ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಳಿದ ಕಮಲ; ಕೊನೆಯಾದ ಯಡಿಯೂರಪ್ಪ ಕೊರಗು

ಮಂಡ್ಯ ಜಿಲ್ಲೆಯಲ್ಲಿ ಮೊದಲ ಬಾರಿಗೆ ಗೆದ್ದ ಬಿಜೆಪಿ, ನನಸಾದ ಮುಖ್ಯಮಂತ್ರಿ ಕನಸು
Last Updated 9 ಡಿಸೆಂಬರ್ 2019, 20:15 IST
ಅಕ್ಷರ ಗಾತ್ರ

ಕೆ.ಆರ್‌.ಪೇಟೆ: ಸಕ್ಕರೆ ಜಿಲ್ಲೆ ಮಂಡ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ದು ಇತಿಹಾಸ ನಿರ್ಮಾಣವಾಗಿದೆ. ‘ತವರು ಕ್ಷೇತ್ರದಲ್ಲಿ ಕಮಲ ಅರಳಿಲ್ಲ’ ಎಂಬ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಕೊರಗು ಕೊನೆಯಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 9,819 ಮತಗಳಿಸಿ ಠೇವಣಿ ಕಳೆದುಕೊಂಡಿದ್ದರು. ಆದರೆ, ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ 9,731 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. ಏಳು ಕ್ಷೇತ್ರದಲ್ಲೂ ಗೆದ್ದು ಬೀಗಿದ್ದ ಜೆಡಿಎಸ್‌ ಈಗ ಕೆ.ಆರ್‌.ಪೇಟೆಯನ್ನು ಕಳೆದುಕೊಂಡಿದೆ. ನಾರಾಯಣಗೌಡ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದರೆ, ಕಾಂಗ್ರೆಸ್‌ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್‌ ಹ್ಯಾಟ್ರಿಕ್‌ ಸೋಲು ಕಂಡಿದ್ದಾರೆ.

‘ಜನ್ಮಭೂಮಿಯೇ ಕರ್ಮಭೂಮಿ’ ಎಂದು ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ‘ತವರಿನ ಋಣ ತೀರಿಸುವ ಕನಸು ಈಡೇರಿಸಿ’ ಎಂಬ ಮೊರೆ ಇಟ್ಟಿದ್ದರು. ಅದಕ್ಕಾಗಿ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ವಹಿಸಿದ್ದರು. ಮುಖ್ಯಮಂತ್ರಿಗಳ ಕನಸು ನನಸಾಗಿದ್ದು ಮಗ. ಈ ಮೂಲಕ ತಂದೆಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.

ಬಿಜೆಪಿ ಗೆಲುವಿನಲ್ಲಿ ಚುನಾವಣೆ ಉಸ್ತುವಾರಿ ಹೊತ್ತಿದ್ದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹಾಗೂ ಹಾಸನ ಶಾಸಕ ಪ್ರೀತಂ ಗೌಡರ ದೊಡ್ಡ ಪಾತ್ರವಿದೆ. ಅವರ ಚುನಾವಣಾ ತಂತ್ರಗಳು ಫಲ ಕೊಟ್ಟಿವೆ. ಕುರುಬ, ನಾಯಕ, ಈಡಿಗ, ಗಾಣಿಗ, ಭೋವಿ ಸೇರಿ 15 ಸಣ್ಣ ಸಮುದಾಯಗಳ ಸಮಾವೇಶ ನಡೆಸಿದ್ದ ಅವರು ಒಕ್ಕಲಿಗೇತರ ಮತಗಳನ್ನು ಕ್ರೋಡಿಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಹುಸಂಖ್ಯಾತ ಒಕ್ಕಲಿಗ ಮತಗಳನ್ನೇ ನೆಚ್ಚಿಕೊಂಡಿದ್ದ ಜೆಡಿಎಸ್‌ನ ನಿಷ್ಠಾವಂತ ಕಾರ್ಯಕರ್ತ ಬಿ.ಎಲ್‌.ದೇವರಾಜು ಗೆಲುವಿನ ದಡ ಮುಟ್ಟಲಿಲ್ಲ. ಒಕ್ಕಲಿಗ ಮತಗಳು ಛಿದ್ರವಾಗಿದ್ದು ಮೂರು ಪಕ್ಷಗಳಿಗೆ ಹಂಚಿ ಹೋಗಿವೆ. ಕುಮಾರಸ್ವಾಮಿ ಕಣ್ಣೀರಿಗೆ, ಧ್ವನಿಮುದ್ರಿತ ಫೋನ್‌ ಕರೆಗೆ, ಸಾಲಾ ಮನ್ನಾ ಅಸ್ತ್ರಕ್ಕೆ ಮತದಾರ ಸೊಪ್ಪು ಹಾಕಿಲ್ಲ. ‘ಬಾಂಬೆ ಕಳ್ಳ, ಕಾಮಾಟಿಪುರ‘ ಹೇಳಿಕೆಗಳು, ನಾಮಪತ್ರ ಸಲ್ಲಿಸುವ ದಿನ ಚಪ್ಪಲಿ ತೂರಿದ್ದು ಜೆಡಿಎಸ್‌ಗೆ ಮುಳುವಾದವು.

***

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪರಿಶ್ರಮದಿಂದ ಕೆ.ಆರ್‌.ಪೇಟೆಯಲ್ಲಿ ಕಮಲ ಅರಳಿದೆ. ಬಿಜೆಪಿಗೆ ಮಂಡ್ಯ ಜಿಲ್ಲೆಯಲ್ಲಿ ಶಕ್ತಿ ಬಂದಿದೆ. ಮುಖ್ಯಮಂತ್ರಿಗಳು ಯಾವುದೇ ಜವಾಬ್ದಾರಿ ನೀಡಿದರೂ ಅದನ್ನು ನಿಭಾಯಿಸುತ್ತೇನೆ

–ಕೆ.ಸಿ.ನಾರಾಯಣಗೌಡ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT