ವಿಜಯಪುರ: 1,70,942 ರೈತರಿಗೆ ಸಹಕಾರಿ

7
ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆ

ವಿಜಯಪುರ: 1,70,942 ರೈತರಿಗೆ ಸಹಕಾರಿ

Published:
Updated:

ವಿಜಯಪುರ: ಹಣಕಾಸು ಸಚಿವ ಪೀಯೂಷ್‌ ಗೋಯೆಲ್‌ ಈಚೆಗೆ ಲೋಕಸಭೆಯಲ್ಲಿ ಮಂಡಿಸಿದ 2019–20ನೇ ಸಾಲಿನ ಕೇಂದ್ರದ ಮಧ್ಯಂತರ ಬಜೆಟ್‌ನಲ್ಲಿ, ದೇಶದ ರೈತ ಸಮೂಹಕ್ಕಾಗಿ ‘ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಯೋಜನೆ ಘೋಷಿಸಿದ್ದಾರೆ.

ಈ ಯೋಜನೆಯಡಿ ಎರಡು ಹೆಕ್ಟೇರ್‌ಗಿಂತ (ಐದು ಎಕರೆ) ಕಡಿಮೆ ಭೂಮಿ ಹೊಂದಿರುವ, ದೇಶದ ಎಲ್ಲ ಭಾಗದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲಕಾರಿಯಾಗುವಂತೆ, ವಾರ್ಷಿಕ ₹ 6000 ನಗದನ್ನು, ತಲಾ ಮೂರು ಕಂತುಗಳಲ್ಲಿ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಇದು ಸಣ್ಣ, ಅತಿ ಸಣ್ಣ ರೈತ ಸಮುದಾಯದಲ್ಲಿ ಖುಷಿ ಮೂಡಿಸಿದೆ. ಕೃಷಿ ಚಟುವಟಿಕೆ ನಡೆಸಲು ಖರ್ಚಿಗೂ ರೊಕ್ಕವಿಲ್ಲದೆ, ಪರದಾಡುವಂಥ ಸನ್ನಿವೇಶದಲ್ಲಿ, ಸರ್ಕಾರವೇ ನೇರವಾಗಿ ಖಾತೆಗೆ ಜಮೆ ಮಾಡಿದರೆ, ಸಾಕಷ್ಟು ಅನುಕೂಲವಾಗಲಿದೆ ಎಂಬ ಅನಿಸಿಕೆ ಅಸಂಖ್ಯಾತ ರೈತ ಸಮೂಹದಿಂದ ಕೇಳಿ ಬಂದಿದೆ.

ಈ ಯೋಜನೆ ಘೋಷಣೆಯಾದ ಬಳಿಕ ಯಥಾಪ್ರಕಾರ ರಾಜಕೀಯ ಪಕ್ಷಗಳು ಕೆಸರೆರಚಾಟದಲ್ಲಿ ನಿರತವಾಗಿವೆ. ಕೇಂದ್ರದ ಯೋಜನೆ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ರೈತರ ಸ್ವಾಭಿಮಾನದ ಪ್ರಶ್ನೆ ಎತ್ತಿವೆ. ಒಂದು ರೈತ ಕುಟುಂಬಕ್ಕೆ ಸರ್ಕಾರ ನಿತ್ಯ ನೀಡುವುದು ₹ 16.43 ಎಂದು ಕಟು ಟೀಕೆ ನಡೆಸಿವೆ.

ಕಮಲ ಪಡೆಯ ಕಾಲಾಳುಗಳು ಯೋಜನೆ ಸ್ವಾಗತಿಸಿ, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರಾಂದೋಲನ ಕೈಗೊಂಡಿದ್ದರೆ; ವಿರೋಧಿ ಪಾಳೆಯದ ಕಾಂಗ್ರೆಸ್‌ ಕೂಟ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. ಸಾಮಾಜಿಕ ಜಾಲತಾಣದ ಸಮರ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲೂ ಬಿರುಸಿನಿಂದ ನಡೆದಿದೆ.

ವಿಜಯಪುರ ಜಿಲ್ಲೆಯ ಚಿತ್ರಣ:

ವಿಜಯಪುರ ಜಿಲ್ಲೆಯ 12 ತಾಲ್ಲೂಕುಗಳಲ್ಲಿ ಒಟ್ಟು 3,42,203 ರೈತರಿದ್ದಾರೆ. ಒಂದು ಎಕರೆಯಿಂದ ನೂರು, ಇನ್ನೂರು, ಮುನ್ನೂರು ಎಕರೆ ಜಮೀನು ಹೊಂದಿರುವ ರೈತರು ಇಲ್ಲಿದ್ದಾರೆ. ಒಟ್ಟು 9,50,332 ಹೆಕ್ಟೇರ್‌ ಕೃಷಿ ಭೂಮಿ ಜಿಲ್ಲೆಯಲ್ಲಿದೆ.

51,150 ರೈತರಿಗೆ 1 ಹೆಕ್ಟೇರ್‌ಗಿಂತ ಕಡಿಮೆ ಕೃಷಿ ಭೂಮಿಯಿದೆ. 32,900 ಹೆಕ್ಟೇರ್‌ ಕೃಷಿ ಭೂಮಿ ಇವರಿಗಿದೆ. 1,19,792 ರೈತರಿಗೆ ಒಂದರಿಂದ ಎರಡು ಹೆಕ್ಟೇರ್‌ವರೆಗೂ ಕೃಷಿ ಭೂಮಿಯಿದ್ದು, ಒಟ್ಟು 1,76,791 ಹೆಕ್ಟೇರ್‌ ಕೃಷಿ ಭೂಮಿಯಿದೆ. ಉಳಿದ ಭೂಮಿ, ರೈತರು ಕೇಂದ್ರದ ಯೋಜನೆಗಿಂತ ಹೆಚ್ಚು ಭೂಮಿ ಹೊಂದಿದವರಾಗಿದ್ದಾರೆ.

ಜಿಲ್ಲೆಯ 1.70.942 ರೈತರ, 2,09,691 ಹೆಕ್ಟೇರ್‌ ಕೃಷಿ ಭೂಮಿ, ಕೇಂದ್ರದ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಗೆ ಒಳಪಡಲಿದೆ. ಯೋಜನೆ ಯಾವ ರೀತಿ ಅನುಷ್ಠಾನಗೊಳ್ಳಲಿದೆ ಎಂಬ ಮಾರ್ಗದರ್ಶಿ ಸೂತ್ರಗಳು ಇನ್ನೂ ಬಂದಿಲ್ಲ. ಹದಿನೈದು ದಿನದೊಳಗೆ ತಲುಪಬಹುದು ಎಂದು ವಿಜಯಪುರ ಜಿಲ್ಲಾ ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಕೃಷಿಕರ ಮನದಲ್ಲಿ ಖುಷಿ..!

‘ವರ್ಷಕ್ಕೊಮ್ಮೆ ಬೆಳೆ ಸಾಲ ಮನ್ನಾ ಮಾಡುವುದಕ್ಕಿಂತ, ರೈತರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಯೋಜನೆ ಅತ್ಯುತ್ತಮವಾದುದು. ಇದು ಎಲ್ಲ ರೈತರನ್ನು ತಲುಪುತ್ತದೆ. ಸಾಲ ಪಡೆಯಲು ಅವಕಾಶ ಸಿಗದವರು ಈ ಯೋಜನೆಯಡಿ ಫಲಾನುಭವಿಗಳಾಗಲಿದ್ದಾರೆ. ಬರಗಾಲ, ತೀವ್ರ ಸಂಕಷ್ಟಕ್ಕೀಡಾದ ಸಂದರ್ಭ ಈ ಯೋಜನೆ ರೈತರ ಪಾಲಿಗೆ ವರದಾನವಾಗಲಿದೆ’ ಎಂದು ಎರಡೂವರೆ ಎಕರೆ ಜಮೀನು ಹೊಂದಿರುವ ಬಸವನಬಾಗೇವಾಡಿಯ ರೈತ ಬಸವರಾಜ ಅಂಗಡಿ ತಿಳಿಸಿದರು.

‘ಕೇಂದ್ರದ ಯೋಜನೆ ಸಣ್ಣ ರೈತರಿಗೆ ಅನುಕೂಲಕಾರಿ. ಬಿತ್ತನೆ ಬೀಜ, ರಸ ಗೊಬ್ಬರ ಖರೀದಿಸಲು ಮತ್ತೊಬ್ಬರ ಬಳಿ ಸಾಲ ಪಡೆಯುವುದು ತಪ್ಪುತ್ತದೆ. ಸರ್ಕಾರ ಖಾತೆಗೆ ಜಮೆ ಮಾಡಿದ ಹಣ ಕಾಪಿಟ್ಟುಕೊಂಡು, ಕೃಷಿ ಕೈಗೊಳ್ಳಲು ಆಸರೆಯಾಗಲಿದೆ’ ಎನ್ನುತ್ತಾರೆ ರೈತ ಸೋಮಣ್ಣ ಪಟ್ಟಣಶೆಟ್ಟಿ.

‘ಚುನಾವಣೆ ಹೊತ್ತಲ್ಲಿ ಇಂತಹ ಮಹತ್ವದ ಯೋಜನೆ ಘೋಷಿಸುವ ಬದಲು, ಅಧಿಕಾರದ ಚುಕ್ಕಾಣಿ ಹಿಡಿದಾಗ ಆರಂಭಿಸಿದರೆ ಆಡಳಿತದ ಬಗ್ಗೆಯೂ ಚಲೋ ಅಭಿಪ್ರಾಯ ಮೂಡಲಿದೆ. ಸಾಲ ಮನ್ನಾದ ಗೊಂದಲಕ್ಕಿಂತ ಪ್ರತಿ ತಿಂಗಳು ₹ 1000 ಖಾತೆಗೆ ಜಮೆ ಮಾಡಿದರೆ, ರೈತರು ನಿರಾತಂಕವಾಗಿ ತಮ್ಮ ಬದುಕಿನ ಜತೆ, ಕೃಷಿಯನ್ನು ನಡೆಸಲಿದ್ದಾರೆ’ ಎಂದು ಮುದ್ದೇಬಿಹಾಳ ತಾಲ್ಲೂಕಿನ ರೈತ ರಾಜಶೇಖರ ಪಾಟೀಲ ಲಿಂಗದಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !