ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ನಾಗರಿಕ ಸೇವಾ ಕಾಯ್ದೆ ಉಲ್ಲಂಘನೆ: ಮೂರ್ತಿ ವಿರುದ್ಧ ಲೋಕಾಯುಕ್ತರ ತನಿಖೆ

ಎಸ್‌ಪಿ ನೇತೃತ್ವದಲ್ಲಿ ವಿಚಾರಣೆ
Last Updated 17 ನವೆಂಬರ್ 2018, 18:57 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್‌. ಮೂರ್ತಿ ಅವರು ಸೇವೆಯಿಂದ ಈ ಹಿಂದೆ ಅಮಾನತುಗೊಂಡಿದ್ದ ಸಮಯದಲ್ಲಿ ಬೇರೆ ಉದ್ಯೋಗದಲ್ಲಿದ್ದರು ಎಂಬ ಆರೋಪ ಕುರಿತು ತನಿಖೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಲೋಕಾಯುಕ್ತ ಪೊಲೀಸರಿಗೆ ಆದೇಶಿಸಿದ್ದಾರೆ.

ದುರ್ನಡತೆ ಆರೋಪದ ಮೇಲೆ ಅಮಾನತಾಗಿದ್ದ ಮೂರ್ತಿ, 2005ರ ಡಿಸೆಂಬರ್‌ 2ರಿಂದ 2012ರ ಜನವರಿ 17ರವರೆಗೆ ‘ಮ್ಯಾಗ್ನಕಾರ್ಟ’ ಎಂಬ ಕಂಪನಿ ಸ್ಥಾಪಿಸಿ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯಗಳಿಗೆ ಹಣ್ಣು, ತರಕಾರಿ, ಆಹಾರ ಪದಾರ್ಥ ಮತ್ತು ಬೇಳೆಕಾಳುಗಳನ್ನು ಪೂರೈಸಿದ್ದಾರೆ. ಈ ಸಂಬಂಧ ಸರ್ಕಾರಕ್ಕೆ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಜಯಕುಮಾರ್‌ ಹಿರೇಮಠ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು.

ಈ ಪ್ರಕರಣದ ಕುರಿತು ಲೋಕಾಯುಕ್ತರು ವಿಚಾರಣೆ ನಡೆಸಿದ್ದರು. ಬಳಿಕ ಅವರು ಹೊರಡಿಸಿರುವ ಆದೇಶದಲ್ಲಿ, ‘ಯಾವುದೇ ಸರ್ಕಾರಿ ನೌಕರರ ಕುಟುಂಬ ಸದಸ್ಯರು ವ್ಯಾಪಾರ ಅಥವಾ ವ್ಯವಹಾರದಲ್ಲಿ ತೊಡಗಿದರೆ ನಾಗರಿಕ ಸೇವಾ ನಿಯಮ 16 (2) ಅನ್ವಯ ಸರ್ಕಾರಕ್ಕೆ ತಿಳಿಸಬೇಕು. ಆದರೆ, ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ, ಮ್ಯಾಗ್ನಕಾರ್ಟ ತಮ್ಮ ಪತ್ನಿ ಒಡೆತನಕ್ಕೆ ಸೇರಿದ್ದು ಎಂದು 2012ರ ಫೆಬ್ರುವರಿಯಲ್ಲಿ ಸರ್ಕಾರಕ್ಕೆ ತಿಳಿಸಿದ್ದಾರೆ. ಪ್ರತಿವಾದಿ ನಾಗರಿಕ ಸೇವಾ ನಿಯಮ 16 (2) ಅನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ತಿಳಿಸಿದ್ದಾರೆ.

‘ಮ್ಯಾಗ್ನಕಾರ್ಟ ಹ್ಯೂಮನ್‌ ರಿಸೋರ್ಸಸ್‌ ಪ್ರೈವೇಟ್‌ ಲಿ.’ ಕಂಪನಿಯನ್ನು 2012ರ ಮೇನಲ್ಲಿ ಸ್ಥಾಪಿಸಲಾಗಿದ್ದು, 2013ರ ಸೆಪ್ಟೆಂಬರ್‌ನಲ್ಲಿ ಮ್ಯಾಗ್ನಕಾರ್ಟ ವೆಂಚರ್ಸ್‌ ಪ್ರೈವೇಟ್‌ ಲಿ. ಎಂದು ಹೆಸರನ್ನು ಬದಲಾಯಿಸಲಾಗಿದೆ. 2005ರಲ್ಲಿ ಮ್ಯಾಗ್ನಕಾರ್ಟ ಕಂಪನಿ ತೆರೆಯಲಾಗಿದೆ. ಮೊಬೈಲ್‌ 97041– 97676 ಅನ್ನು ತಮ್ಮ ವೈಯಕ್ತಿಕ ಬಳಕೆಗೆ ಇಟ್ಟುಕೊಂಡಿರುವುದಾಗಿ ಮೂರ್ತಿ ಹೇಳಿದ್ದರೂ, ಈ ಸಂಖ್ಯೆಯನ್ನು ಮ್ಯಾಗ್ನಕಾರ್ಟ ದಾಖಲೆಗಳಲ್ಲಿ ‍ಉಲ್ಲೇಖಿಸಲಾಗಿದೆ. ಹೀಗಾಗಿ, ದೂರಿಗೆ ಸಂಬಂಧಿಸಿದಂತೆ ‍ಪ್ರತಿವಾದಿ ಕೊಟ್ಟಿರುವ ಕಾರಣಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದೂ ಪ್ರತಿಪಾದಿಸಿದ್ದಾರೆ.

ಮೂರ್ತಿ ಅವರ ವಿರುದ್ಧದ ಆರೋಪ ಕುರಿತು 2015ರಲ್ಲಿ ಆಗಿನ ವಿಧಾನಸಭೆ ಅಧ್ಯಕ್ಷರು ಸಿಐಡಿ ತನಿಖೆಗೆ ಆದೇಶಿಸಿದ್ದರು. ಆದರೆ, ಒಂದೇ ತಿಂಗಳಲ್ಲಿ ಅನುಮತಿಯನ್ನು ವಾಪಸ್‌ ಪಡೆಯಲಾಗಿತ್ತು ಎಂಬ ಸಂಗತಿಯನ್ನು ಆದೇಶದಲ್ಲಿ ಪ್ರಸ್ತಾಪಿಸಿದ್ದಾರೆ. ಮೂರ್ತಿ ಅವರ ವಿರುದ್ಧ ಲೋಕಾಯುಕ್ತ ಎಸ್‌ಪಿ ತನಿಖೆ ನಡೆಸಲಿದ್ದಾರೆ ಎಂದೂ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT