ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಏಳನೇ ಸ್ಥಾನಕ್ಕೇರಿದ ಬೆಂಗಳೂರು

ಸಿರಾಜ್ ಅಮೋಘ ಬೌಲಿಂಗ್; ಫಫ್ ಮಿಂಚಿನ ಬ್ಯಾಟಿಂಗ್; ಗಮನ ಸೆಳೆದ ವೈಶಾಖ
Published 4 ಮೇ 2024, 22:23 IST
Last Updated 4 ಮೇ 2024, 22:23 IST
ಅಕ್ಷರ ಗಾತ್ರ

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 25 ರನ್‌ಗಳ ಅಂತರದಲ್ಲಿ 6 ವಿಕೆಟ್ ಕಳೆದುಕೊಂಡಾಗ ಮೌನ ಆವರಿಸಿತ್ತು. ಆತಿಥೇಯರಿಗೆ ಸೋಲುವ ಭಯ ಕಾಡಿತ್ತು.

ಮೊಹಮ್ಮದ್ ಸಿರಾಜ್, ಯಶ್ ದಯಾಳ್ ಮತ್ತು ವೈಶಾಖ ವಿಜಯಕುಮಾರ್ ಅವರ ಅಮೋಘ ಬೌಲಿಂಗ್‌ ಹಾಗೂ ಫಫ್ ಡುಪ್ಲೆಸಿಯ ಮಿಂಚಿನ ಅರ್ಧಶತಕ ವ್ಯರ್ಥವಾಗುವಂತೆ ಭಾಸವಾಗಿತ್ತು. ಗುಜರಾತ್ ಟೈಟನ್ಸ್ ತಂಡದ ಎಡಗೈ ವೇಗಿ ಜೋಶುವಾ ಲಿಟಲ್ (45ಕ್ಕೆ4) ಮಿಂಚಿನ  ದಾಳಿಯಿಂದಾಗಿ ಬೆಂಗಳೂರಿನ ಅಭಿಮಾನಿಗಳ ಮುಖದಲ್ಲಿ ಆತಂಕ ಮನೆಮಾಡಿತ್ತು. 

ಆದರೆ ’ಫಿನಿಷರ್’ ದಿನೇಶ್ ಕಾರ್ತಿಕ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಗುಜರಾತ್ ಟೈಟನ್ಸ್ ಎದುರು 4 ವಿಕೆಟ್‌ಗಳಿಂದ ಗೆದ್ದ ಆರ್‌ಸಿಬಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿತು. ಟೂರ್ನಿಯ ಆರಂಭದಿಂದಲೂ ಕೊನೆಯ ಸ್ಥಾನದಲ್ಲಿದ್ದ ಡುಪ್ಲೆಸಿ ಬಳಗವು ಮೂರು ಸ್ಥಾನಗಳ ಬಡ್ತಿ ಪಡೆದು ಅಭಿಮಾನಿಗಳಿಗೆ ಸಂತಸದ ಸವಿಯುಣಿಸಿತು.

ಸುಮಾರು 30 ಸಾವಿರ ಪ್ರೇಕ್ಷಕರು ಸೇರಿದ್ದ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡದ ಬೌಲರ್‌ಗಳು ಪಾರಮ್ಯ ಮೆರೆದರು. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಸ್ಥಾನ ಪಡೆದ ಖುಷಿಯಲ್ಲಿರುವ ವೇಗಿ  ಮೊಹಮ್ಮದ್ ಸಿರಾಜ್  ಸಿರಾಜ್ (29ಕ್ಕೆ2) ಅವರ ದಾಳಿಯಿಂದಾಗಿ ಗುಜರಾತ್ ಟೈಟನ್ಸ್‌ ಪವರ್‌ಪ್ಲೇನಲ್ಲಿ ದೊಡ್ಡ  ಆಘಾತ ಅನುಭವಿಸಿತು.  ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಪಂದ್ಯವೊಂದರ ಪವರ್‌ಪ್ಲೇನಲ್ಲಿ ಅತ್ಯಂತ ಕನಿಷ್ಠ ಮೊತ್ತವನ್ನು (3ಕ್ಕೆ23) ಗುಜರಾತ್ ಟೈಟನ್ಸ್ ದಾಖಲಿಸಿತು. 

ಗುಜರಾತ್ ಗಾಯದ ಮೇಲೆ ಕೊನೆಯ ಹಂತದ ಓವರ್‌ಗಳಲ್ಲಿ ಎಡಗೈ ವೇಗಿ ಯಶ್ ದಯಾಳ್ (21ಕ್ಕೆ2)ಹಾಗೂ ಬೆಂಗಳೂರು ಹುಡುಗ ವೈಶಾಖ ವಿಜಯಕುಮಾರ್ (23ಕ್ಕೆ3) ಬರೆ ಎಳೆದರು. ಇದರಿಂದಾಗಿ ಗುಜರಾತ್ ತಂಡವು  19.3 ಓವರ್‌ಗಳಲ್ಲಿ 147 ರನ್‌ಗಳ  ಸಾಧಾರಣ ಮೊತ್ತ ದಾಖಲಿಸಿತು. ಇದಕ್ಕುತ್ತರವಾಗಿ ಆರ್‌ಸಿಬಿ ತಂಡವು 13.4 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 162 ರನ್‌ ಗಳಿಸಿತು. ಆರಂಭಿಕ ಜೋಡಿ ಫಫ್ ಡುಪ್ಲೆಸಿ (64; 23ಎ, 4X10, 6X3) ಮತ್ತು ವಿರಾಟ್ ಕೊಹ್ಲಿ (42; 27ಎ, 4X2, 6X4) ಮೊದಲ ವಿಕೆಟ್‌ಗೆ 92 ರನ್‌ ಸೇರಿಸಿದರು. ಈ ರನ್‌ಗಳು ಪವರ್‌ ಪ್ಲೇನಲ್ಲಿಯೇ ಬಂದಿದ್ದು ವಿಶೇಷ.

ಆದರೆ ಆರನೇ ಓವರ್‌ನಲ್ಲಿ ಜೋಶುವಾ ಎಸೆತದಲ್ಲಿ ಫಫ್ ಔಟಾಗುವುದರೊಂದಿಗೆ  ಇನಿಂಗ್ಸ್ ನಾಟಕೀಯ ತಿರುವು ಪಡೆಯಿತು. ಗುಜರಾತ್ ತಂಡದ ಜೊಶುವಾ ಹಾಗು ಹೋದ ಪಂದ್ಯದಲ್ಲಿ  ಶತಕ ಗಳಿಸಿದ್ದ ವಿಲ್ ಜ್ಯಾಕ್ಸ್‌ ( 1ರನ್) ನೂರ್ ಅಹಮದ್‌ ಬೌಲಿಂಗ್‌ನಲ್ಲಿ ಔಟಾದರು. ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಬ್ಬರನ್ನೂ ಎಂಟನೇ ಓವರ್‌ನಲ್ಲಿ ಜೋಶುವಾ ಔಟ್ ಮಾಡಿದರು. 

ಕ್ಯಾಮರಾನ್ ಗ್ರೀನ್ ಅವರನ್ನು 10ನೇ ಓವರ್‌ನಲ್ಲಿ ಇದೇ ಜೋಶುವಾ ಡಗ್‌ಔಟ್‌ಗೆ ಕಳಿಸಿದರು. ಇನ್ನೊಂದು ಬದಿಯಲ್ಲಿ ತಮ್ಮ ವೇಗಕ್ಕೆ ನಿಯಂತ್ರಣ ಹೇರಿ ಇನಿಂಗ್ಸ್‌ಗೆ ಬಲ ತುಂಬುತ್ತಿದ್ದ ವಿರಾಟ್ ಇನಿಂಗ್ಸ್‌ಗೆ ನೂರ್ ಅಹಮದ್ ತೆರೆ ಎಳೆದರು.

ವಿರಾಟ್ ನಿರ್ಗಮಿಸಿದಾಗ ತಂಡದ ಜಯಕ್ಕೆ 31 ರನ್‌ಗಳ ಅವಶ್ಯಕತೆ ಇತ್ತು. ಒಂಬತ್ತು ಓವರ್‌ಗಳು ಬಾಕಿಯಿದ್ದವು. ಆದರೆ ವಿಕೆಟ್‌ ಉಳಿಸಿಕೊಳ್ಳುವುದು ಮುಖ್ಯವಾಗಿತ್ತು. ದಿನೇಶ್ (ಔಟಾಗದೆ 21) ಮತ್ತು ಸ್ವಪ್ನಿಲ್ ಸಿಂಗ್ (ಔಟಾಗದೆ 15) ಬೌಲರ್‌ಗಳನ್ನು ನಿರ್ಭೀತಿಯಿಂದ ದಂಡಿಸಿದರು. ಟೈಟನ್ಸ್‌ ನಾಯಕ ಶುಭಮನ್ ಗಿಲ್ ಅವರು ಮಾಡಿದ ಕೊನೆಯ ಪ್ರಯತ್ನಗಳನ್ನು ವಿಫಲಗೊಳಿಸಿದರು. 

ಆರ್‌ಸಿಬಿ ಮತ್ತು ಗುಜರಾತ್ ಬ್ಯಾಟಿಂಗ್‌ಗೆ ಅಜಗಜಾಂತರ ವ್ಯತ್ಯಾಸವಿತ್ತು. ಗಿಲ್ ಬಳಗದ ಬ್ಯಾಟರ್‌ಗಳು ಪರದಾಡಿದ್ದ ಪಿಚ್‌ನಲ್ಲಿಯೇ ಆತಿಥೇಯರು ಅಬ್ಬರಿಸಿದರು.

ಗುಜರಾತ್ ಬ್ಯಾಟಿಂಗ್‌ನಲ್ಲಿ ಮೊದಲ ಸಿಕ್ಸರ್‌ ದಾಖಲಾಗಿದ್ದು 10ನೇ ಓವರ್‌ನಲ್ಲಿ. ಕರ್ಣ ಶರ್ಮಾ ಹಾಕಿದ್ದ ಎಸೆತವನ್ನು ಡೇವಿಡ್ ಮಿಲ್ಲರ್ ಸಿಕ್ಸರ್‌ಗೆತ್ತಿದರು. ಮಿಲ್ಲರ್ (30; 20ಎ) ಹಾಗೂ  ಶಾರೂಕ್ (37; 24ಎ)  ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 61 ರನ್‌ ಸೇರಿಸಿದರು. 

ಗುಜರಾತ್ ತಂಡವು 17 ಬೌಂಡರಿ, 5 ಸಿಕ್ಸರ್‌ ಗಳಿಸಿತು. ಬೆಂಗಳೂರು ತಂಡವು 8 ಸಿಕ್ಸರ್ ಹಾಗೂ 18 ಬೌಂಡರಿ ಬಾರಿಸಿತು.

ವಿಕೆಟ್ ಕಬಳಿಸಿದ ವೈಶಾಖ ವಿಜಯಕುಮಾರ್ ಸಂಭ್ರಮ
ವಿಕೆಟ್ ಕಬಳಿಸಿದ ವೈಶಾಖ ವಿಜಯಕುಮಾರ್ ಸಂಭ್ರಮ

ವೈಶಾಖ ಮಿಂಚು

ಕೊನೆಯ ಓವರ್ ಬೌಲಿಂಗ್ ಮಾಡುವ ಅವಕಾಶ ಪಡೆದ ‘ಸ್ಥಳೀಯ ಹೀರೊ‘ ವೈಶಾಖ ಯಶಸ್ವಿಯಾದರು. ಅದೊಂದೇ ಓವರ್‌ನಲ್ಲಿ ‘ಇಂಪ್ಯಾಕ್ಟ್‌ ಪ್ಲೇಯರ್’ ವಿಜಯಶಂಕರ್ ಮತ್ತು ಮಾನವ ಸುತಾರ ಅವರ ವಿಕೆಟ್ ಕಬಳಿಸಿದರು. ಅಲ್ಲದೇ ಕೀಪರ್ ಕಾರ್ತಿಕ್‌ ಜೊತೆಗೂಡಿ ಮೋಹಿತ್ ಶರ್ಮಾ ಅವರನ್ನು ರನ್‌ಔಟ್ ಕೂಡ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT