ಸೋಮವಾರ, ಸೆಪ್ಟೆಂಬರ್ 20, 2021
23 °C

ಮಳೆ ಆರ್ಭಟ; ಮನೆ, ಬೈಕ್‌ಗಳು ಜಖಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನೆಲಮಂಗಲ: ತಾಲ್ಲೂಕಿನಾದ್ಯಂತ ಮಂಗಳವಾರ ಸುರಿದ ಗಾಳಿ ಸಹಿತ ಮಳೆಗೆ 13 ಮನೆಗಳಿಗೆ ಹಾನಿಯಾಗಿದ್ದು, ಎರಡು ಮನೆಗಳು ಸಂಪೂರ್ಣವಾಗಿ ಹಾಳಾಗಿವೆ. ಎರಡು ಬೈಕ್‌ಗಳು ಜಖಂಗೊಂಡು, ಇಬ್ಬರು ಗಾಯಗೊಂಡಿದ್ದಾರೆ. 

ಇಲ್ಲಿಗೆ ಸಮೀಪದ ಮಲ್ಲಾಪುರದಲ್ಲಿ ಐದು ಮರಗಳು ನೆಲಕ್ಕುರುಳಿವೆ. ಆಲದ ಮರವೊಂದು ಮನೆಯ ಮೇಲೆ ಬಿದ್ದ ಪರಿಣಾಮ ಲಕ್ಷ್ಮಮ್ಮ ಎಂಬುವರಿಗೆ ಸೇರಿದ ಮನೆಯ ಒಂದು ಭಾಗ ಸಂಪೂರ್ಣವಾಗಿ ಹಾಳಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ ಎಂಬುವರಿಗೆ ಸೇರಿದ ಮನೆಯ ಶೀಟು ಹಾರಿಹೋಗಿದ್ದು, ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಗ್ರಾಮದ ಮತ್ತೊಂದು ಮನೆಯಲ್ಲಿದ್ದ ಒಬ್ಬರ ಕಾಲು ಮುರಿದಿದ್ದು, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮನೆ ಕಳೆದುಕೊಂಡ ಸೋಮಶೇಖರ್‌, ‘ಮನೆಗೆ ಸಂಪೂರ್ಣ ಹಾನಿಯಾಗಿದೆ. ರಜೆ ಕಳೆಯಲೆಂದು ಊರಿನಿಂದ ಬಂದಿದ್ದ ಸಂಬಂಧಿಯ ಮಗನ ಕಾಲು ಮುರಿದಿದ್ದು ಬೇಸರ ಉಂಟು ಮಾಡಿದೆ. ಮನೆಯಲ್ಲಿ ಒಟ್ಟು 10 ಜನ ಇದ್ದೆವು. ರಾತ್ರಿಯೆಲ್ಲ ನಿದ್ದೆ ಇಲ್ಲ. ಸರ್ಕಾರ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರಿ ಶಾಲೆಯ ಕಾಂಪೌಂಡ್‌ ಮೇಲೆ ಮರದ ಕೊಂಬೆ ಬಿದ್ದಿದ್ದು, ಮುಂಭಾಗಕ್ಕೆ ಹಾನಿಯಾಗಿದೆ. ಶಾಲೆ ರಜೆ ಇದ್ದ ಕಾರಣ ದೊಡ್ಡ ಅವಘಡ ಸಂಭವಿಸುವುದು ತಪ್ಪಿದೆ’ ಎಂದು ಸ್ಥಳೀಯ ಮಾರಯ್ಯ ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ತಹಶೀಲ್ದಾರ್‌ ರಾಜಶೇಖರ್‌, ‘ಹಾನಿಗೆ ಸಂಬಂಧಿಸಿದ ವರದಿಯನ್ನು ಜಿಲ್ಲಾಧಿಕಾರಿ ಅವರಿಗೆ ಕಳುಹಿಸಿ, ಶೀಘ್ರವಾಗಿ ಪರಿಹಾರ ಒದಗಿಸಿಕೊಡಲಾಗುವುದು’ ಎಂದು ತಿಳಿಸಿದರು.

ವಿದ್ಯುತ್‌ ಸಂಪರ್ಕ ಕಡಿತ: ಇಲ್ಲಿಗೆ ಸಮೀಪದ ದಾಸನಪುರದಲ್ಲಿ ಮಂಗಳವಾರ ಸಂಜೆಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಜನ ಪರದಾಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು