ಕೊಡಗು ಮರು ನಿರ್ಮಾಣಕ್ಕೆ ಮಳೆ ಅಡ್ಡಿ

7

ಕೊಡಗು ಮರು ನಿರ್ಮಾಣಕ್ಕೆ ಮಳೆ ಅಡ್ಡಿ

Published:
Updated:
Deccan Herald

ಬೆಂಗಳೂರು: ರಾಜ್ಯದ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಬಿರುಸಿನ ಮಳೆಯಾಗಿದೆ.

ಪ್ರಕೃತಿ ವಿಕೋಪದಿಂದ ತತ್ತರಿಸಿದ್ದ ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳಿಂದ ಮತ್ತೆ ಮಳೆ ಆರ್ಭಟಿಸುತ್ತಿದ್ದು, ಮರು ನಿರ್ಮಾಣ ಕಾರ್ಯಕ್ಕೆ ಅಡ್ಡಿಯಾಗಿದೆ.

ಮಡಿಕೇರಿ, ನಾಪೋಕ್ಲು, ಭಾಗಮಂಡಲ, ತಲಕಾವೇರಿ, ಮಕ್ಕಂದೂರು, ತಂತಿಪಾಲ, ಜೋಡುಪಾಲ, 2ನೇ ಮೊಣ್ಣಂಗೇರಿ, ವಿರಾಜಪೇಟೆ, ಹಟ್ಟಿಹೊಳೆ, ಹೆಮ್ಮೆತ್ತಾಳ್, ಮೇಘತ್ತಾಳ್‌, ಮಾದಾಪುರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಮಂಗಳವಾರವೂ ಧಾರಾಕಾರ ಮಳೆ ಸುರಿಯಿತು.

ಜಿಯೊ ಫ್ಯಾಬ್ರಿಕ್ಸ್‌, ಜಿಯೊ ಗ್ರಿಡ್‌ ಹಾಗೂ ಸಾವಿರಾರು ಮರಳು ತುಂಬಿದ ಚೀಲಗಳನ್ನಿಟ್ಟು ರಸ್ತೆ ದುರಸ್ತಿ ಮಾಡಲಾಗುತ್ತಿತ್ತು. ರಸ್ತೆ ಕೊಚ್ಚಿ ಹೋಗಿದ್ದ ಕಡೆ ತಾತ್ಕಾಲಿಕವಾಗಿ ಮಣ್ಣು ಹಾಕಿ ಲಘು ವಾಹನ ಸಂಚಾರಕ್ಕೆ ಅನುಕೂಲ ಮಾಡಲಾಗಿತ್ತು.

ಆದರೆ, ಮಳೆಯಿಂದ ಈ ರಸ್ತೆಗಳು ಕೆಸರುಮಯವಾಗಿದ್ದು ವಾಹನ ಸಂಚಾರ ಸಾಧ್ಯವಾಗುತ್ತಿಲ್ಲ. ಮತ್ತೆ ರಸ್ತೆಗಳು ಕುಸಿಯುವ ಸಾಧ್ಯತೆಯಿದೆ.

ಕರಾವಳಿ ಭಾಗದಲ್ಲಿ ಸೋಮವಾರ ರಾತ್ರಿ ಎರಡು ಗಂಟೆ ಧಾರಾಕಾರ ಮಳೆ ಸುರಿದಿದ್ದು, ಸುಬ್ರಹ್ಮಣ್ಯ-ಜಾಲ್ಸೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಾಜೆ ಬಳಿ ನಿರ್ಮಿಸಿದ್ದ ತಾತ್ಕಾಲಿಕ ತಡೆಗೋಡೆ ಕೊಚ್ಚಿ ಹೋಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಸಹಿತ ಮಳೆಯಾಗಿದೆ. ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಬೀಸುವ ಸಾಧ್ಯತೆ ಇರುವುದರಿಂದ ಇದೇ 13ರವರೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕೆ ಇಲಾಖೆ ಎಚ್ಚರಿಕೆ ನೀಡಿದೆ.

ಮಂಗಳವಾರ ಸಂಜೆಯಿಂದಲೂ ದಟ್ಟವಾದ ಮೋಡ ಕವಿದಿದ್ದು, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆಯಲ್ಲಿ ಮಳೆ ಸುರಿಯಿತು. ಉಡುಪಿಯಲ್ಲಿ ತುಂತುರು ಮಳೆಯಾಗಿದೆ.

ಶಿವಮೊಗ್ಗ ನಗರ, ಸೊರಬ, ಶಿಕಾರಿಪುರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸಾಗರ, ತೀರ್ಥಹಳ್ಳಿ, ಹೊಸನಗರದಲ್ಲಿ ಸಾಧಾರಣ ಮಳೆಯಾಗಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !