ಏಳು ಲಕ್ಷ ಕೆಎಫ್‌ಡಿ ಲಸಿಕೆಗೆ ಪ್ರಸ್ತಾಪ

ಶನಿವಾರ, ಮಾರ್ಚ್ 23, 2019
31 °C
ಕಾಯಿಲೆ ನಿಯಂತ್ರಿಸಲು ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ

ಏಳು ಲಕ್ಷ ಕೆಎಫ್‌ಡಿ ಲಸಿಕೆಗೆ ಪ್ರಸ್ತಾಪ

Published:
Updated:
Prajavani

ಶಿವಮೊಗ್ಗ: ಜಿಲ್ಲೆಯ ಜನರನ್ನು ನಿದ್ದೆಗೆಡಿಸಿರುವ ಮಂಗನ ಕಾಯಿಲೆಯನ್ನು ಶತಾಯಗತಾಯವಾಗಿ ನಿರ್ಮೂಲನೆ ಮಾಡಲೇಬೇಕು ಎಂದು ಪಣತೊಟ್ಟಿರುವ ಆರೋಗ್ಯ ಇಲಾಖೆ ಇದೀಗ ಮುಂಜಾಗ್ರತೆ ಕ್ರಮವಾಗಿ 6 ಲಕ್ಷದಿಂದ 7 ಲಕ್ಷದಷ್ಟು ಕೆಎಫ್‌ಡಿ ಲಸಿಕೆಯನ್ನು ಶೇಖರಿಸಿಡಲು ತೀರ್ಮಾನಿಸಿದೆ.

ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್ಐವಿ)ಯಿಂದ ಪ್ರತಿವರ್ಷ ಕೇವಲ 1 ಲಕ್ಷದಿಂದ 2 ಲಕ್ಷದಷ್ಟು ಕೆಎಫ್‌ಡಿ ಲಸಿಕೆಯನ್ನು ತರಿಸಿಕೊಳ್ಳಲಾಗುತ್ತಿತ್ತು. ಆದರೆ, ಈ ವರ್ಷ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲೂ ಈ ಕಾಯಿಲೆ ಕಾಣಿಸಿಕೊಂಡಿದ್ದರಿಂದ ಅಲ್ಲಿಂದಲೇ ಲಸಿಕೆಯನ್ನು ಪೂರೈಸಬೇಕಾಯಿತು.

ಇದನ್ನು ಮನಗಂಡಿರುವ ಜಿಲ್ಲಾ ಆರೋಗ್ಯ ಇಲಾಖೆಯು ಎನ್ಐವಿಯನ್ನು ಸಂಪರ್ಕಿಸಿದ್ದು, ಮುಂದಿನ ವರ್ಷಕ್ಕೆ ಈಗಲೇ 6 ಲಕ್ಷದಿಂದ 7 ಲಕ್ಷ ಕೆಎಫ್‌ಡಿ ಲಸಿಕೆಗೆ ಪ್ರಸ್ತಾವ ಸಲ್ಲಿಸಿದೆ. ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಿದ್ದಾಗ ಆತಂಕವೂ ಕಡಿಮೆಯಾಗುತ್ತದೆ, ಇತರೆ ಜಿಲ್ಲೆಗಳಿಗೂ ಪೂರೈಸಲು ಸಾಧ್ಯವಾಗುತ್ತದೆ ಎಂದು ವೈರಲ್ ಡಯಾಗ್ನೋಸ್ಟಿಕ್ಸ್ ಪ್ರಯೋಗಾಲಯದ ಉಪ ನಿರ್ದೇಶಕ ಮತ್ತು ಕೆಎಫ್‌ಡಿ ಫೀಲ್ಡ್ ಆಫೀಸರ್ ಡಾ.ಕಿರಣ್ ಕುಮಾರ್ ತಿಳಿಸಿದರು.

ಲಸಿಕೆ ತಯಾರಿಸಲು ಸಾಕಷ್ಟು ಸಮಯ ಬೇಕು
ಕೆಎಫ್‌ಡಿ ಲಸಿಕೆ ತಯಾರಿಸಲು ಹೆಚ್ಚಿನ ಸಮಯವಕಾಶ ಬೇಕಿದೆ. ಆರಂಭದಲ್ಲಿ ಲಸಿಕೆಯನ್ನು ವಿವಿಧ ಹಂತಗಳಲ್ಲಿ ಪರೀಕ್ಷಿಸಬೇಕು. ನಂತರ ಲಸಿಕೆಯ ಸಾಮರ್ಥ್ಯ, ದಕ್ಷತೆಯನ್ನು ಪರೀಕ್ಷೆಗೆ ಒಳಪಡಿಸಬೇಕು. ತಯಾರಾದ ಲಸಿಕೆಯನ್ನು ಸುರಕ್ಷತೆಯಿಂದ ಪೂರೈಸಲು ಸಮಯವಾಕಾಶ ಬೇಕಿದೆ. ಅಲ್ಲದೆ ಸೆಪ್ಟೆಂಬರ್‌ನಿಂದಲೇ ಲಸಿಕೆ ನೀಡುವ ಕಾರ್ಯ ನಡೆಯುವುದರಿಂದ 5 ತಿಂಗಳು ಮುಂಚೆಯೇ ಎನ್‌.ಐ.ವಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಮೋಡ ಬಿತ್ತನೆಗೆ ಒತ್ತಾಯ
ಜಿಲ್ಲೆಯಲ್ಲಿ ಮಳೆ ಆಗುವುದರಿಂದ ಮಂಗನ ಕಾಯಿಲೆ ಹರಡುವ ಉಣುಗುಗಳು ನಿಯಂತ್ರಣ ಬರುತ್ತವೆ. ಆದರೆ ಈವರೆಗೆ ಯಾವುದೇ ಮಳೆ ಆಗದ ಕಾರಣ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಬೇಕು ಎಂಬ ಒತ್ತಾಯ ಜಿಲ್ಲೆಯಲ್ಲಿ ಕೇಳಿಬರುತ್ತಿದೆ. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸಹ ಅರಲಗೋಡು ವ್ಯಾಪ್ತಿಯಲ್ಲಿ ಮೋಡ ಬಿತ್ತನೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !