ಗುರುವಾರ , ನವೆಂಬರ್ 21, 2019
26 °C

ಸಿದ್ದರಾಮಯ್ಯ ಮತ್ತೆ ಮೇಲು ‘ಕೈ’

Published:
Updated:
siddaramaiah

ಬೆಂಗಳೂರು: ವಿಧಾನಸಭೆ ಉಪಚುನಾವಣೆ ನಡೆಯಲಿರುವ 15ರಲ್ಲಿ 8 ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸಿದ್ದರಾಮಯ್ಯ ಹೇಳಿದವರಿಗೆ ಹಾಗೂ ಅವರ ಆಪ್ತರಿಗೆ ಹೆಚ್ಚು ಅವಕಾಶ ನೀಡಲಾಗಿದೆ. ಪಟ್ಟಿ ಅಂತಿಮಗೊಳಿಸುವ ಮುನ್ನ ಮತ್ತೊಂದು ಸುತ್ತಿನ ಚರ್ಚೆ ನಡೆಸಿದ್ದರೆ ಇನ್ನೂ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಬಹುದಿತ್ತು ಎಂಬ ಆಕ್ಷೇಪ ಕೆಲವು ಹಿರಿಯ ಮುಖಂಡರಿಂದ ವ್ಯಕ್ತವಾಗಿದೆ.

ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಕುರುಬ ಸಮುದಾಯದ ಎಂ.ಶಿವರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿ ಒಕ್ಕಲಿಗ ಮತದಾರರು ಇದ್ದು, ಕುರುಬ ಸಮುದಾಯದ ಮತದಾರರ ಸಂಖ್ಯೆ ಕಡಿಮೆ ಇದೆ. ಕ್ಷೇತ್ರದಲ್ಲಿ ಜಾತಿ ಸಮೀಕರಣವನ್ನು ಅರ್ಥಮಾಡಿಕೊಂಡಿದ್ದರೆ ಸೂಕ್ತ ಅಭ್ಯರ್ಥಿ ಆಯ್ಕೆಗೆ ಇನ್ನಷ್ಟು ಅವಕಾಶಗಳು ಇದ್ದವು. ಆದರೆ ಅಂತಹ ಪ್ರಯತ್ನಮಾಡಿಲ್ಲ ಎಂಬ ಆರೋಪ ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬಂದಿದೆ.

ಹಿರೇಕೆರೂರು ಕ್ಷೇತ್ರದಿಂದ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಯು.ಬಿ.ಬಣಕಾರ್ ಸಹ ಕಾಂಗ್ರೆಸ್‌ಗೆ ಬರಲು ಸಜ್ಜಾಗಿದ್ದರು. ಅದಕ್ಕೂ ಮುನ್ನವೇ ಅಭ್ಯರ್ಥಿ ಹೆಸರು ಪ್ರಕಟಿಸಲಾಗಿದೆ. ಬಿ.ಸಿ.ಪಾಟೀಲ್ ಪಕ್ಷ ತೊರೆದಿದ್ದು, ಬಣಕಾರ್ ಜತೆ ಮಾತುಕತೆ ನಡೆಸಿ ಟಿಕೆಟ್ ನೀಡಿದ್ದರೆ ಕ್ಷೇತ್ರದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬುವ ಸಾಧ್ಯತೆಗಳಿದ್ದವು. ಅಗತ್ಯ ಇರುವೆಡೆ ಪಕ್ಷಕ್ಕೆ ಸೇರಿಸಿಕೊಂಡು ಬಲಪಡಿಸುವ ಪ್ರಯತ್ನ ನಡೆಯುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಬೆಂಬಲಿಸಿದ್ದ ಎಂ.ಅಂಜನಪ್ಪ ಅವರಿಗೆ ಟಿಕೆಟ್ ನೀಡಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲೇ ಅಚ್ಚರಿ ಮೂಡಿಸಿದೆ. ಪಕ್ಷದಲ್ಲೇ ಸಮರ್ಥರು ಇದ್ದರೂ ಜೆಡಿಎಸ್ ಪದಾಧಿಕಾರಿ ಆಗಿದ್ದವರನ್ನು ಅಭ್ಯರ್ಥಿ ಮಾಡಲಾಗಿದೆ. ಪಕ್ಷಕ್ಕಾಗಿ ದುಡಿದವರನ್ನು ಕಡೆಗಣಿಸಲಾಗಿದೆ ಎಂದು ಟಿಕೆಟ್ ಆಕಾಂಕ್ಷಿಯೊಬ್ಬರು ಆರೋಪಿಸಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಹಾಗೂ ಎಂ.ಟಿ.ಬಿ.ನಾಗರಾಜ್ ನಡುವೆಯೇ ಜಿದ್ದಾಜಿದ್ದಿ ಹೋರಾಟ ನಡೆದುಕೊಂಡು ಬಂದಿದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಚ್ಚೇಗೌಡ ಪುತ್ರ ಶರತ್ ಹಾಗೂ ನಾಗರಾಜ್ ನಡುವೆ ಹಣಾಹಣಿ ಏರ್ಪಟ್ಟಿತ್ತು. ಈಗ ನಾಗರಾಜ್ ಬಿಜೆಪಿಯಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ಶರತ್ ಕಾಂಗ್ರೆಸ್‌ಗೆ ಬರಲು ಸಿದ್ಧರಾಗಿದ್ದರು. ಪಕ್ಷಕ್ಕೆ ಬಂದಿದ್ದರೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಅನುಕೂಲ ಆಗುತಿತ್ತು ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

 

ಪ್ರತಿಕ್ರಿಯಿಸಿ (+)