ಯುವತಿ ಆತ್ಮಹತ್ಯೆ: ಯುವಕ ಬಂಧನ

7

ಯುವತಿ ಆತ್ಮಹತ್ಯೆ: ಯುವಕ ಬಂಧನ

Published:
Updated:

ಬೆಂಗಳೂರು: ಚಂದ್ರಾಲೇಔಟ್ ಬಳಿಯ ಭೈರವೇಶ್ವರ ನಗರದಲ್ಲಿ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ರವಿಕಿರಣ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಮದುವೆ ಆಗುವುದಾಗಿ ನಂಬಿಸಿದ್ದ ರವಿಕಿರಣ್, ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾನೆ. ಆತನ ವಿರುದ್ಧ ದೂರು ನೀಡಿದರೂ ಪೊಲೀಸರು ಕ್ರಮ ತೆಗೆದುಕೊಳ್ಳಲಿಲ್ಲ’ ಎಂದು ಮರಣಪತ್ರ ಬರೆದಿಟ್ಟು ಯುವತಿಯು ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

‘ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ರವಿಕಿರಣ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಶನಿವಾರ ಹಾಜರುಪಡಿಸಲಾಯಿತು. ವಿಚಾರಣೆಗಾಗಿ 7 ದಿನಗಳವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.  

‘ಮಾಗಡಿ ತಾಲ್ಲೂಕು ಹೊಸಪಾಳ್ಯ ಗ್ರಾಮದ ಆರೋಪಿ, ಯುವತಿಯ ಬಾಲ್ಯ ಸ್ನೇಹಿತ. ಭೈರವೇಶ್ವರ ನಗರದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ ಆತ, ಜಾಹೀರಾತು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಯುವತಿಯನ್ನು ಹಲವು ವರ್ಷಗಳಿಂದ  ಪ್ರೀತಿಸುತ್ತಿದ್ದ. ಇತ್ತೀಚೆಗೆ ಅವರಿಂದ ದೂರವಾಗಲು ಯತ್ನಿಸಿದ್ದ ಆತ, ‘ಹಣ ಕೊಡುತ್ತೇನೆ. ನನಗೆ ತೊಂದರೆ ಕೊಡಬೇಡ’ ಎಂದು  ತಾಕೀತು ಮಾಡಿದ್ದ. ಅದರಿಂದ ನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ವಿವರಿಸಿದರು.  

ಪೊಲೀಸರ ವಿರುದ್ಧ ಆಕ್ರೋಶ: ‘ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಪೊಲೀಸರು ಕಾರಣ’ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

‘ವಂಚನೆ ಬಗ್ಗೆ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಆರೋಪಿಯನ್ನು ಬಂಧಿಸಲಿಲ್ಲ. ಅದರಿಂದ ನೊಂದು ಯುವತಿ ಸಾವಿಗೆ ಶರಣಾಗಿದ್ದಾರೆ. ತಪ್ಪಿತಸ್ಥ ಪೊಲೀಸರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !