ಸೋಮವಾರ, ಅಕ್ಟೋಬರ್ 14, 2019
23 °C

ಹಿರಿಯರಲ್ಲಿ ಒಲವಿರಲಿ

Published:
Updated:
Prajavani

‘ವಸತಿ ಸಮುಚ್ಛಯವೊಂದರಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದ ತಾಯಿಯನ್ನು ನೋಡಲು ವಿದೇಶದಿಂದ ಬಂದ ಮಗನನ್ನು ಸ್ವಾಗತಿಸಿದ್ದು ಆಕೆಯ ಅಸ್ಥಿಪಂಜರ! ಕೆಲವು ವರ್ಷಗಳಿಂದ ಮಗನ ಆಗಮನಕ್ಕಾಗಿ ಹಂಬಲಿಸುತ್ತಿದ್ದ ಆ ಮಮತಾಮಯಿಯ ಆಸೆ ಈಡೇರದೆ ಮರಣವನ್ನಪ್ಪಿ ಬಹಳ ದಿನವಾಗಿತ್ತು’.

‘ನಗರದ ಹೊರವಲಯದಲ್ಲಿ ವೃದ್ಧ ದಂಪತಿ ಕೊಲೆಗೈದು ಮನೆಯಲ್ಲಿದ್ದ ಹಣ, ಒಡವೆ ಲೂಟಿ’

– ಇಂಥದೇ ಹತ್ತು ಹಲವು ಪ್ರಕರಣಗಳು ಪ್ರತಿನಿತ್ಯವೆಂಬಂತೆ ವರದಿಯಾಗುತ್ತಲೇ ಇರುತ್ತವೆ. ಹೌದು, ಇಂದು ಹಿರಿಯ ನಾಗರಿಕರು ಕಳ್ಳರು, ದರೋಡೆಕೋರರಿಗೆ ಸುಲಭದ ತುತ್ತಾಗುತ್ತಿದ್ದಾರೆ. ಮಕ್ಕಳಿಂದ ದೂರವಾಗಿ ವಾಸಿಸುತ್ತಿರುವ ವೃದ್ಧರನ್ನು ದೋಚುವುದು, ಕೊಲೆಗೈಯುವುದು ಸಲೀಸು. ಕೌಟುಂಬಿಕ ಸಾಮರಸ್ಯ, ರಕ್ತಸಂಬಂಧಗಳು ದಿನೇ ದಿನೇ ದುರ್ಬಲವಾಗುತ್ತಿರುವ ಈ ಹೊತ್ತಿನಲ್ಲಿ ಸ್ವಂತ ಮಕ್ಕಳಿಂದ ತಿರಸ್ಕೃತರಾಗುತ್ತಿರುವ ಹೆತ್ತವರು ಬೇರೆಯಾಗಿಯೋ ಇಲ್ಲ ವೃದ್ಧಾಶ್ರಮದಲ್ಲೋ ಜೀವನ ನಡೆಸುತ್ತಿರುವುದು ಸಾಮಾನ್ಯವೆಂಬಂತಾಗಿದೆ. ಇದಕ್ಕೆ ಪಟ್ಟಣ, ಹಳ್ಳಿಯೆಂಬ ಬೇಧವಿಲ್ಲ. ಅತ್ತ ಜನ್ಮದಾತರನ್ನು ಕಡೆಗಣಿಸುತ್ತಾ ತಮ್ಮ ಸ್ವಂತ ಸುಖ ಬಯಸುತ್ತಿರುವ ಮಕ್ಕಳು, ಇತ್ತ ಮಕ್ಕಳ ಪ್ರೀತಿ, ಆರೈಕೆಗಳಿಂದ ವಂಚಿತರಾಗಿ ಮಾನಸಿಕ, ದೈಹಿಕ ಕಾಯಿಲೆಗಳಿಂದ ನರಳುತ್ತಾ ದಿನ ದೂಡುತ್ತಿರುವ ಹೆತ್ತವರು. ನೋಡ ನೋಡುತ್ತಲೆ ಭಾರತೀಯ ಸಾಂಸಾರಿಕ ಚಿತ್ರಣದಲ್ಲಿ ಎಂತಹ ಬದಲಾವಣೆ! ಜೀವನದಲ್ಲಿ ವೃದ್ಧಾಪ್ಯವೆಂಬ ಹಂತ ಎಲ್ಲರಿಗೂ ಕಟ್ಟಿಟ್ಟ ಬುತ್ತಿ ಎಂಬುದನ್ನು ಮರೆಯುತ್ತಿರುವುದೇ ಹಿರಿಯರ ಕುರಿತಾದ ಈ ರೀತಿಯ ಧೋರಣೆಗೆ ಪ್ರಮುಖ ಕಾರಣ.

ಹೊಂದಾಣಿಕೆ

ವಿಭಕ್ತ ಕುಟುಂಬದಲ್ಲಿ ಅಪ್ಪ-ಅಮ್ಮನ ಬಿಡುವಿಲ್ಲದ ದಿನಚರಿಯಲ್ಲಿ ಮಕ್ಕಳ ಬೇಕು-ಬೇಡಗಳನ್ನು ಕೇಳುವವರಿಲ್ಲ. ಹಾಗಾಗಿ ಹಟಮಾರಿತನ, ಒಂಟಿತನ, ಸಿಟ್ಟು, ಖಿನ್ನತೆ... ಹೆಚ್ಚುತ್ತಿದೆ. ಅಜ್ಜ-ಅಜ್ಜಿ ಜೊತೆಯಿಲ್ಲದಾಗ ಪ್ರೀತಿ, ಮಮತೆ, ಕಾಳಜಿಯಿಂದ ವಂಚಿತರಾಗುವ ಮಕ್ಕಳು ದುಃಶ್ಚಟ, ದುರ್ಮಾರ್ಗ ತುಳಿಯುವ ಸಾಧ್ಯತೆ ಹೆಚ್ಚು. ತುಂಬು ಕುಟುಂಬದಲ್ಲಿ ಬೆಳೆದ ಮಕ್ಕಳಿಗೆ ಪ್ರೀತಿ, ಮಮತೆ, ಸಹನೆ, ಹೊಂದಾಣಿಕೆ, ಕರುಣೆ, ಅನುಕಂಪ, ಸಹಕಾರ ಮನೋಭಾವ, ಜವಾಬ್ದಾರಿ ನಿರ್ವಹಿಸುವಂತಹ ಗುಣಗಳು ಸಹಜವಾಗಿ ಬರುವವು. ಅಜ್ಜಿ, ತಾತ ಹೇಳುತ್ತಿದ್ದ ಕತೆಗಳಲ್ಲಿ ನೀತಿ ಪಾಠವಿರುತ್ತಿತ್ತು. ಹಾಗಾಗಿ ಹಿರಿಯರ ನಿಗಾದಲ್ಲಿ ಬೆಳೆದ ಮಕ್ಕಳು ಸಹಜವಾಗಿಯೇ ಒಳ್ಳೆಯ ವ್ಯಕ್ತಿತ್ವ ರೂಢಿಸಿಕೊಳ್ಳುತ್ತಿದ್ದರು. ತಲೆಮಾರುಗಳ ಅಂತರದಿಂದಾಗಿ ಭಿನ್ನಾಭಿಪ್ರಾಯಗಳು ಸಹಜವಾದರೂ ಹಿರಿಕಿರಿಯರಿಬ್ಬರೂ ಹೊಂದಿಕೊಂಡು ಒಟ್ಟಿಗಿರುವುದು ಚಿಕ್ಕಮಕ್ಕಳ ಭವಿಷ್ಯದ ದೃಷ್ಟಿಯಿಂದ ಒಳಿತು.

* ಸಾಮರಸ್ಯದ ಸಹಬಾಳ್ವೆಗೆ ಸರಳ ಸೂತ್ರಗಳು

* ಯಾವುದೇ ಕಾರಣಕ್ಕೂ ಹೆತ್ತವರ ಮನ ನೋಯಿಸದಂತಹ ನಡೆಯಿರಲಿ.

* ಬಿಸಿಯಾದ, ಮೃದುವಾದ, ಹೆಚ್ಚು ಖಾರ, ಹುಳಿ, ಉಪ್ಪಿಲ್ಲದ ಆಹಾರವನ್ನು ಪ್ರೀತಿಯಿಂದ ನೀಡಿ.

* ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ತೋರಿ, ಸಮಯಕ್ಕೆ ಸರಿಯಾಗಿ ಔಷಧಗಳನ್ನು ತೆಗೆದುಕೊಳ್ಳಲು ನೆನಪಿಸಿ.

* ಕಾಯಿಲೆಯಿಂದ ಬಳಲುವಾಗ ಪ್ರೀತಿಯಿಂದ ಆರೈಕೆ ಮಾಡಿ. ಹಿರಿಯರ ಮನಸ್ಸಿಗೆ ನಾನ್ಯಾಕೆ ಇದ್ದೀನಪ್ಪ ಎಂಬ ಭಾವನೆ ಬರದಂತೆ ನಿಗಾ ವಹಿಸಿ.

* ಮಕ್ಕಳು ದಿನದ ಸ್ವಲ್ಪ ಹೊತ್ತಾದರೂ ಅಜ್ಜ-ಅಜ್ಜಿ ಜೊತೆ ಕಾಲ ಕಳೆದರೆ ಇಬ್ಬರ ಆರೋಗ್ಯಕ್ಕೂ ಒಳ್ಳೆಯದು.

* ಹಿರಿಯರ ಮಾತುಗಳನ್ನು ಸಹನೆಯಿಂದ ಆಲಿಸಿ, ಸಮಸ್ಯೆಗಳಿದ್ದರೆ ತಾಳ್ಮೆಯಿಂದ ಕೇಳಿ ಸೂಕ್ತ ಪರಿಹಾರ ಸೂಚಿಸಿ.

* ಅನಿವಾರ್ಯ ಸಂದರ್ಭವನ್ನು ಹೊರತುಪಡಿಸಿ ಅನಾರೋಗ್ಯ ಪೀಡಿತರು, ವಯಸ್ಸಾದ ತಂದೆ-ತಾಯಿಯನ್ನು ಮಾತ್ರ ಮನೆಯಲ್ಲಿ ಬಿಟ್ಟು ಹೋಗದಿರಿ.

* ಸ್ನಾನಗೃಹ, ಶೌಚಾಲಯಗಳ ನೆಲ ಜಾರದಂತೆ ಸೂಕ್ತವಾದ ಮ್ಯಾಟ್ ಬಳಸಿ. ಸಾಂಪ್ರದಾಯಿಕ ಶೌಚಾಲಯಗಳಲ್ಲಿ ಕೈ ಊರಿ ಏಳಲು ಅನುಕೂಲವಾಗುವಂತೆ ಗೋಡೆಗೆ ಹಿಡಿಕೆ ಅಳವಡಿಸಿ. ವಯಸ್ಸಾದವರು ಜಾರಿ ಬಿದ್ದರೆ ಎಲುಬು ಸವೆದಿರುವುದರಿಂದ ಮುರಿಯುವ ಸಂಭವ ತುಂಬಾ ಜಾಸ್ತಿ.

* ಮನೆಯ ಸಮಸ್ಯೆಗಳನ್ನು ಹಿರಿಯರೊಂದಿಗೆ ಚರ್ಚಿಸುವುದರಿಂದ ಅವರ ಅನುಭವದ ಆಧಾರದಲ್ಲಿ ಸೂಕ್ತ ಪರಿಹಾರ ದೊರಕುವುದು.

* ಮಕ್ಕಳ ಮುಂದೆ ಹಿರಿಯರನ್ನು ಕಡೆಗಣಿಸಿ ಮಾತನಾಡಬಾರದು. ಇದು ಸಹಜವೆಂಬಂತೆ ಮುಂದೆ ಮಕ್ಕಳು ನಿಮ್ಮನ್ನೂ ಕಡೆಗಣಿಸಿಯಾರು.

* ವಯಸ್ಸಾದಂತೆ ಕೆಲವರಲ್ಲಿ ಮರೆವು ಹೆಚ್ಚಾಗುವುದು. ಇದರಿಂದಾಗಿ ಪದೇಪದೇ ಹೇಳಿದ್ದನ್ನೇ ಹೇಳುವುದು, ಕೇಳಿದ್ದನ್ನೇ ಕೇಳುವುದು ಮಾಡುವರು. ಆಗ ರೇಗದೆ ಸಮಾಧಾನದಿಂದ ಆಲಿಸಿ.

* ವೃದ್ಧರು ಸಣ್ಣ ಮಕ್ಕಳಂತೆ. ಚಿಕ್ಕ ಮಗುವಿನಂತೆ ಹಟ, ಕಿರಿಕಿರಿ ಮಾಡಿದಾಗ ಅವರ ಮನಃಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹನೆಯಿಂದ ವರ್ತಿಸಿ.

* ಮಕ್ಕಳು ಹೆತ್ತವರ ಜವಾಬ್ದಾರಿ ಹಂಚಿಕೊಂಡು ತಂದೆಯನ್ನೊಬ್ಬರು, ತಾಯಿಯನ್ನೊಬ್ಬರು ನೋಡಿಕೊಳ್ಳುವ ವ್ಯವಸ್ಥೆ ಒಳ್ಳೆಯದಲ್ಲ. ವಯಸ್ಸಾದ ದಂಪತಿಯನ್ನು ಬೇರೆ ಮಾಡಬಾರದು. ಇಳಿವಯಸ್ಸಿನಲ್ಲಿ ಸಂಗಾತಿಯ ಸಾಂಗತ್ಯ ತುಂಬಾ ಅವಶ್ಯಕ.

* ಹೆತ್ತವರು ವರ್ಷದಲ್ಲಿ ಇಂತಿಷ್ಟು ತಿಂಗಳು ಒಬ್ಬೊಬ್ಬರ ಮನೆಯಲ್ಲಿರಲಿ ಎಂಬ ಕರಾರು ಕೂಡದು. ಬೇರೆ ಬೇರೆ ಸ್ಥಳದಲ್ಲಿ ಹೊಂದಿಕೊಳ್ಳಲು ವೃದ್ಧರಿಗೆ ಕಷ್ಟವಾಗುವುದು, ಜೊತೆಗೆ ಹವಾಮಾನವೂ ಒಗ್ಗದಿರಬಹುದು. ಇಷ್ಟ ಬಂದಲ್ಲಿ ಇದ್ದು ಎಲ್ಲರ ಮನೆಗೂ ಬಂದು ಹೋಗುವ ಸ್ವಾತಂತ್ರ್ಯವಿರಲಿ.

* ಹಿರಿಯರಿಗೂ ಹಣದ ಅಗತ್ಯವಿರುತ್ತದೆ. ದುಡಿಮೆಯ ಶಕ್ತಿ ಕಳೆದುಕೊಂಡಿರುವುದರಿಂದ ದುಡ್ಡಿನ ಜೊತೆಗೆ ಅವರ ಅಗತ್ಯಗಳನ್ನು ಪೂರೈಸುವುದು ಮಕ್ಕಳ ಕರ್ತವ್ಯ.

ತಂದೆ-ತಾಯಿಯ ಆರೈಕೆ ಮಾಡುವುದು ಮಕ್ಕಳ ಕಡ್ಡಾಯ ಕರ್ತವ್ಯ ಎಂದು ಕಾಯ್ದೆಯೇ ಹೇಳುತ್ತದೆ. ತಪ್ಪಿದಲ್ಲಿ ಶಿಕ್ಷೆಯೂ ಉಂಟು. ಬಿಹಾರ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೆ ಕಡೆಗಣಿಸುವ ಮಕ್ಕಳಿಗೆ ಗರಿಷ್ಠ ಜೈಲು ಶಿಕ್ಷೆಯ ಜೊತೆಗೆ ದಂಡವನ್ನೂ ವಿಧಿಸುವ ವಿಧೇಯಕವನ್ನು ಜಾರಿಗೆ ತರುತ್ತಿದೆ.

(ಲೇಖಕಿ ಆಪ್ತಸಮಾಲೋಚಕಿ)

Post Comments (+)