‘ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಲು ಹೋಗಿರಲಿಲ್ಲ’

7
ತಂದೆ ಸಂದೀಪ ಜಾಡರ ಸ್ಪಷ್ಟನೆ

‘ಹೆಣ್ಣುಮಗುವನ್ನು ಜೀವಂತ ಸಮಾಧಿ ಮಾಡಲು ಹೋಗಿರಲಿಲ್ಲ’

Published:
Updated:
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ಕೊಡಿಸುತ್ತಿರುವ ತಂದೆ ಸಂದೀಪ ಜಾಡರ, ತಾಯಿ ಗೀತಾ.

ಬೆಳಗಾವಿ: ‘ನಮ್ಮ ಹೆಣ್ಣು ಮಗುವನ್ನು ಜೀವಂತ ಸಮಾಧಿ ಮಾಡಲು ಹೋಗಿರಲಿಲ್ಲ. ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಮಗು ಮೃತಪಟ್ಟಿದೆ ಎಂದು ವೈದ್ಯರು ಹೇಳಿದ್ದರು. ಅವರ ಮಾತನ್ನು ನಂಬಿ, ಅಂತ್ಯಸಂಸ್ಕಾರ ನಡೆಸಲು ಸ್ಮಶಾನಕ್ಕೆ ತೆರಳಿದ್ದೆವು’ ಎಂದು ಮಗುವಿನ ತಂದೆ ಸಂದೀಪ ಜಾಡರ ಪೊಲೀಸರಿಗೆ ತಿಳಿಸಿದ್ದಾರೆ.

ಇಲ್ಲಿನ ಶಹಾಪುರ ಸ್ಮಶಾನದಲ್ಲಿ ಸೋಮವಾರ ಜೀವಂತ ಹೆಣ್ಣು ಮಗುವನ್ನು ಅಂತ್ಯಸಂಸ್ಕಾರ ಮಾಡಲು ಬಂದಿದ್ದರು ಎನ್ನುವ ಅಪವಾದಕ್ಕೆ ಗುರಿಯಾದವರೇ ಈ ಸಂದೀಪ ಜಾಡರ. ಅಂದು ನಡೆದ ವೃತ್ತಾಂತವನ್ನು ಪೊಲೀಸರಿಗೆ ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ.

‘ನಾನು ಶಹಾಪುರದ ಖಡೇಬಜಾರ್‌ ಬಟ್ಟೆ ಅಂಗಡಿಯಲ್ಲಿ ಸೇಲ್ಸ್‌ಮನ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ವರ್ಷ ಮೇ 15ರಂದು ಗೀತಾ ಅವರನ್ನು ಮದುವೆಯಾಗಿದ್ದೆ. ಇದೇ ವರ್ಷದ ಮೇ 10ರಂದು ಹೆಣ್ಣು ಮಗು ಜನಿಸಿತ್ತು. ಕಳೆದ ತಿಂಗಳು ತೀವ್ರ ಜ್ವರ ಕಾಣಿಸಿಕೊಂಡಿತ್ತು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಇದೇ ತಿಂಗಳ 20ರಂದು ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದೆವು. ಮಗುವಿನ ಬ್ರೇನ್‌ ಡ್ಯಾಮೇಜ್‌ ಆಗಿದೆ, ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದರು. ಸೋಮವಾರ ಮಧ್ಯಾಹ್ನ 12.45ರ ಸುಮಾರಿಗೆ ಮಗು ಕಣ್ಣು ಮುಚ್ಚಿದ್ದಳು. ಅದನ್ನು ನೋಡಿ ನಾವು ಮಗುವನ್ನು ಸ್ಮಶಾನಕ್ಕೆ ಕರೆದುಕೊಂಡು ಬಂದಿದ್ದೆವು’ ಎಂದು ವಿವರಿಸಿದರು.

‘ಸ್ಮಶಾನದಲ್ಲಿ ಮಗು ಪುನಃ ಕಣ್ಣು ತೆರೆಯಿತು. ನಂತರ ಅದನ್ನು ಪುನಃ ವೈದ್ಯರ ಬಳಿ ಕರೆದುಕೊಂಡು ಹೋದೆವು. ಈಗ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದೇವೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈಗ ಮಗು ಚೇತರಿಸಿಕೊಳ್ಳುತ್ತಿದೆ’ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

ಮಾರ್ಕೆಟ್‌ ಉಪವಿಭಾಗದ ಎಸಿಪಿ ಶಂಕರ ಮಾರಿಹಾಳ ಮಾತನಾಡಿ, ‘ಮಗುವಿನ ತಂದೆ– ತಾಯಿಯನ್ನು ಪತ್ತೆ ಹಚ್ಚಿದೆವು. ಮಗು ಸತ್ತುಹೋಗಿದೆ ಎಂದು ವೈದ್ಯರು ನೀಡಿದ್ದ ಹೇಳಿಕೆಯನ್ನು ನಂಬಿದ ಪೋಷಕರು ಅಂತ್ಯಸಂಸ್ಕಾರ ಮಾಡಲು ತೆರಳಿದ್ದರು, ಹೊರತು ಜೀವಂತ ಸಮಾಧಿ ಮಾಡಲು ಅಲ್ಲ’ ಎಂದು ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !