ಅಡಿಕೆ ತೋಟದ ಮೇಲೆ ಬಿದಿರು ಹುಳುಗಳ ದಾಳಿ

7
ಆತಂಕದಲ್ಲಿ ಶಿರಸಿ ತಾಲ್ಲೂಕಿನ ರೈತರು

ಅಡಿಕೆ ತೋಟದ ಮೇಲೆ ಬಿದಿರು ಹುಳುಗಳ ದಾಳಿ

Published:
Updated:
ಶಿರಸಿ ತಾಲ್ಲೂಕಿನ ಭೈರುಂಬೆ ಸಮೀಪ ಕಾಳಿಸರದಲ್ಲಿ ಗಿಡದ ಟೊಂಗೆಯನ್ನು ಮುತ್ತಿರುವ ಬಿದಿರು ಹುಳುಗಳು

ಶಿರಸಿ: ತಾಲ್ಲೂಕಿನ ಪುಟ್ಟನಮನೆಯಲ್ಲಿ ಕೆಲ ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಬಿದಿರು ಹುಳುಗಳು, ಇದೀಗ ಕಾಳಿಸರದ ಅಡಿಕೆ ತೋಟದ ಮೇಲೆ ಕೋಟಿ ಸಂಖ್ಯೆಯಲ್ಲಿ ದಾಳಿಯಿಟ್ಟಿವೆ.

ಭೈರುಂಬೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾಳಿಸರದಲ್ಲಿ ವಾರದ ಈಚೆಗೆ ಸುಮಾರು 10 ಎಕರೆ ಪ್ರದೇಶದಲ್ಲಿ ಹುಳುಗಳು ಕಾಣಿಸಿಕೊಂಡಿವೆ. ದಿನದಿಂದ ದಿನಕ್ಕೆ ಅವುಗಳ ಸಂಖ್ಯೆ ಹೆಚ್ಚುತ್ತಿದ್ದು, ಅಡಿಕೆ ತೋಟ, ಸೊಪ್ಪಿನ ಬೆಟ್ಟಗಳ ತುಂಬ ಮರಗಳ ಟೊಂಗೆಗಳ ಮೇಲೆ ಕುಳಿತಿರುತ್ತವೆ. ಹತ್ತಿರ ಹೋದರೆ ದುರ್ವಾಸನೆ ಬರುತ್ತದೆ ಎನ್ನುತ್ತಾರೆ ಸ್ಥಳೀಯರು.

‘ಎರಡು ದಿನಗಳಿಂದ ಹುಳುಗಳು ಮನೆಗಳಿಗೆ ನುಗ್ಗುತ್ತಿವೆ. ಗೋಡೆ, ಕಿಟಕಿ, ಮನೆಯೊಳಗಿರುವ ಸಾಮಗ್ರಿಗಳ ಮೇಲೆ ಕುಳಿತಿರುತ್ತವೆ. ಇವು ಆಹಾರ ಪದಾರ್ಥಗಳಲ್ಲಿ ಸೇರಿದರೆ ಏನು ಮಾಡುವುದು ಎಂದು ಆತಂಕವುಂಟಾಗಿದೆ. ಅವುಗಳ ಭಾರಕ್ಕೆ ತೋಟದಲ್ಲಿರುವ ಬಾಳೆ ಗಿಡಗಳ ಎಲೆಗಳು ಮುರಿದು ಬೀಳುತ್ತಿವೆ. ಕೀಟನಾಶಕ ಸಿಂಪಡಿಸಿದರೂ ಸಾಯುತ್ತಿಲ್ಲ. ಹೊಗೆ ಹಾಕಿದರೆ ಸ್ವಲ್ಪ ಕಡಿಮೆಯಾಗುತ್ತವೆ. ಆದರೆ, ತುಸು ಹೊತ್ತಿನಲ್ಲಿ ಮತ್ತೆ ಬರುತ್ತವೆ. ಸುಮಾರು 22 ವರ್ಷಗಳ ಹಿಂದೆ ಕಾಳಿಸರದಲ್ಲಿ ಇದೇ ರೀತಿಯ ಹುಳುಗಳು ಕಂಡಿದ್ದವು. ಆಗ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿರಲಿಲ್ಲ’ ಎನ್ನುತ್ತಾರೆ ಗಣೇಶ ಕಾಳಿಸರ.

‘2014ರಲ್ಲಿ ತಾಲ್ಲೂಕಿನ ಕೆಲವು ಕಡೆಗಳಲ್ಲಿ ಈ ಹುಳುಗಳು ಕಂಡು ಬಂದಿದ್ದವು. ಈ ವರ್ಷ ಬಿದಿರು ಹೂ ಬಿಟ್ಟಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಈ ಯುಡೊಂಗಾ ಮೊಂಟಾನಾ (udonga montana) ಹುಳುಗಳು ಕಂಡುಬಂದಿವೆ. ದೊಡ್ಡ ಪ್ರಮಾಣದಲ್ಲಿ ಇರುವ ಇವನ್ನು ನಾಶ ಮಾಡುವುದು ಕಷ್ಟ. ಕಾಗೆ, ಗೊರವಂಕ, ಮೈನಾ ಇಂತಹ ಪಕ್ಷಿಗಳು ಇವನ್ನು ತಿನ್ನುತ್ತವೆ. ಇವು ರೈತರ ಬೆಳೆಗಳಿಗೆ ಹಾನಿ ಮಾಡುವುದಿಲ್ಲ. ಮನೆಗಳಿಗೆ ಸೇರುವುದರಿಂದ ಕಿರಿಕಿರಿಯಾಗಬಹುದು ಅಷ್ಟೆ. ಸೆಪ್ಟೆಂಬರ್ ಹೊತ್ತಿಗೆ ಇವುಗಳ ಸಂಖ್ಯೆ ಕಡಿಮೆಯಾಗಬಹುದು’ ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟತಜ್ಞೆ ರೂಪಾ ಪಾಟೀಲ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !