ಗುರುವಾರ , ನವೆಂಬರ್ 21, 2019
27 °C
2 ದಶಕಗಳ ಕೂಗಿಗೆ ಇನ್ನೂ ಸಿಗದ ಮುಕ್ತಿ: ಕೇಂದ್ರದಿಂದ ಸಿಗದ ಅನುಮೋದನೆ

ಉಪನಗರ–ಹಳಿ ಇಲ್ಲದ ‘ರೈಲು’!

Published:
Updated:
Prajavani

ಬೆಂಗಳೂರು: ಐ.ಟಿ ಸಿಟಿಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಸಂಚಾರ ಆರಂಭಿಸಬೇಕು ಎಂಬ ಕೂಗು ಆರಂಭವಾಗಿ ಎರಡು ದಶಕಗಳೇ ಕಳೆದಿವೆ. ಆದರೆ, ಈ ರೈಲುಗಳನ್ನು ವಾಸ್ತವದಲ್ಲಿ ಕಾಣುವ ದಿನ ಇನ್ನೂ ಕೂಡಿಬಂದಿಲ್ಲ. ಬೆಂಗಳೂರಿನ ಜನರ ಪಾಲಿಗೆ ಈ ಯೋಜನೆ ಕನವರಿಕೆಯಾಗಿಯೇ ಉಳಿದಿದೆ.

‘ಇನ್ನೇನು ಸಬ್‌ಅರ್ಬನ್ ರೈಲಿನ ಚುಕುಬುಕು ಸದ್ದು ಆರಂಭವಾಗಲಿದೆ’ ಎಂದು ಜನಪ್ರತಿನಿಧಿಗಳು ಹಳಿ ಇಲ್ಲದ ರೈಲು ಬಿಡುತ್ತಿದ್ದಾರೆಯೇ ವಿನಾ ಈ ಯೋಜನೆಯನ್ನು ಸಾಕಾರಗೊಳಿಸುವ ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆ ನಡು ವಿನ ಸಮನ್ವಯ ಕೊರತೆಯಿಂದಾಗಿ ಒಂದಿಲ್ಲೊಂದು ಕಾರಣಕ್ಕೆ ಈ ಯೋಜನೆ ಅನುಷ್ಠಾನ ಮುಂದಕ್ಕೆ ಹೋಗುತ್ತಿದೆ.

ಬೆಳೆಯುತ್ತಿರುವ ನಗರಕ್ಕೆ ಸುತ್ತಮುತ್ತಲ ಉಪನಗರಗಳಿಂದ ಸಂಪರ್ಕ ಕೊಂಡಿಯಾಗಿ ಉಪನಗರ ರೈಲುಗಳು ಸಂಚರಿಸಬೇಕು ಎಂಬ ಕೂಗು ಮೊದಲು ಆರಂಭವಾಗಿದ್ದು 1996–97ರಲ್ಲಿ. ಆಗೊಮ್ಮೆ, ಈಗೊಮ್ಮೆ ಈ ಪ್ರಸ್ತಾಪ ಮುನ್ನೆಲೆಗೆ ಬಂದು ಮತ್ತೆ ಮರೆಗೆ ಸರಿಯುತ್ತಿತ್ತು. 2010ರ ನಂತರ ಅದು ತೀವ್ರಗೊಂಡಿತು. ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ರೈಟ್ಸ್ (ರೈಲ್ ಇಂಡಿಯಾ ಟೆಕ್ನಿಕಲ್ ಆ್ಯಂಡ್ ಎಕನಾಮಿಕ್ ಸರ್ವಿಸ್) ಸಂಸ್ಥೆ ಮೂಲಕ ವರದಿಯೊಂದನ್ನು ಸಿದ್ಧಪಡಿಸಲಾಯಿತು.

2013ರಲ್ಲಿ ಕೇಂದ್ರದಲ್ಲಿ ಸರ್ಕಾರ ಬದಲಾಗಿ ಡಿ.ವಿ. ಸದಾನಂದಗೌಡ ಅವರು ರೈಲ್ವೆ ಸಚಿವರಾದರು. ಆಗ ಬಂಗಾರಪೇಟೆ ಸೇರಿದಂತೆ ಕೆಲ ನಗರಗಳಿಗೆ ಮೆಮು ರೈಲು ಸಂಚಾರ ಆರಂಭಗೊಂಡಿತು. ಸ್ವಲ್ಪ ದಿನಗಳಲ್ಲೇ ಸದಾನಂದ ಗೌಡ ಅವರು ರೈಲ್ವೆ ಸಚಿವ ಸ್ಥಾನದಿಂದ ಕೆಳಗಿಳಿದರು. ಬಳಿಕ ಯೋಜನೆಯೂ ನನೆಗುದಿಗೆ ಬಿದ್ದಿತು. ನಂತರ ಸಚಿವರಾದ ಸುರೇಶ್‌ ಪ್ರಭು ಅವರು ಈ ಯೋಜನೆ ಬಗ್ಗೆ ಅಷ್ಟಾಗಿ ಆಸಕ್ತಿ ತೋರಿಸಲಿಲ್ಲ.

2016ರಲ್ಲಿ ಉಕ್ಕಿನ ಸೇತುವೆ ರೀತಿಯ ಯೋಜನೆಗಳನ್ನು ವಿರೋಧಿಸಿ ರೂಪುಗೊಂಡ ಹೋರಾಟ ಉಪನಗರ ರೈಲು ಯೋಜನೆಯ ಪರವಾದ ಕೂಗನ್ನು ಮತ್ತಷ್ಟು ಗಟ್ಟಿಗೊಳಿಸಿತು. ‘ಸಿಟಿಜನ್ ಫಾರ್ ಬೆಂಗಳೂರು’ ಹಾಗೂ ರೈಲ್ವೆ ಪ್ರಯಾಣಿಕರ ವೇದಿಕೆಯ ಸದಸ್ಯರು ಈ ಯೋಜನೆ ಜಾರಿಗೆ ಒತ್ತಾಯಿಸಿ ‘ಚುಕುಬುಕು ಬೇಕು’ ಎಂಬ ಹೋರಾಟವನ್ನು ಸಾಮಾಜಿಕ ಜಾಲತಾಣಗಳಲ್ಲೂ ಆರಂಭಿಸಿದರು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಗಳನ್ನು ಹಾಕಿ ಮಾಹಿತಿ ಪಡೆದುಕೊಂಡ ಹೋರಾಟಗಾರರು, ರೈಲ್ವೆ ಇಲಾಖೆ ಮತ್ತು ಜನಪ್ರತಿನಿಧಿಗಳ ಬೆನ್ನುಬಿದ್ದರು.

ಕಾಂಗ್ರೆಸ್‌ ಸರ್ಕಾರದ ಕೊನೆಯ ವರ್ಷ ಉಪನಗರ ರೈಲು ಯೊಜನೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ರೈಲ್ವೆ ಇಲಾಖೆ ಜೊತೆ ಸರಣಿ ಸಭೆಗಳನ್ನು ನಡೆಸಿದರು. ಈ ಯೋಜನೆಯಲ್ಲಿ ರಾಜ್ಯ ಎಷ್ಟು ಪಾಲನ್ನು ಭರಿಸಬೇಕು– ರೈಲ್ವೆ ಇಲಾಖೆ ಎಷ್ಟನ್ನು ಹೂಡಿಕೆ ಮಾಡಬೇಕು ಎಂಬ ಕುರಿತ ಚರ್ಚೆಗಳು ನಡೆದವಾದರೂ ಈ ಕುರಿತು ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

ಕಳೆದ ವರ್ಷ ರೈಲ್ವೆ ಸಚಿವರಾದ ಪಿಯೂಷ್‌ ಗೋಯಲ್ ಅವರು, ರಾಜ್ಯ ಸರ್ಕಾರದ ಜತೆಗೆ ಒಪ್ಪಂದವೊಂದನ್ನು ಮಾಡಿಕೊಂಡರು (ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು). ಅಗತ್ಯ ಇರುವ ರೈಲ್ವೆ ಇಲಾಖೆಯ ಭೂಮಿಯನ್ನು ಉಚಿತವಾಗಿ ಬಿಟ್ಟುಕೊಡುವ ಒಪ್ಪಂದವೂ ಏರ್ಪಟ್ಟಿತು. ಶೇ 50ರಷ್ಟು ಅನುದಾನ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನಗೊಳಿಸಲು ಮುಂದಾದರು. ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ಹೊಣೆಯನ್ನು ಮತ್ತೆ ರೈಟ್ಸ್ ಸಂಸ್ಥೆಗೆ ವಹಿಸಲಾಯಿತು.

2019ರ ಮೇ ತಿಂಗಳಲ್ಲಿ ‌₹18 ಸಾವಿರ ಕೋಟಿ ಮೊತ್ತದ ಯೋಜನೆಯ ಡಿಪಿಆರ್ ಅನ್ನು ರೈಟ್ಸ್ ಸಂಸ್ಥೆ ಸಿದ್ಧಪಡಿಸಿದೆ. ‘ಮೆಟ್ರೊ ರೈಲು ಯೋಜನೆ ಇರುವ ಕಡೆಯೇ ಉಪನಗರ ರೈಲು ಯೋಜನೆಯನ್ನು ಅನುಷ್ಠಾನ
ಗೊಳಿಸುವುದು ಬೇಡ’ ಎಂದು ಹೇಳಿದ ಪ್ರಧಾನಮಂತ್ರಿ ಕಚೇರಿ ಉಚಿತ
ವಾಗಿ ಭೂಮಿ ಒದಗಿಸುವ ಒಪ್ಪಂದಕ್ಕೂ ತಗಾದೆ ತೆಗೆಯಿತು. ಬಳಿಕ ರೈಟ್ಸ್ ಸಂಸ್ಥೆಯು ₹16,500 ಕೋಟಿ ಮೊತ್ತದ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಿ ಸಲ್ಲಿಸಿದೆ. ರಾಜ್ಯ ಸರ್ಕಾರ ಎಲ್ಲಾ ರೀತಿಯ ಅನುಮೋದನೆ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿದೆ. ಸದ್ಯ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಹೆಚ್ಚಿನ ಜವಾಬ್ದಾರಿ ಇರುವುದು ಕೇಂದ್ರ ರೈಲ್ವೆ ಇಲಾಖೆಯ ಮೇಲೆ.

ನಗರವನ್ನು ಪ್ರತಿನಿಧಿಸುವ
ಮೂರೂ ಲೋಕಸಭಾ ಕ್ಷೇತ್ರಗಳನ್ನು ಮೂರು ಅವಧಿಯಿಂದ ಬಿಜೆಪಿ ಸದಸ್ಯರೇ ಪ್ರತಿನಿಧಿಸುತ್ತಿದ್ದಾರೆ. ಕೇಂದ್ರದಲ್ಲಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಹಾಗೂ ಈಗಿನ ಅವಧಿಯಲ್ಲಿ ಬಿಜೆಪಿ
ಸರ್ಕಾರವೇ ಇದೆ. ‘ಇಷ್ಟು ದಿನ ಉಪನಗರ ರೈಲು ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಗೂಬೆ ಕೂರಿಸುವ ಯತ್ನವನ್ನು ಸಂಸದರು ಮಾಡುತ್ತಿದ್ದರು. ಈಗ ಅದಕ್ಕೂ ಅವಕಾಶ ಇಲ್ಲ. ರಾಜ್ಯದಲ್ಲೂ ಬಿಜೆಪಿ ಸರ್ಕಾರವೇ ಅಸ್ತಿತ್ವಕ್ಕೆ ಬಂದಿದೆ. ಎರಡು ಕಡೆ ಬಿಜೆಪಿ ಸರ್ಕಾರವೇ ಇದ್ದರೂ, ಈ ಯೋಜನೆಯನ್ನು ಅನುಷ್ಠಾನಕ್ಕೆ
ತರುವ ಗಂಭೀರ ಪ್ರಯತ್ನಗಳು ಕಾಣಿಸುತ್ತಿಲ್ಲ.

ಬೇಕಿದೆ ಮೂರು ಅನುಮೋದನೆ
ಪರಿಷ್ಕೃತ ಡಿಪಿಆರ್‌ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿ ಎರಡು ತಿಂಗಳುಗಳು ಕಳೆದಿವೆ. ಅದಕ್ಕೆ ಮೂರು ಅನುಮೋದನೆಗಳು ದೊರೆಯಬೇಕಿದ್ದು, ಅವು ಸದ್ಯಕ್ಕೆ ದೊರೆಯುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ.

‘ರೈಲ್ವೆ ಮಂಡಳಿ ಮತ್ತು ರಾಜ್ಯ ಸರ್ಕಾರದ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಕೇಂದ್ರ ಸಚಿವ ಸಂಪುಟ, ನೀತಿ ಆಯೋಗ, ಹಣಕಾಸು ವ್ಯವಹಾರಗಳ ಸಂಪುಟ ಸಮಿತಿಯಿಂದ ಅನುಮೋದನೆ ಸಿಗಬೇಕಿದೆ. ಕೇಂದ್ರ ಸಚಿವ ಸಂಪುಟದ ಮುಂದೆ ಈ ಪ್ರಸ್ತಾವ ಮಂಡನೆ ಆಗುವಂತೆ ರಾಜ್ಯದ ಸಂಸದರು, ಸಚಿವರು ನೋಡಿಕೊಳ್ಳಬೇಕಿದೆ’ ಎನ್ನುತ್ತಾರೆ ರೈಲ್ವೆ ಹೋರಾಟಗಾರರು

ಬಜೆಟ್‌ನಲ್ಲಿ ಈ ಯೋಜನೆಗೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿಲ್ಲ. ರೈಲ್ವೆ ಇಲಾಖೆಯ ವಿವಿಧ ವಿಭಾಗಗಳು ಮತ್ತು ಯೋಜನೆಗಳಿಗೆ ಅನುದಾನ ಮಂಜೂರಾದ ವಿವರಗಳನ್ನು ಹೊತ್ತ ‘ಪಿಂಕ್ ಬುಕ್’ನಲ್ಲಿ ಇರುವ ಮಾಹಿತಿ ಪ್ರಕಾರ ಬೆಂಗಳೂರಿನ ಉಪನಗರ ರೈಲ್ವೆ ಯೋಜನೆಗೆ ಕೇವಲ ₹1 ಕೋಟಿ ನೀಡಲಾಗಿದೆ.

ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಕೆರೈಡ್‌–ಕರ್ನಾಟಕ ರೈಲ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲಪ್‌ಮೆಂಟ್‌ ಕಾರ್ಪೊರೇಷನ್) ರಾಜ್ಯದಲ್ಲಿ ರೈಲು ಯೋಜನೆಗಳ ಅನುಷ್ಠಾನದ ವಿಶೇಷ ಉದ್ದೇಶದ ಘಟಕವನ್ನಾಗಿ (ಎಸ್‌ಪಿವಿ) ನಿಯೋಜಿಸಲಾಗಿದೆ. ಆದರೆ, ಆ ಏಜೆನ್ಸಿ ಇನ್ನೂ ಕಾರ್ಯಾರಂಭಗೊಂಡಿಲ್ಲ. ಬಜೆಟ್‌ನಲ್ಲಿ ನಿರೀಕ್ಷಿತ ಅನುದಾನ ದೊರಕದ ಕಾರಣ ಈ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳು ನಡೆಯುವುದು ಅನುಮಾನ.

ರೈಲ್ವೆ ಇಲಾಖೆ ಕನಿಷ್ಠಪಕ್ಷ ₹100 ಕೋಟಿ ಮಂಜೂರು ಮಾಡಿದ್ದರೆ ಯೋಜನೆ ಅನುಷ್ಠಾನಕ್ಕೆ ಕಳೆದ ವರ್ಷ ಸಿಕ್ಕಿದ್ದ ವೇಗವನ್ನು ಉಳಿಸಿಕೊಳ್ಳಬಹುದಿತ್ತು. ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಸಾರಿಗೆ ಸಮಸ್ಯೆ ಉಲ್ಬಣಿಸುತ್ತಿದೆ. ಕೇಂದ್ರ ಸರ್ಕಾರ ಇತ್ತ ಗಮನ ಕೊಡಬೇಕಿತ್ತು ಎಂಬುದು ಸಾರಿಗೆ ತಜ್ಞರ ಅಭಿಪ್ರಾಯ.

ಕಡಿಮೆಯಾಗಲಿದೆ ವಾಹನ ಬಳಕೆ

ಉಪನಗರ ರೈಲು ಸಂಚಾರ ಆರಂಭಗೊಂಡರೆ ಖಾಸಗಿ ವಾಹನಗಳ ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದು ಸಾರಿಗೆ ತಜ್ಞರ ಅಭಿಪ್ರಾಯ.

ಮುಂಬೈ ನಗರದಲ್ಲಿ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 1 ರವರೆಗೆ ಪ್ರತಿ ಮೂರು ನಿಮಿಷಕ್ಕೊಂದು ಪ್ರಯಾಣಿಕ ರೈಲು ಸಂಚರಿಸುತ್ತದೆ. 75 ಲಕ್ಷ ಜನರು ಈ ಸೌಲಭ್ಯ ಬಳಸುತ್ತಾರೆ. ಹಾಗಾಗಿ, ಅಲ್ಲಿ ಖಾಸಗಿ ವಾಹನಗಳ ಸಂಖ್ಯೆ 40 ಲಕ್ಷಕ್ಕಿಂತಲೂ ಕಡಿಮೆ ಇದೆ.

ಬೆಂಗಳೂರಿನಲ್ಲೂ 20 ಲಕ್ಷಕ್ಕೂ ಹೆಚ್ಚು ಮಂದಿ ರೈಲು ಬಳಸುವಂತೆ ಮಾಡಲು ಸಾಧ್ಯವಿದೆ. ಇದರಿಂದ ಪ್ರಸ್ತುತ ಬಳಕೆಯಾಗುತ್ತಿರುವ ಕಾರು ಹಾಗೂ ದ್ವಿಚಕ್ರ ವಾಹನಗಳ ಪೈಕಿ ಅರ್ಧದಷ್ಟು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ ತಜ್ಞರು.

ಬೋಗಿ ಭರ್ತಿಯಾದರೂ ವರಮಾನವಿಲ್ಲ

 ಯಶವಂತಪುರ–ಹೊಸೂರು ಮಾರ್ಗದ ರೈಲಿನಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ, ರೈಲ್ವೆ ಇಲಾಖೆ ಪ್ರಕಾರ ಈ ಮಾರ್ಗದಲ್ಲಿ ವರಮಾನವೇ ಇಲ್ಲ.

‘ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಕನಿಷ್ಠ ಒಂದು ಬೋಗಿಯನ್ನಾದರೂ ಹೆಚ್ಚಿಸಿ ಎಂದು ರೈಲ್ವೆ ಅಧಿಕಾರಿಗಳಿಗೆ ಕೇಳಿದರೆ, ಇರುವ ಬೋಗಿಗಳಿಗೇ ಜನರಿಲ್ಲ ಎನ್ನುತ್ತಿದ್ದಾರೆ’ ಎಂದು ಉಪನಗರ ರೈಲು ಹೋರಾಟಗಾರ ಸುಹಾಸ್ ನಾರಾಯಣಮೂರ್ತಿ ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಬಹುತೇಕ ಐ.ಟಿ ಉದ್ಯೋಗಿಗಳೇ ಸಂಚರಿಸುವ ಈ ಮಾರ್ಗದಲ್ಲಿ ಯಶವಂತಪುರದಿಂದ ಹೊಸೂರಿಗೆ ಪ್ರಯಾಣ ದರ ₹10 ಇದೆ. ಅನೇಕರು ಪಾಸ್ ಅವಧಿ ಮುಗಿದರೂ ನವೀಕರಿಸಿಕೊಳ್ಳದೆಯೇ ಸಂಚರಿಸುತ್ತಾರೆ ಎಂಬ ಆರೋಪವಿದೆ. ಟಿಕೆಟ್‌ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚುವುದು ಮತ್ತು ಎಲ್ಲರೂ ಟಿಕೆಟ್ ಪಡೆದು ಪ್ರಯಾಣ ಮಾಡುವಂತೆ ನೋಡಿಕೊಳ್ಳುವುದೂ ರೈಲ್ವೆ ಇಲಾಖೆಯ ಜವಾಬ್ದಾರಿ. ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು’ ಎಂದು ಅವರು ಒತ್ತಾಯಿಸಿದರು.

***

ಉಪನಗರ ರೈಲು ಯೋಜನೆ ಬಗ್ಗೆ ಬೆಂಗಳೂರಿನ ಯಾವ ಸಂಸದರಿಗೂ ಆಸಕ್ತಿ ಇಲ್ಲ. ಅವರ ಧೋರಣೆಗಳನ್ನು ನೋಡಿದರೆ ಸದ್ಯಕ್ಕೆ ಈ ಯೋಜನೆ ಸಾಕಾರಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ

– ಲೋಕೇಶ್‌, ಕರ್ನಾಟಕ ರೈಲ್ವೆ ವೇದಿಕೆ ಸಂಚಾಲಕ

***

ಉಪನಗರ ರೈಲು ಯೋಜನೆ ಅನುಷ್ಠಾನಗೊಂಡರೆ ನಗರದ 20 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕೇಂದ್ರ ಸರ್ಕಾರ ಕೂಡಲೇ ಅನುಮೋದನೆ ನೀಡಬೇಕು

– ಸಂಜೀವ್ ದ್ಯಾಮಣ್ಣನವರ್‌, ರೈಲ್ವೆ ಹೋರಾಟಗಾರ

***

ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಈ ಹಿಂದೆ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದ ಬಿಜೆಪಿ ಸಂಸದರು ಈಗ ಏನು ಮಾಡುತ್ತಿದ್ದಾರೆ

– ಕೃಷ್ಣಪ್ರಸಾದ್, ಕರ್ನಾಟಕ ರೈಲ್ವೆ ವೇದಿಕೆ

 

 

ಪ್ರತಿಕ್ರಿಯಿಸಿ (+)