ಬುಧವಾರ, ಸೆಪ್ಟೆಂಬರ್ 23, 2020
22 °C
ಫೇಸ್‌ಬುಕ್ ಹಗರಣದ ಹೊಸ ಮಜಲು: ಝಕರ್‌ಬರ್ಗ್‌ ಮುಚ್ಚಿಟ್ಟಿದ್ದು ಏನು?

ಮಾಹಿತಿಯ ಬಲದಲ್ಲಿ ಜನತಂತ್ರದ ಕೇಡು

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ವೈಯಕ್ತಿಕ ಮಾಹಿತಿ ದುರ್ಬಳಕೆ ಕಾರಣಕ್ಕಾಗಿ ಫೇಸ್‌ಬುಕ್ ಮತ್ತೆ ಸುದ್ದಿಯಲ್ಲಿದೆ. ಹಾಗೆ ನೋಡಿದರೆ ಫೇಸ್‌ಬುಕ್ ಹುಟ್ಟಿದ್ದೇ ವೈಯಕ್ತಿಕ ಮಾಹಿತಿಯ ಅನಧಿಕೃತ ಬಳಕೆಯನ್ನು ತನ್ನ ಒಡಲಲ್ಲಿ ಇಟ್ಟುಕೊಂಡು. 2003ರ ನವೆಂಬರ್‌ನಲ್ಲಿ ಮಾರ್ಕ್ ಝಕರ್‌ಬರ್ಗ್ ಮೊದಲ ಬಾರಿ
ಸುದ್ದಿಯಾಗುವಂತೆ ತಮ್ಮ ಸಹಪಾಠಿಗಳ ಕ್ಷಮೆ ಕೋರಿದ್ದೂ ಇದೇ ಕಾರಣಕ್ಕೆ. ಅಲ್ಲಿಂದೀಚೆಗೆ ಝಕರ್‌ಬರ್ಗ್ ಬಹುತೇಕ ಇದೇ ಕಾರಣಕ್ಕೆ ಹನ್ನೊಂದು ಬಾರಿ ಕ್ಷಮೆ ಕೇಳಿದ್ದಾರೆ.

2003ರಲ್ಲಿ ಮೊದಲ ಬಾರಿ ಕ್ಷಮೆ ಕೇಳಿದಾಗ ಫೇಸ್‌ಬುಕ್ ಹುಟ್ಟಿರಲಿಲ್ಲ. ಆದರೆ ಅದರ ಮೂಲ ಪರಿಕಲ್ಪನೆ ಜನ್ಮತಾಳಿತ್ತು. ಹಾರ್ವರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದ ಝಕರ್‌ಬರ್ಗ್ ಕ್ಯಾಂಪಸ್‌ನ ವಿವಿಧ ಮೂಲಗಳಲ್ಲಿ ಲಭ್ಯವಿದ್ದ ವಿದ್ಯಾರ್ಥಿಗಳ ಛಾಯಾಚಿತ್ರ
ಗಳನ್ನು ಡೌನ್‌ಲೋಡ್ ಮಾಡಿ ತಮ್ಮ ‘ಫೇಸ್‌ಮ್ಯಾಷ್’ ಎಂಬ ಜಾಲತಾಣ ರೂಪಿಸಿದ್ದರು. ಈ ಫೋಟೊಗಳನ್ನು ನೋಡಿ ಅವರು ಸುಂದರರೇ ಅಲ್ಲವೇ ಎಂಬುದನ್ನು ಬಳಕೆದಾರರು ವೋಟ್ ಮಾಡಬಹುದಿತ್ತು.

ಇದು ಅರ್ಧಗಂಟೆಯಲ್ಲೇ ಕ್ಯಾಂಪಸ್‌ ತುಂಬ ಏಕಕಾಲದಲ್ಲಿ ಸುಪ್ರಸಿದ್ಧವೂ ಕುಪ್ರಸಿದ್ಧವೂ ಆಗಿಬಿಟ್ಟಿತು. ಝಕರ್‌ಬರ್ಗ್ ಜಾಲತಾಣವನ್ನು ಸ್ಥಗಿತಗೊಳಿಸಬೇಕಾಯಿತು. ಕೃತಿಸ್ವಾಮ್ಯದ ಉಲ್ಲಂಘನೆಯಿಂದ ಆರಂಭಿಸಿ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯ ದುರ್ಬಳಕೆಯ ತನಕದ ಅನೇಕ ಆರೋಪಗಳನ್ನು ಅವರು ಎದುರಿಸಬೇಕಾಯಿತು. ಇದರಿಂದ ಸಹಪಾಠಿಗಳಿಗೆ ಆದ ನೋವಿಗೆ ಝಕರ್‌ಬರ್ಗ್ ಕ್ಷಮೆ ಕೇಳಿದರು. ಹಾರ್ವರ್ಡ್ ಆಡಳಿತ ಎಚ್ಚರಿಕೆ ನೀಡಿ ಕ್ಷಮಿಸಿತು.

ಇದೆಲ್ಲಾ ನಡೆದು ಹದಿನೈದು ವರ್ಷಗಳಾಯಿತು. ಈಗ ಫೇಸ್‌ಬುಕ್ ಜಗತ್ತಿನ ಅತಿದೊಡ್ಡ ದೇಶಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಜಾಲತಾಣ. 139 ಕೋಟಿ ಸಕ್ರಿಯ ಬಳಕೆದಾರರಿರುವ (ಮಾಸಿಕ ಸರಾಸರಿ) ಈ ಜಾಲತಾಣ ವೈಯಕ್ತಿಕ ಮಾಹಿತಿಯ ದುರ್ಬಳಕೆಗೆ ಇಳಿದರೆ ಏನಾಗಬಹುದೆಂದು ಯೋಚಿಸಿದರೇ ಭಯವಾಗುತ್ತದೆ ಅಲ್ಲವೇ? ದುರದೃಷ್ಟವಶಾತ್ ಫೇಸ್‌ಬುಕ್ ತನ್ನ ಅಸ್ತಿತ್ವದ ಉದ್ದಕ್ಕೂ ಇದನ್ನೇ ಮಾಡುತ್ತಾ ಬಂದಿದೆ.

ಫೇಸ್‌ಬುಕ್‌ನ ಧ್ಯೇಯವಾಕ್ಯ ‘Bringing world closer together’. ಪ್ರಪಂಚವನ್ನು ಒಂದಾಗಿಸುವುದೆಂಬ ಧ್ವನಿಯಿರುವ ಈ ಧ್ಯೇಯಕ್ಕೆ ವಿರುದ್ಧವಾದ ಅನೇಕ ವಿಚಾರಗಳಿಗೆ ಫೇಸ್‌ಬುಕ್ ಕಾರಣವಾಗಿದೆ ಎಂಬುದು ವಾಸ್ತವ. 2010ರ ‘ಅರಬ್ ವಸಂತ’ದ ದಿನಗಳನ್ನಿಟ್ಟುಕೊಂಡು ಫೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳು ಜನಾಂದೋಲನಕ್ಕೆ ಕಾರಣವಾಗಿವೆ ಎಂಬ ವಾದ
ವೊಂದಿದೆ. ಸೂಕ್ಷ್ಮವಾಗಿ ನೋಡಿದರೆ ಇಂಥದ್ದು ಅಪವಾದ ಮಾತ್ರ ಎಂಬುದು ಅರಿವಾಗುತ್ತದೆ. ಸಾಮಾಜಿಕ ಜಾಲತಾಣಗಳ ಈ ಶಕ್ತಿಯನ್ನು ಮೊದಲು ಅರ್ಥ ಮಾಡಿಕೊಂಡವರೇ ಭಾವನೆಗಳನ್ನು ಕೆರಳಿಸುವ, ಪ್ರಜಾಪ್ರಭುತ್ವಗಳನ್ನು ದುರ್ಬಲಗೊಳಿಸುವ, ಜನಾಂಗೀಯ ಕಲಹಗಳನ್ನು ಹುಟ್ಟುಹಾಕುವ ಶಕ್ತಿಗಳು. ‘ಸುಳ್ಳು ಸುದ್ದಿ’ ಮತ್ತು ‘ಪರ್ಯಾಯ ಸತ್ಯ’ ಎಂಬ ಪದಪುಂಜಗಳು ಹುಟ್ಟಿಕೊಳ್ಳುವುದಕ್ಕೆ ಸಾಮಾಜಿಕ ಜಾಲತಾಣಗಳು ಅದರಲ್ಲೂ ವಿಶೇಷವಾಗಿ ಫೇಸ್‌ಬುಕ್ ಇದೆ ಎಂಬುದನ್ನು ಪರಿಗಣಿಸದೇ ಇರಲು ಸಾಧ್ಯವಿಲ್ಲ.

ಫೇಸ್‌ಬುಕ್‌ ಒದಗಿಸುವ ಮಾಹಿತಿಗಳನ್ನಿಟ್ಟುಕೊಂಡು ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ತಮಗೆ ಬೇಕಾದಂತೆ ಕೆಲವು ಶಕ್ತಿಗಳು ನಿಯಂತ್ರಿಸಿದವು. ಇದನ್ನು ಈಗ ತನಿಖಾ ಸಂಸ್ಥೆಗಳಷ್ಟೇ ಅಲ್ಲದೇ ಫೇಸ್‌ಬುಕ್ ಕೂಡಾ ಒಪ್ಪಿಕೊಂಡಿದೆ. ಇಡೀ ಜನಮತಗಣನೆಯ ಪ್ರಕ್ರಿಯೆಯನ್ನು ಸೈಬರ್ ಲೋಕ ವಶಪಡಿಸಿಕೊಂಡ ಈ ಹಗರಣ ನಿಜಕ್ಕೂ ಪ್ರಜಾಪ್ರಭುತ್ವ ಅಸ್ತಿವಾರವನ್ನೇ ಅಲುಗಾಡಿಸುವಷ್ಟು ಶಕ್ತಿಯುತವಾದದ್ದು ಎಂಬುದನ್ನು ಅರಿತೂ ಫೇಸ್‌ಬುಕ್ ಅದನ್ನು ಮುಚ್ಚಿಡಲು ನಡೆಸಿದ ಸರ್ಕಸ್ ಈಗ ನಿಧಾನವಾಗಿ ಹೊರಕ್ಕೆ ಬರುತ್ತಿದೆ. ಕಳೆದ ವಾರ ‘ನ್ಯೂಯಾರ್ಕ್ ಟೈಮ್ಸ್‌’ನ ವರದಿಗಾರರ ತಂಡ ಫೇಸ್‌ಬುಕ್‌ನ ಉನ್ನತ ನಾಯಕತ್ವ ಹಗರಣವನ್ನು ಮುಚ್ಚಿಹಾಕಲು ಹೇಗೆಲ್ಲಾ ಪ್ರಯತ್ನ ನಡೆಸಿತ್ತು ಎಂಬುದನ್ನು ಬಯಲಿಗೆಳೆಯುವುದರ ಮೂಲಕ ವಿವಾದ ಹೊಸ ತಿರುವು ಪಡೆದುಕೊಂಡಿದೆ.

ಕೇಂಬ್ರಿಜ್ ಅನಲಿಟಿಕಾ ಎಂಬ ಸಂಸ್ಥೆ 8.7 ಕೋಟಿ ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು ಅವರ ರಾಜಕೀಯ ಆಯ್ಕೆಯ ಮೇಲೆ ಪ್ರಭಾವ ಬೀರುವ ಕೆಲಸ ಮಾಡಿತ್ತು. ಕೇಂಬ್ರಿಜ್ ಅನಲಿಟಿಕಾ ಸಂಗ್ರಹಿಸಿದ ಮಾಹಿತಿಯನ್ನು ರಷ್ಯಾ ಕೂಡಾ ಬಳಕೆ ಮಾಡಿಕೊಂಡಿತ್ತು ಎಂಬುದು ತನಿಖೆಯಲ್ಲಿ ಬಯಲಾಗಿದೆ. ಈ ಎಲ್ಲಾ ವಿಚಾರಗಳೂ ಫೇಸ್‌ಬುಕ್‌ನ ಎಂಜಿನಿಯರುಗಳಿಗೆ 2016ರಲ್ಲೇ ತಿಳಿದಿತ್ತು. ಆದರೆ ಈ ವಿಷಯದಲ್ಲಿ ಉನ್ನತ ನಾಯಕತ್ವ ಒಂದು ಬಗೆಯ ನಿಧಾನ ಧೋರಣೆಯನ್ನು ತಳೆಯಿತು. ಇದಕ್ಕೆ ಕಾರಣವಿಲ್ಲದಿಲ್ಲ. ಸಂಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿಬಿಡುತ್ತದೆ ಎಂಬ ಆತಂಕ ಉನ್ನತ ನಾಯಕತ್ವಕ್ಕೆ ಇದ್ದಿರಬಹುದು. ಆದರೆ ಈ ಪ್ರಕರಣ ಬೆಳಕಿಗೆ ಬಂದ ನಂತರ ಫೇಸ್‌ಬುಕ್ ನಡೆದುಕೊಂಡ ಬಗೆ ಅದರ ವಿಶ್ವಾಸಾರ್ಹತೆಯನ್ನು ಮತ್ತಷ್ಟು ಪ್ರಶ್ನಾರ್ಹಗೊಳಿಸುತ್ತಿದೆ.

ಸಂಸ್ಥೆಯ ಅಧ್ಯಕ್ಷ ಮತ್ತು ಸಿಇಓ ಆಗಿರುವ ಮಾರ್ಕ್ ‌ಝಕರ್‌ಬರ್ಗ್ ಮತ್ತು ಚೀಫ್ ಆಪರೇಟಿಂಗ್ ಆಫೀಸರ್ ಶೆರಿಲ್ ಸ್ಯಾಂಡ್‌ಬರ್ಗ್ ಇಬ್ಬರೂ ಯಹೂದ್ಯರು. ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಸಂಸ್ಥೆ ನಿರ್ವಹಿಸಿದ ಬಗೆಗೆ ಬಂದ ಟೀಕೆಗಳು ಮತ್ತು ನಾಯಕತ್ವ ಎದುರಿಸಬೇಕಾದ ಪ್ರಶ್ನೆಗಳನ್ನೆಲ್ಲಾ ‘ಸೆಮಿಟಿಕ್ ವಿರೋಧಿ ಧೋರಣೆ’ಗಳನ್ನಾಗಿ ಬದಲಾಯಿಸುವ ಸಂಚೊಂದನ್ನು ರೂಪಿಸಿದ್ದೂ ಈಗ ಬಯಲಿಗೆ ಬಂದಿದೆ. ಇದಕ್ಕಾಗಿ ‘ಸಾರ್ವಜನಿಕ ಸಂಪರ್ಕ ಸಂಸ್ಥೆ’ಯೊಂದನ್ನು ನೇಮಿಸಿಕೊಂಡಿದ್ದನ್ನು ಝಕರ್‌ಬರ್ಗ್ ಅಲ್ಲಗಳೆಯುತ್ತಿದ್ದಾರಾದರೂ ಈ ತನಕದ ಮಾಧ್ಯಮ ತನಿಖೆಗಳು ಬಿಚ್ಚಿಡುತ್ತಿರುವ ಚಿತ್ರಣ ಇದಕ್ಕೆ ವಿರುದ್ಧವಾಗಿದೆ.

ಈ ಹಗರಣ ಮತ್ತು ಅದನ್ನು ಮುಚ್ಚಿಡಲು ಫೇಸ್‌ಬುಕ್ ನಡೆಸಿದ ಎಲ್ಲಾ ಪ್ರಯತ್ನಗಳೂ ನಮ್ಮ ಮುಂದೆ ಬಿಚ್ಚಿಡುತ್ತಿರುವ ಸತ್ಯವೊಂದಿದೆ. ತಂತ್ರಜ್ಞಾನವು ಸಂಪರ್ಕವನ್ನು ಸುಲಭಗೊಳಿಸಬಹುದು. ಆದರೆ ಪ್ರಜಾಪ್ರಭುತ್ವವನ್ನು ಹೆಚ್ಚು ಬಲಗೊಳಿಸುತ್ತದೆಯೇ ಎಂಬ ಪ್ರಶ್ನೆಯದು. ಯಾವ ತಂತ್ರಜ್ಞಾನವೂ ರಾಜಕೀಯಕ್ಕೆ ಹೊರತಾದುದಲ್ಲ ಎಂಬುದನ್ನು ಯಂತ್ರ ನಾಗರಿಕತೆಯೇ ಕಲಿಸಿಕೊಟ್ಟಿರುವ ಸತ್ಯ.

‘ಅಸಾಮಾನ್ಯವಾದ ಶಕ್ತಿಯೊಂದಿಗೆ ಅಸಾಧಾರಣವಾದ ಹೊಣೆಗಾರಿಕೆಯೂ ಇರುತ್ತದೆ’ ಎಂಬುದು ಸಿಲಿಕಾನ್ ವ್ಯಾಲಿಯ ಉದ್ಯಮಿಗಳಿಗೆ ಅಷ್ಟೇನೂ ಮುಖ್ಯವಲ್ಲ. ಹಾರ್ವರ್ಡ್ ಕ್ಯಾಂಪಸ್‌ನಲ್ಲಿ 2003ರಲ್ಲಿ ಸ್ವತಃ ಝಕರ್‌ಬರ್ಗ್ ಹೊಣೆಗಾರಿಕೆ ಮರೆತಿದ್ದರು. ಮುಂದಿನ ಹದಿನೈದು ವರ್ಷಗಳಲ್ಲಿ ತಮ್ಮ ಸಂಸ್ಥೆಯ ಆ ಬಗೆಯ ತಪ್ಪುಗಳಿಗೆ ಅವರು ಕುರುಡಾಗಿದ್ದರು. ಪ್ರಜಾಪ್ರಭುತ್ವಗಳನ್ನೇ ಬುಡಮೇಲು ಮಾಡುವ ಕೆಲಸ ನಡೆಯುವಾಗ ಕುರುಡಾಗಿದ್ದು ಮತ್ತೆ ಕ್ಷಮೆ ಕೇಳುವುದು ಅವರ ಮಟ್ಟಿಗೊಂದು ವ್ಯಾಪಾರ ತಂತ್ರ.

ಫೇಸ್‌ಬುಕ್‌ನ ಧ್ಯೇಯವಾಕ್ಯದ ಪ್ರಕಾರ ಅದು ಪ್ರಪಂಚವನ್ನೇ ಹತ್ತಿರ ತರುತ್ತಿದೆ. ಗೂಗಲ್‌ನ ಧ್ಯೇಯವಾಕ್ಯವನ್ನೇ ನಂಬುವುದಾದರೆ ಇಡೀ ಜಗತ್ತಿನ ಮಾಹಿತಿಯನ್ನು ಓರಣಗೊಳಿಸುತ್ತಿದೆ. ಫೇಸ್‌ಬುಕ್ ಮತ್ತು ಗೂಗಲ್ ಬಳಕೆದಾರರಿಗೆ ಅವುಗಳ ಧ್ಯೇಯವಾಕ್ಯ ನಿಜ ಅನ್ನಿಸುತ್ತದೆ. ಹೀಗೆ ಚಿಕ್ಕದಾಗುವ ಪ್ರಪಂಚ ಮತ್ತು ಓರಣಗೊಳ್ಳುತ್ತಿರುವ ವಿಶ್ವದ ಮಾಹಿತಿಗಾಗಿ ರೋಮಾಂಚಿತರಾಗುವಾಗ ನಾವು ಮರೆಯುವ ಮತ್ತೊಂದು ಅಂಶವಿದೆ. ಗೂಗಲ್ ತನ್ನ ವಾಣಿಜ್ಯ ನೀತಿಯಾಗಿ ಹೇಳಿಕೊಳ್ಳುವ ಮಾತು: ‘Don’t be evil’. ಕೆಡುಕಾಗಬೇಡ ಎಂದು ತನಗೆ ತಾನೇ ಹೇಳಿಕೊಳ್ಳುವುದರ ಅರ್ಥ ಯಾವತ್ತು ಬೇಕಾದರೂ ತಾನು ಪ್ರಪಂಚಕ್ಕೊಂದು ಕೇಡಾಗಬಹುದು ಎಂದು ತಾನೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು