ಬಹುಮತ ಇದ್ದರೂ ಬಿಜೆಪಿಗಿಲ್ಲ ಅಧಿಕಾರ

7
13 ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಪರಿಷ್ಕರಣೆ

ಬಹುಮತ ಇದ್ದರೂ ಬಿಜೆಪಿಗಿಲ್ಲ ಅಧಿಕಾರ

Published:
Updated:

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿಗೆ ಮೀಸಲಾತಿ ‘ಕೈಚಳಕ’ದಿಂದಾಗಿ 13 ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಕೈ ತಪ್ಪಿದೆ.

5 ನಗರಸಭೆ, 6 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿ ಬದಲಾವಣೆ ಮಾಡಿರುವುದರಿಂದ ಬಹುಮತ ಇದ್ದರೂ ಬಿಜೆಪಿಗೆ ಅಧಿಕಾರ ಕೈ ತಪ್ಪಿ ಹೋಗಿದೆ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲು ಹತ್ತುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಜೆಪಿ ಬಹುಮತ ಹೊಂದಿರುವ ಸ್ಥಳೀಯ ಸಂಸ್ಥೆಗಳಲ್ಲೇ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದಗಳಿಗೆ ಮೀಸಲಾತಿಯನ್ನು ತನಗೆ ಬೇಕಾದಂತೆ ಸರ್ಕಾರ ಪರಿಷ್ಕರಿಸಿದೆ. ಬಿಜೆಪಿಯಲ್ಲಿ ನಿರ್ದಿಷ್ಟ ಜಾತಿಯ ಸದಸ್ಯರೇ ಇಲ್ಲದ ಜಾತಿಗಳ ಸದಸ್ಯರನ್ನು ಗುರುತಿಸಿ ಮೀಸಲಾತಿ ನಿಗದಿ ಮಾಡಲಾಗಿದೆ. ದುರುದ್ದೇಶದಿಂದಲೇ ಈ ರೀತಿ ಮಾಡಿದ್ದಾರೆ ಎಂದು ಅವರು ದೂರಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಕುಂದಾಪುರ ಪುರಸಭೆಗಳಲ್ಲಿ ಬಿಜೆಪಿಯಿಂದ ಅಧಿಕಾರ ಕೈ ತಪ್ಪುವಂತೆ ಮೀಸಲಾತಿ ನಿಗದಿ ಮಾಡಲಾಗಿದೆ. ಇದರಿಂದ ಅಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಲು ಸಾಧ್ಯವಾಗಿದೆ.

ಬಾಗಲಕೋಟೆ ನಗರಸಭೆಗೆ ಅಧ್ಯಕ್ಷ ಸ್ಥಾನವನ್ನು ಮೊದಲು ಪರಿಶಿಷ್ಟ ಜಾತಿಗೆ (ಎಸ್‌.ಸಿ) ನಿಗದಿ ಮಾಡಲಾಗಿತ್ತು. ಬಳಿಕ ಪರಿಶಿಷ್ಟ ಪಂಗಡ (ಎಸ್‌.ಟಿ) ಮಹಿಳೆ ಎಂದು ಬದಲಾಯಿಸಲಾಯಿತು. ಬೀಳಗಿ ಪಟ್ಟಣ ಪಂಚಾಯಿತಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಇದ್ದುದನ್ನು ಎಸ್‌.ಸಿ ಮಹಿಳೆಗೆ, ಕೆರೂರು ಪಟ್ಟಣ ಪಂಚಾಯಿತಿಯಲ್ಲಿ ಎಸ್‌.ಟಿ ಇದ್ದುದನ್ನು ಎಸ್‌.ಟಿ ಮಹಿಳೆ ಎಂದು ಬದಲಿಸಲಾಗಿದೆ. ಈ ಮೂರೂ ಕಡೆಗಳಲ್ಲಿ ಪಕ್ಷಕ್ಕೆ ಬಹುಮತವಿದೆ. ಆದರೆ, ಸಮ್ಮಿಶ್ರ ಸರ್ಕಾರ ತನಗೆ ಬೇಕಾದಂತೆ ಮೀಸಲಾತಿ ನಿಗದಿ ಮಾಡಿದ್ದರಿಂದ ಅಧಿಕಾರ ಕೈತಪ್ಪಿ ಹೋಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಕಲಬುರ್ಗಿ ಜಿಲ್ಲೆಯ ಗುರುಮಠಕಲ್‌ ಪುರಸಭೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಇದೆ. ಆದರೆ, ಹೊಸದಾಗಿ ಮೀಸಲಾತಿ ನಿಗದಿ ಮಾಡಿದ್ದರಿಂದ ಅಧ್ಯಕ್ಷ ಹುದ್ದೆ ಜೆಡಿಎಸ್‌ಗೆ ಸಿಕ್ಕಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ರಾಮದುರ್ಗ ಪುರಸಭೆಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದರೂ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಲಭಿಸಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 2

  Sad
 • 0

  Frustrated
 • 2

  Angry

Comments:

0 comments

Write the first review for this !