ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣ: ಯುವ ಬಳಕೆದಾರರಿಂದ ₹91 ಸಾವಿರ ಕೋಟಿ ವರಮಾನ

ಸಾಮಾಜಿಕ ಜಾಲತಾಣ ಕಂಪನಿಗಳ ಜಾಹೀರಾತು ವರಮಾನ ಕುರಿತ ಅಧ್ಯಯನ
Published 31 ಡಿಸೆಂಬರ್ 2023, 16:01 IST
Last Updated 31 ಡಿಸೆಂಬರ್ 2023, 16:01 IST
ಅಕ್ಷರ ಗಾತ್ರ

ನವದೆಹಲಿ: ಇನ್‌ಸ್ಟಾಗ್ರಾಂ, ಎಕ್ಸ್‌ ಮತ್ತು ಸ್ನ್ಯಾಪ್‌ಚಾಟ್‌ನಂತಹ ಸಾಮಾಜಿಕ ಜಾಲತಾಣ ಕಂಪನಿಗಳು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ಕಾರಣದಿಂದಾಗಿ ಸಿಗುವ ಜಾಹೀರಾತು ವರಮಾನದ ಮೂಲಕ 2022ರಲ್ಲಿ ಒಟ್ಟು 11 ಬಿಲಿಯನ್ ಡಾಲರ್ (₹91 ಸಾವಿರ ಕೋಟಿ) ಗಳಿಸಿವೆ ಎಂದು ಅಮೆರಿಕದಲ್ಲಿ ನಡೆದಿರುವ ಅಧ್ಯಯನವೊಂದು ಹೇಳಿದೆ.

ಸ್ನ್ಯಾಪ್‌ಚಾಟ್, ಟಿಕ್‌ಟಾಕ್ ಮತ್ತು ಯೂಟ್ಯೂಬ್‌ ಗಳಿಸಿದ ಸರಿಸುಮಾರು ಶೇಕಡ 30ರಿಂದ ಶೇ 40ರಷ್ಟು ಜಾಹೀರಾತು ವರಮಾನವು ಯುವ ಬಳಕೆದಾರರ ಕಾರಣದಿಂದಾಗಿ ಬಂದಿರುವಂಥದ್ದು ಎಂದು ಅಧ್ಯಯನವು ಹೇಳಿದೆ. 12 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರ ಕಾರಣದಿಂದ ಜಾಹೀರಾತು ವರಮಾನ ಗಳಿಸುವಲ್ಲಿ ಯೂಟ್ಯೂಬ್‌ ಮುಂದಿದೆ. ಕಂಪನಿಯು ಈ ವಯೋಮಾನದ ಬಳಕೆದಾರರಿಂದ 1 ಬಿಲಿಯನ್ ಡಾಲರ್ (₹8,324 ಕೋಟಿ) ವರಮಾನ ಗಳಿಸಿದೆ.

13ರಿಂದ 17 ವರ್ಷ ವಯಸ್ಸಿನ ನಡುವಿನ ಬಳಕೆದಾರರ ಕಾರಣದಿಂದ ಜಾಹೀರಾತು ವರಮಾನ ಗಳಿಸುವಲ್ಲಿ ಇನ್‌ಸ್ಟಾಗ್ರಾಂ ಕಂಪನಿ ಮುಂದಿದೆ. ಇದು ಈ ವಯೋಮಾನದವರಿಂದ 4 ಬಿಲಿಯನ್ ಡಾಲರ್ (₹33 ಸಾವಿರ ಕೋಟಿ) ವರಮಾನ ಗಳಿಸಿದೆ.

ಹಾರ್ವರ್ಡ್‌ ವಿಶ್ವವಿದ್ಯಾಲಯದ ‘ಹಾರ್ವರ್ಡ್‌ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್‌ ಹೆಲ್ತ್‌’ ಈ ಅಧ್ಯಯನ ನಡೆಸಿದೆ. ಎಳೆ ವಯಸ್ಸಿನ ಬಳಕೆದಾರರ ಮೇಲೆ ಆಗುವ ಕೆಟ್ಟ ಪರಿಣಾಮಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸ್ವಯಂ ನಿಯಂತ್ರಣ ತಮ್ಮಿಂದ ಸಾಧ್ಯ ಎಂದು ಸಾಮಾಜಿಕ ಜಾಲತಾಣ ಕಂಪನಿಗಳು ಹೇಳಿಕೊಳ್ಳುತ್ತವೆಯಾದರೂ, ಆ ಕೆಲಸವನ್ನು ಅವು ಇನ್ನೂ ಮಾಡಿಲ್ಲ ಎಂದು ಅಧ್ಯಯನ ನಡೆಸಿದವರು ಹೇಳಿದ್ದಾರೆ.

‘ಸಾಮಾಜಿಕ ಜಾಲತಾಣ ಕಂಪನಿಗಳು ಯುವ ಬಳಕೆದಾರರ ಕಾರಣದಿಂದಾಗಿ ದೊಡ್ಡ ಪ್ರಮಾಣದಲ್ಲಿ ಜಾಹೀರಾತು ವರಮಾನ ಪಡೆಯುತ್ತಿವೆ. ಇದು, ದತ್ತಾಂಶ ನಿರ್ವಹಣೆಯಲ್ಲಿ ಇನ್ನಷ್ಟು ಹೆಚ್ಚಿನ ಪಾರದರ್ಶಕತೆಯ ಅಗತ್ಯ ಇದೆ ಎಂಬುದನ್ನು ಹೇಳುತ್ತಿದೆ’ ಎಂದು ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

2021 ಮತ್ತು 2022ರ ಮಾರುಕಟ್ಟೆ ಸಂಶೋಧನಾ ದತ್ತಾಂಶವನ್ನು ಬಳಸಿ, ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್‌, ಟಿಕ್‌ಟಾಕ್, ಎಕ್ಸ್ ಮತ್ತು ಯೂಟ್ಯೂಬ್‌ ಬಳಕೆ ಮಾಡುವ ಎಳೆಯರ ಸಂಖ್ಯೆ ಎಷ್ಟು ಎಂಬುದನ್ನು ಅಂದಾಜು ಮಾಡಲಾಗಿದೆ. ಇದೇ ದತ್ತಾಂಶವನ್ನು ಬಳಸಿ, ಈ ಜಾಲತಾಣ ಕಂಪನಿಗಳ ಜಾಹೀರಾತು ವರಮಾನವನ್ನು ಅಂದಾಜು ಮಾಡಲಾಗಿದೆ.

ಸಾಮಾಜಿಕ ಜಾಲತಾಣ ಕಂಪನಿಗಳು 2022ರಲ್ಲಿ ಗಳಿಸಿದ ಜಾಹೀರಾತು ವರಮಾನದಲ್ಲಿ, 12 ವರ್ಷ ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನವರ ಕಾರಣದಿಂದಾಗಿ ಗಳಿಸಿರುವ ವರಮಾನದ ಮೊತ್ತ 2.1 ಬಿಲಿಯನ್ ಅಮೆರಿಕನ್ ಡಾಲರ್ (₹17 ಸಾವಿರ ಕೋಟಿ). 

ಸಾಮಾಜಿಕ ಜಾಲತಾಣ ಕಂಪನಿಗಳು ತಮ್ಮ ಬಳಕೆದಾರರ ಪೈಕಿ ಯಾವ ವಯಸ್ಸಿನವರ ಪ್ರಮಾಣ ಎಷ್ಟಿದೆ ಎಂಬುದನ್ನು ಬಹಿರಂಗಪಡಿಸುವುದಿಲ್ಲ. ಹಾಗೆಯೇ, ಯಾವ ವಯಸ್ಸಿನವರ ಕಾರಣದಿಂದಾಗಿ ಎಷ್ಟು ಜಾಹೀರಾತು ವರಮಾನ ಬಂದಿದೆ ಎಂಬುದನ್ನೂ ಕಂಪನಿಗಳು ತಿಳಿಸುವುದಿಲ್ಲ. ಈ ಕಾರಣದಿಂದಾಗಿ, ಮಾರುಕಟ್ಟೆ ಸಂಶೋಧನಾ ಮೂಲಗಳನ್ನು ನೆಚ್ಚಿಕೊಂಡು ಅಧ್ಯಯನ ವರದಿ ಸಿದ್ಧಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT