಾಜ್ಯದಲ್ಲಿ ಉದ್ಯಮದ ಬೆಳವಣಿಗೆಗೆ ಪೂರಕವಾದ ವಾತಾವರಣ ಇದೆ. ಉತ್ತಮ ಮೂಲಸೌಕರ್ಯ, ಹೂಡಿಕೆಗೆ ಹೇರಳ ಅವಕಾಶ, ಉದ್ಯಮ ಸ್ನೇಹಿ ನೀತಿಯು ಹೊಸದಾಗಿ ಉದ್ಯಮ ಸ್ಥಾಪಿಸ ಬಯಸುವವರಿಗೂ ಉತ್ತೇಜನ ನೀಡುತ್ತಿದೆ ಎನ್ನುವುದು ತಜ್ಞರು, ಕೆಲವು ಉದ್ಯಮಿಗಳ ಅಭಿಪ್ರಾಯ. ವಾಸ್ತವದಲ್ಲಿ, ಜವಳಿ ಉದ್ಯಮದ ಭವಿಷ್ಯವನ್ನು ಕಲ್ಪಿಸಿಕೊಳ್ಳುವುದೂಕಷ್ಟವಾಗುತ್ತಿದೆ ಎನ್ನುತ್ತಾರೆ ಬೆಂಗಳೂರಿನಲ್ಲಿ ಸಣ್ಣ ಪ್ರಮಾಣದಲ್ಲಿ ಕಾರ್ಖಾನೆ ನಡೆಸುತ್ತಿರುವ, ಹೆಸರು ಹೇಳಲು ಇಚ್ಛಿಸದ ಮಹಿಳಾ ಉದ್ಯಮಿ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕಾರ್ಮಿಕರ ವೇತನ ಹೆಚ್ಚಿಗೆ ಇದೆ. ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕಡಿಮೆ ಕೂಲಿಗೆ ಕಾರ್ಮಿಕರು ಸಿಗುತ್ತಾರೆ ಎನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಇರುವ ಕಾರ್ಖಾನೆಯನ್ನು ಮುಚ್ಚಿ ಅಲ್ಲಿತೆರೆಯುತ್ತಿದ್ದಾರೆ. ಇದರಿಂದ ಜೀವ
ನೋಪಾಯಕ್ಕಾಗಿ ಗಾರ್ಮೆಂಟ್ಸ್ ಕಾರ್ಖಾನೆಗಳನ್ನು ಅವಲಂಬಿಸಿದ್ದ ಮಹಿಳೆಯರು ಕೆಲಸ ಕಳೆದುಕೊಳ್ಳುತ್ತಿದ್ದಾರೆ.

ಜವಳಿ ರಫ್ತು ಮೇಲಿನ ಸುಂಕ ವಾಪಸಾತಿಯನ್ನು ಶೇ 7.7ರಿಂದ ಶೇ 2ಕ್ಕೆ ಇಳಿಕೆ ಮಾಡಲಾಗಿದೆ. ಇದರಿಂದ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಬಾಂಗ್ಲಾದೇಶದಲ್ಲಿ ಕಡಿಮೆ ಬೆಲೆಗೆ ಉತ್ಪನ್ನಗಳುಸಿಗುತ್ತಿರುವುದರಿಂದ ಭಾರತದಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ರಫ್ತು ಆರ್ಡರ್ ಬರುವುದು ತೀರಾ ಕಡಿಮೆಯಾಗಿದೆ.

ಸಂಕಷ್ಟದಲ್ಲಿ ಸಣ್ಣ ಉದ್ಯಮ: ದೊಡ್ಡ ಪ್ರಮಾಣದಲ್ಲಿ ಉದ್ಯಮ ನಡೆಸುತ್ತಿರುವವರಿಗೆ ಸದ್ಯದ ಮಟ್ಟಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ 20ರಿಂದ 30 ಯಂತ್ರಗಳನ್ನಷ್ಟೇ ಇಟ್ಟುಕೊಂಡಿರುವ ಕಾರ್ಖಾನೆಗಳಲ್ಲಿಶೇ 90ರಷ್ಟು ಮುಚ್ಚಿವೆ.

‘ದೊಡ್ಡ ದೊಡ್ಡ ಕಂಪನಿಗಳು ಸಣ್ಣ ಕಾರ್ಖಾನೆಗಳಿಂದ ಸಿದ್ಧ ಉಡುಪು ಖರೀದಿಸುತ್ತಿವೆ. ಮೇಲ್ನೋಟಕ್ಕೆ ಅವು ಸಣ್ಣ ಉದ್ಯಮಕ್ಕೆ ನೆರವಾಗುತ್ತಿವೆ ಎಂದು ಕಾಣಿಸುತ್ತದೆ. ಆದರೆ ಪರಿಸ್ಥಿತಿ ಹಾಗಿಲ್ಲ. ಅವರು ನಮ್ಮಿಂದ ಅತಿ ಕಡಿಮೆ ಬೆಲೆಗೆ ಅಂದರೆ ₹ 300ಕ್ಕೆ ಕೊಂಡು ಅದನ್ನು ಬ್ರ್ಯಾಂಡ್ ಅಡಿ ₹1,500ಕ್ಕೆ ಮಾರಾಟ ಮಾಡಿ ಭಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಉತ್ಪನ್ನದ ತಯಾರಿಕಾ ವೆಚ್ಚ ಸಿಕ್ಕರೆ ಮಾತ್ರ ಕಾರ್ಮಿಕರಿಗೆ ವೇತನ ಕೊಡಲು ಸಾಧ್ಯ. ಈ ದೊಡ್ಡ ಕಂಪನಿಗಳು ಕಡಿಮೆ ಬೆಲೆ ನೀಡುತ್ತಿವೆ.

ಹೀಗಾಗಿ ಸಾಲ ಮಾಡಿ ಉದ್ಯಮ ಸ್ಥಾಪಿಸಿದ ಒಂದರಿಂದ ಎರಡು ವರ್ಷದಲ್ಲಿಯೇ ಮುಚ್ಚುವ ಪರಿಸ್ಥಿತಿಗೆ ಬಂದು ತಲುಪುತ್ತೇವೆ. ಹಾಗಂತ ಆ ಕಂಪನಿಗಳಿಗೇನೂ ನಷ್ಟ ಆಗುವುದಿಲ್ಲ. ಏಕೆಂದರೆ ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆ ಆಗುವ ಫ್ಯಾಕ್ಟರಿಗಳಿಗೇನೂ ಬರಗಾಲ ಇಲ್ಲ. ಒಂದೊಮ್ಮೆ ನಾವು ಸ್ವಲ್ಪ ಹೆಚ್ಚು ದುಡ್ಡು ಕೊಡಿ ಎಂದು ಕಂಪನಿಯನ್ನು ಕೇಳಿದರೆ ಮುಂದಿನ ಸಲದಿಂದ ನಮಗೆ ಆರ್ಡರ್ ಕೊಡುವುದೇ ಇಲ್ಲ’ ಎಂದು ಉದ್ಯಮಿ ಹೇಳಿದರು.

‘ಈ ಸಮಸ್ಯೆ ಬಗ್ಗೆ ರಾಜ್ಯ ಸರ್ಕಾರದ ಬಳಿ ಹಲವು ಬಾರಿ ಅಲವತ್ತುಕೊಂಡಿದ್ದೇವೆ. ಆದರೆ ಕೇಳಿಸಿಕೊಳ್ಳುವುದಕ್ಕೇ ಸಿದ್ಧವಿಲ್ಲ. ಕಾರ್ಮಿಕರಿಗೆ ಕನಿಷ್ಠ ವೇತನ ಇರುವಂತೆ ಫ್ಯಾಕ್ಟರಿ ನಡೆಸುವವರಿಗೂ ಖರೀದಿದಾರರಿಂದ ನ್ಯಾಯೋಚಿತವಾದ ಒಂದು ನಿರ್ದಿಷ್ಟ ಮೊತ್ತ ಸಿಗಬೇಕು. ಆದರೆ, ಹಾಗಾಗುತ್ತಿಲ್ಲ’ ಎಂದರು.

ಗಂಭೀರವಾಗಿ ಪರಿಗಣಿಸುತ್ತಿಲ್ಲ: ‘ಹೊಸ ಜವಳಿ ನೀತಿಯಿಂದ ಸಣ್ಣ ಉದ್ಯಮಕ್ಕೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಫ್ಯಾಕ್ಟರಿಗಳು ಮುಚ್ಚುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನವೋದ್ಯಮ ಸ್ಥಾಪನೆಗೆ ಉತ್ತೇಜನ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಕೇವಲ ಅದರಿಂದ ಏನೂ ಪ್ರಯೋಜನ ಇಲ್ಲ. ನೆರವು ಸಿಕ್ಕ ಮಾತ್ರಕ್ಕೆ ಉದ್ಯಮ ಸ್ಥಾಪಿಸಿದರೆ ನಂತರ ತಯಾರಿಕಾ ವೆಚ್ಚ, ಕಾರ್ಮಿಕರಿಗೆ ವೇತನ ಕೊಡಲು ಹಣ ಇರಬೇಕಲ್ಲ. ಬ್ರ್ಯಾಂಡೆಡ್ ಕಂಪನಿಗಳು ತಮ್ಮ ಮನಸ್ಸಿಗೆ ಬಂದಷ್ಟು ಮಾತ್ರವೇ ಬೆಲೆ ನೀಡುತ್ತಿರುವುದರಿಂದ ಉದ್ಯಮ ನಡೆಸುವುದು ಕಷ್ಟವಾಗುತ್ತದೆ’ ಎನ್ನುತ್ತಾರೆ ಬೆಂಗಳೂರಿನಲ್ಲಿ ಸಣ್ಣ ಕಾರ್ಖಾನೆಗಳನ್ನು ನಡೆಸುತ್ತಿರುವ ಉದ್ಯಮಿಯೊಬ್ಬರು.

ಎಷ್ಟು ಕಾರ್ಖಾನೆಗಳು ಮುಚ್ಚುವುದೋ ಗೊತ್ತಿಲ್ಲ: ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿಯೇ ಕನಿಷ್ಠ 20 ಸಣ್ಣ ಕಾರ್ಖಾನೆಗಳು ಮುಚ್ಚಿವೆ. ನಗರದಲ್ಲಿ ಇರುವ ಪ್ರಮುಖ ದೊಡ್ಡ ಉದ್ಯಮಗಳಲ್ಲಿ ಶೇ 20ರಷ್ಟು ಬೇರೆ ರಾಜ್ಯಗಳತ್ತ ಮುಖಮಾಡಿವೆ. ರಫ್ತು ಮಾಡಲು ಅನುಕೂಲಕರ ವಾತಾವರಣ ಇಲ್ಲದೇ ಇರುವುದರಿಂದ ಕೆಲವು ಉದ್ಯಮಗಳು ದೇಶದಲ್ಲಿ ವಹಿವಾಟು ನಡೆಸುತ್ತಿವೆ. ಆದರೆ ಕನಿಷ್ಠ ವೇತನ ನಿಯಮದಲ್ಲಿ ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ಅವರಿಗೆ ವಹಿವಾಟು ನಡೆಸುವುದು ಕಷ್ಟವಾಗಲಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಇನ್ನೂ ಎಷ್ಟು ಉದ್ಯಮಗಳು ಬಾಗಿಲು ಮುಚ್ಚಿಕೊಂಡು ಹೋಗಲಿವೆಯೋ ಎಂದು ಈಗಲೇ ಹೇಳುವುದು ಕಷ್ಟ ಎನ್ನುತ್ತಾರೆ ಅವರು.

ಪರವಾನಗಿ ರದ್ದು ಮಾಡಿ: ‘ರಾಜ್ಯದಲ್ಲಿ ವ್ಯಾಪಾರ ಪರವಾನಗಿ ರದ್ದುಪಡಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುತ್ತಿದ್ದೇವೆ. ಆದರೆ ಇದುವರೆಗೂ ಸ್ಪಂದಿಸಿಲ್ಲ. ವಾಣಿಜ್ಯ ಮತ್ತು ಕೈಗಾರಿಕಾ ಕಾಯ್ದೆ, ಬಿಬಿಎಂಪಿ ಕಾಯ್ದೆಯಲ್ಲಿಯೂ ನೋಂದಣಿ ಆಗಿದ್ದೇವೆ. ಹೀಗಿರುವಾಗ ವ್ಯಾಪಾರ ಪರವಾನಗಿ ಅಗತ್ಯವಾದರೂ ಏನು’ ಎಂದು ಕರ್ನಾಟಕ ಕೈಮಗ್ಗ ಮತ್ತು ಜವಳಿ ಒಕ್ಕೂಟದ ಮಾಜಿ ಅಧ್ಯಕ್ಷ ಸಜ್ಜನ್ ರಾಜ್ ಮೆಹ್ತಾ ಸರ್ಕಾರವನ್ನು ಪ್ರಶ್ನೆ ಮಾಡುತ್ತಾರೆ.

‘ರಾಜ್ಯದಲ್ಲಿ ಉದ್ಯಮದ ಬೆಳವಣಿಗೆಗೆ ಸರ್ಕಾರ ಕೈಗೊಳ್ಳುತ್ತಿರುವ ಯೋಜನೆಗಳ ಬಗ್ಗೆ ಸಮಾಧಾನವಿದೆ. ಆದರೆ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ (ಎಂಎಸ್ಎಂಇ) ಅಭಿವೃದ್ಧಿಗೆ ವ್ಯಾಪಾರ ಪರವಾನಗಿ ರದ್ದುಪಡಿಸುವ ಅಗತ್ಯ ಇದೆ. ಈ ಬಗ್ಗೆ ಹಲವು ಬಾರಿ ಸರ್ಕಾರದ ಗಮನ ಸೆಳೆದಿದ್ದರೂ ಪ್ರಯೋಜನ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಸಿದ್ಧ ಉಡುಪು ತಯಾರಿಕೆ ಹೆಚ್ಚಾಗುತ್ತಿದೆ. ಶರ್ಟ್ ಮತ್ತು ಪ್ಯಾಂಟ್ ತಯಾರಿಕೆಯಲ್ಲಿ ದೇಶದಲ್ಲಿಯೇ ಬೆಂಗಳೂರು ಮುಂಚೂಣಿಯಲ್ಲಿದೆ. ಹೀಗಾಗಿ ಸರ್ಕಾರ ಇನ್ನಷ್ಟು ಸುಧಾರಣೆಗಳನ್ನು ತರಲು ಗಮನ ನೀಡುವುದು ಒಳಿತು. ಇದರಿಂದ ಉದ್ಯಮದ ಬೆಳವಣಿಗೆಯಾಗುವ ಜತೆಗೆ ರಾಜ್ಯದ ಪ್ರಗತಿಯೂ ಆಗಲಿದೆ’ ಎನ್ನುತ್ತಾರೆ ಅವರು.

ಜಿಎಸ್‌ಟಿ ತಗ್ಗಿಸಿ: ‘ಜವಳಿ ಉದ್ಯಮಕ್ಕೆ ವಿಧಿಸಿರುವ ತೆರಿಗೆಯನ್ನು ಕಡಿಮೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ₹ 1000ದ ಒಳಗಿನ ಉಡುಪುಗಳಿಗೆ ಶೇ 5 ಮತ್ತು ₹ 1000ಕ್ಕೂ ಹೆಚ್ಚಿನ ಮೊತ್ತದ ಉಡುಪುಗಳಿಗೆ ಶೇ 12ರಷ್ಟು ತೆರಿಗೆ ವಿಧಿಸಲಾಗಿದೆ. ಇದನ್ನು ಕೈಬಿಟ್ಟು ಜವಳಿ ಉದ್ಯಮಕ್ಕೆ ಏಕರೂಪದ ಶೇ 5ರಷ್ಟು ತೆರಿಗೆ ವಿಧಿಸುವಂತೆ ಕೇಂದ್ರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಹಣಕಾಸು ಸಚಿವ ಅರುಣ್ ಜೇಟ್ಲಿ, ಜವಳಿ ಸಚಿವೆ ಸ್ಮೃತಿ ಇರಾನಿ ಅವರನ್ನೂ ಭೇಟಿ ಮಾಡಿ ತೆರಿಗೆ ತಗ್ಗಿಸಲು ಒತ್ತಾಯಿಸಲಾಗಿದೆ’.

‘ಸರಕು ಮತ್ತು ಸೇವಾ ತೆರಿಗೆಗೆ ನಮ್ಮ ವಿರೋಧ ಇಲ್ಲ ಎನ್ನುವುದನ್ನು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇವೆ. ಆದರೆ ಕೇಂದ್ರ ಸರ್ಕಾರ ವರಮಾನದ ಬಗ್ಗೆ ಮಾತ್ರ ಗಮನ ನೀಡುತ್ತಿದೆ. ಇದರಿಂದ ಉದ್ಯಮದ ಮೇಲಾಗುವ ಪರಿಣಾಮದ ಬಗ್ಗೆ ಯೋಚಿಸುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು. ‘ಕೃಷಿ ನಂತರ ಅತಿ ಹೆಚ್ಚು ಉದ್ಯೋಗ ನೀಡುವ ವಲಯವಿದ್ದರೆ ಅದು ಜವಳಿ. ಇಲ್ಲಿ ವಾರ್ಷಿಕ ₹ 2 ರಿಂದ ₹5 ಕೋಟಿವರೆಗೆ ವಹಿವಾಟು ನಡೆಸುವವರಿಗೆ ವಿನಾಯಿತಿ ನೀಡಲು ಒತ್ತಾಯಿಸಲಾಗಿದೆ‘ ಎಂದರು.

ಇ-ವೇ ಬಿಲ್ ಬದಲಾವಣೆ ಅಗತ್ಯ: ‘ಕರ್ನಾಟಕದ ಇ-ಸುಗಮ್ ದೇಶದಲ್ಲಿಯೇ ಮಾದರಿಯಾಗಿತ್ತು. ಅದೇ ರೀತಿಯಲ್ಲಿ ಇ-ವೇ ಬಿಲ್ ರೂಪಿಸಬೇಕು. ವರ್ತಕರ ಒಕ್ಕೂಟವನ್ನು ಕರೆದು ಇ-ವೇ ಬಿಲ್ ವ್ಯವಸ್ಥೆಯಲ್ಲಿ ಇರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ’ ಎಂದು ಮೆಹ್ತಾ ಹೇಳಿದರು.

***

ಸರ್ಕಾರದ ಬೆಂಬಲ ಇದ್ದರೆ ಮಾತ್ರ ಸಣ್ಣ ಉದ್ಯಮಗಳ ಬೆಳವಣಿಗೆ ಸಾಧ್ಯ. ನಮ್ಮ ಸರ್ಕಾರ ಮೊದಲಿನಿಂದಲೂ ಜವಳಿ ಉದ್ಯಮಕ್ಕೆ ಬೆಂಬಲ ನೀಡುತ್ತಾ ಬಂದಿದೆ. ಸಬ್ಸಿಡಿ ದರದಲ್ಲಿ ವಿದ್ಯುತ್ ನೀಡುತ್ತಿದ್ದೇವೆ. ಕೈಮಗ್ಗ ನೇಕಾರರನ್ನು ಆರ್ಥಿಕವಾಗಿ ಸದೃಢಗೊಳಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ದೇಶದಲ್ಲಿ ಮುಚ್ಚಿರುವ ಸಣ್ಣ ಕಾರ್ಖಾನೆಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮುಚ್ಚಿರುವ ಕಾರ್ಖಾನೆಗಳ ಸಂಖ್ಯೆ ಕಡಿಮೆ ಇದೆ. ಮುಂದಿನ ದಿನಗಳಲ್ಲಿ ಸಣ್ಣ ಉದ್ಯಮಗಳಿಗೆ ನೆರವಾಗುವ ರೀತಿಯಲ್ಲಿ ಸಬ್ಸಿಡಿ ನೀಡುವುದು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಮಾಡುತ್ತೇವೆ.

ಆರ್‌.ವಿ. ವೆಂಕಟೇಶ್‌, ಕಾಂಗ್ರೆಸ್‌ ಮುಖಂಡ

***

ಪೀಣ್ಯದಲ್ಲಿ ಇಂದಿರಾ ಪ್ರಿಯದರ್ಶಿನಿ ಕೈಮಗ್ಗದ ಘಟಕ ಇತ್ತು. ಅದನ್ನು ಮುಚ್ಚಲಾಗಿದೆ. ಇದರಿಂದ ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಮುಖ್ಯಮಂತ್ರಿಗಳು, ಸಂಬಂಧಪಟ್ಟ ಸಚಿವರಿಗೆ ಪತ್ರ ಬರೆದಿದ್ದೇನೆ. ಸರ್ಕಾರದಿಂದ ₹ 5– 10 ಕೋಟಿ ನೆರವು ನೀಡಿ ಅದರ ಬೆಳವಣಿಗೆಗೆ ನೆರವಾಗುವಂತೆ ಕೇಳಿದ್ದೇನೆ. ನಮ್ಮ ಸರ್ಕಾರ ಇದ್ದಾಗ ₹ 4 ಕೋಟಿ ನೀಡಲಾಗಿತ್ತು. ನರೇಂದ್ರ ಮೋದಿ ಖಾದಿ ಉತ್ಪಾದನೆಗೆ ಹೆಚ್ಚು ಒತ್ತು ನೀಡಿದ್ದಾರೆ. ನಮ್ಮೆಲ್ಲರಿಗೂ ಖಾದಿ ಬಳಸುವಂತೆ ಸೂಚನೆ ಇದೆ. ಹೀಗಾಗಿ ರಾಜ್ಯದಲ್ಲಿ ಖಾದಿ ಉತ್ಪಾದನೆ ಮತ್ತು ಬಳಕೆಗೆ ಹೆಚ್ಚು ಗಮನ ನೀಡಲಾಗುವುದು.

ಮುನಿರಾಜು, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT