ಸಂಸದರಾಗಿದ್ದಾಗಲೇ ಸತ್ತವರು ಮೂವರು..!

ಶನಿವಾರ, ಏಪ್ರಿಲ್ 20, 2019
29 °C
ವಿಜಯಪುರ ಲೋಕಸಭಾ ಕ್ಷೇತ್ರ: 1968ರಲ್ಲಿ ಮಾತ್ರ ಉಪ ಚುನಾವಣೆ

ಸಂಸದರಾಗಿದ್ದಾಗಲೇ ಸತ್ತವರು ಮೂವರು..!

Published:
Updated:

ವಿಜಯಪುರ: ಲೋಕಸಭೆಗೆ ಹದಿನೇಳನೇ ಸಾರ್ವತ್ರಿಕ ಚುನಾವಣೆ ಇದೀಗ ನಡೆದಿದೆ. ಈ ಅವಧಿಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಒಮ್ಮೆ ಮಾತ್ರ ಉಪ ಚುನಾವಣೆ ನಡೆದಿರುವುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

ಸ್ವತಂತ್ರ ಪಕ್ಷದ ಶಾಸಕರಾಗಿ ಇಂಡಿ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸಿದ್ದ ಚಾಂದಕವಠೆಯ ಜಿ.ಡಿ.ಪಾಟೀಲ 1967ರಲ್ಲಿ ಲೋಕಸಭೆಗೆ ಸ್ಪರ್ಧಿಸಿದರು. ಈ ಚುನಾವಣೆಯಲ್ಲಿ ಹಾಲಿ ಸಂಸದ, ಕಾಂಗ್ರೆಸ್‌ನ ಪ್ರಭಾವಿ, ನೆಹರೂ ಆಪ್ತ ರಾಜಾರಾಮ್‌ ದುಬೆ ಅವರಿಗೆ ಸೋಲಿನ ರುಚಿ ತೋರಿಸಿ ಸಂಸತ್ ಪ್ರವೇಶಿಸಿದ್ದು ಇತಿಹಾಸ.

ಸಂಸದರಾಗಿ ಆಯ್ಕೆಯಾದ ಜಿ.ಡಿ.ಪಾಟೀಲ ಮರು ವರ್ಷವೇ ಅಕಾಲ ಮರಣಕ್ಕೆ ತುತ್ತಾದರು. ಸಾರ್ವತ್ರಿಕ ಚುನಾವಣೆಗೆ ಇನ್ನೂ ಹಲ ವರ್ಷ ಸಮಯವಿದ್ದುದರಿಂದ, ಉಪ ಚುನಾವಣೆ ಘೋಷಣೆಯಾಯ್ತು. 1968ರಲ್ಲಿ ನಡೆದ ಈ ಉಪ ಚುನಾವಣೆಗೆ ಕಾಂಗ್ರೆಸ್‌ನಿಂದ ಯುವ ನಾಯಕನಾಗಿ ಬಿ.ಕೆ.ಗುಡದಿನ್ನಿ ಅಖಾಡಕ್ಕಿಳಿದು, ಎದುರಾಳಿಗಳನ್ನು ಮಣಿಸಿ, ಲೋಕಸಭೆ ಪ್ರವೇಶಿಸಿದ್ದು ವಿಜಯಪುರದ ಚುನಾವಣಾ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

1971ರಲ್ಲಿ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ಘೋಷಣೆಯಾಯ್ತು. ಇದಕ್ಕೂ ಮುನ್ನವೇ ಕಾಂಗ್ರೆಸ್‌ ಇಬ್ಭಾಗಗೊಂಡಿತ್ತು. ಇಂದಿರಾ ನೇತೃತ್ವದ ಕಾಂಗ್ರೆಸ್‌ನಲ್ಲಿ ಚೌದ್ರಿ ಕುಟುಂಬ ಗುರುತಿಸಿಕೊಂಡರೆ, ಎಸ್.ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್‌ನಲ್ಲಿ ಹಾಲಿ ಸಂಸದ ಬಿ.ಕೆ.ಗುಡದಿನ್ನಿ ಗುರುತಿಸಿಕೊಂಡು, ಚುನಾವಣೆಗೆ ಸ್ಪರ್ಧಿಸಿ ಭೀಮಪ್ಪ ಎಲ್ಲಪ್ಪ ಚೌದ್ರಿ ವಿರುದ್ಧ ಸೋತರು.

1977ರಲ್ಲಿ ಭೀಮಪ್ಪ ಎಲ್ಲಪ್ಪ ಚೌದ್ರಿ ಸ್ಪರ್ಧಿಸಲಿಲ್ಲ. ಇದೇ ಕುಟುಂಬದ ಕಾಳಿಂಗಪ್ಪ ಭೀಮಣ್ಣ ಚೌದ್ರಿ ಅಖಾಡಕ್ಕಿಳಿದು, ಆ ಕಾಲದ ವಿಜಯಪುರ ಜಿಲ್ಲೆಯ ಘಟಾನುಘಟಿಗಳ ವಿರುದ್ಧವೇ ಸೆಡ್ಡು ಹೊಡೆದು, ಜನತಾ ಪಕ್ಷದ ಅಲೆಯಲ್ಲೂ ಸಂಸದರಾಗಿ ಆಯ್ಕೆಯಾದರು.

1980ರಲ್ಲಿ ನಡೆದ ಏಳನೇ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ಕೆ.ಬಿ.ಚೌದ್ರಿ ಸಂಸದರಾಗಿ ಪುನರಾಯ್ಕೆಯಾದರು. ತಮ್ಮ ಅಧಿಕಾರ ಅವಧಿಯ ಕೊನೆ ದಿನಗಳಲ್ಲಿ ಮೃತಪಟ್ಟರು. ಸಂಸದರ ಅವಧಿಯೂ ಕಡಿಮೆ ಇದ್ದುದರಿಂದ ಉಪ ಚುನಾವಣೆ ಘೋಷಣೆಯಾಗಲಿಲ್ಲ.

1971ರ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಬಿ.ಕೆ.ಗುಡದಿನ್ನಿ ಮತ್ತೆ ಸಂಸತ್‌ ಪ್ರವೇಶಿಸುವ ಯತ್ನ ನಡೆಸಲಿಲ್ಲ. ಈ ನಡುವಿನ ಅವಧಿಯಲ್ಲೇ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು.

ಲೋಕಸಭೆಗೆ 1989ರಲ್ಲಿ ಒಂಬತ್ತನೇ ಸಾರ್ವತ್ರಿಕ ಚುನಾವಣೆ ಘೋಷಣೆಯಾಯ್ತು. ಕಾಂಗ್ರೆಸ್‌ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸಲು ಶೋಧ ನಡೆಸಿದಾಗ, ಮತ್ತೆ ಬಿ.ಕೆ.ಗುಡದಿನ್ನಿ ಅವರನ್ನೇ ತನ್ನ ಹುರಿಯಾಳನ್ನಾಗಿಸಿ ಅಖಾಡಕ್ಕಿಳಿಸಿತು. ಈ ಚುನಾವಣೆಯಲ್ಲಿ ಗುಡದಿನ್ನಿ ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಹಾಲಿ ಸಂಸದ ಎಸ್‌.ಎಂ.ಗುರಡ್ಡಿ ಅವರನ್ನು ಸೋಲಿಸಿದರು.

ಎರಡು ವರ್ಷದ ಆಸುಪಾಸಿನಲ್ಲೇ ಮತ್ತೊಮ್ಮೆ ಎದುರಾದ ಹತ್ತನೇ ಸಾರ್ವತ್ರಿಕ ಚುನಾವಣೆಗೂ ಬಿ.ಕೆ.ಗುಡದಿನ್ನಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದು ವಿಜಯಿಯಾದರು. ತಮ್ಮ ಅಧಿಕಾರ ಅವಧಿಯ ಕೊನೆಯಲ್ಲಿ ಸಂಸದರಾಗಿದ್ದಾಗಲೇ ಕೊನೆಯುಸಿರೆಳೆದರು.

ಸಂಸದರ ಅವಧಿ ಅತ್ಯಂತ ಕಡಿಮೆ ಇದ್ದುದರಿಂದ ಈ ಬಾರಿಯೂ ಸಹ ಉಪ ಚುನಾವಣೆ ಘೋಷಣೆಯಾಗಲಿಲ್ಲ. ಜಿ.ಡಿ.ಪಾಟೀಲ, ಕೆ.ಬಿ.ಚೌದ್ರಿ, ಬಿ.ಕೆ.ಗುಡದಿನ್ನಿ ಈ ಮೂವರು ಸಂಸದರಾಗಿದ್ದ ಸಂದರ್ಭವೇ ಕೊನೆಯುಸಿರೆಳೆದರು ಎಂಬುದು ವಿಜಯಪುರ ಜಿಲ್ಲಾ ಚುನಾವಣಾ ಇತಿಹಾಸದಲ್ಲಿ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !