ಗುರುವಾರ , ನವೆಂಬರ್ 21, 2019
20 °C
ಉಪ್ಪಾರ ಸಮಾಜ್ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ

ಶಿಕ್ಷಣದಿಂದ ಆರೋಗ್ಯಯುತ ಸಮಾಜ: ಪುಟ್ಟರಂಗಶೆಟ್ಟಿ

Published:
Updated:
Prajavani

ಚಾಮರಾಜನಗರ: ‘ಪ್ರತಿಭೆ ಎಂಬುದು ಸಾಧಕನ ಸ್ವತ್ತು. ಕಷ್ಟಪಟ್ಟು ಶ್ರಮ ವಹಿಸಿದರೆ ಸಾಧನೆ ಸಾಧ್ಯ. ಉತ್ತಮ ಶಿಕ್ಷಣ ಪಡೆಯುವುದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬಹುದು’ ಎಂದು ಶಾಸಕರ ಸಿ.ಪುಟ್ಟರಂಗಶೆಟ್ಟಿ ಅವರು ಭಾನುವಾರ ಹೇಳಿದರು. 

ನಗರದ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಜಿಲ್ಲಾ ಉಪ್ಪಾರ ಸಂಘ ಹಾಗೂ ಜಿಲ್ಲಾ ವ್ಯಾಪ್ತಿಯ ಗಡಿಕಟ್ಟೆಮನೆ ಯಜಮಾನರು ಹಾಗೂ ಸಮುದಾಯದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ, 2018–19ನೇ ಸಾಲಿನ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಾವು ಮಾಡುವ ಸಮಾಜಮುಖಿ ಕೆಲಸಗಳು ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡುತ್ತವೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಪಡೆದು ಸಮಾಜದ ಅಭಿವೃದ್ಧಿಗೆ ನೆರವಾಗಬೇಕು’ ಎಂದು ಕರೆ ನೀಡಿದರು.  

ಉಪ್ಪಾರ ಸಮುದಾಯದ ಶಿವಕುಮಾರ್ ಅವರು ಮಾತನಾಡಿ, ‘ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆಗಳನ್ನು ಪಡೆಯಬೇಕಾದರೆ ಕಠಿಣ ಪರಿಶ್ರಮ ಅಗತ್ಯ. ವ್ರತದಂತೆ ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಅದಕ್ಕಾಗಿ ಆಸಕ್ತಿ ಇರಬೇಕು. ತಾಳ್ಮೆಯೂ ಬೇಕು. ವಿದ್ಯಾರ್ಥಿಗಳು ಇಂತಹ ಗುಣಗಳನ್ನು ಅಳವಡಿಸಕೊಂಡು ಸಮಾಜಕ್ಕೆ ಆಸ್ತಿಯಾಗಬೇಕು’ ಎಂದರು.

ವಕ್ತಾರ ಮಂಗಲ ಶಿವಕುಮಾರ್ ಅವರು ಮಾತನಾಡಿ, ‘ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಶಿಕ್ಷಣ ಜೀವನದ ಭವಿಷ್ಯ ನಿರ್ಧರಿಸುವ ಹಂತಗಳಾಗಿದ್ದು, ಶ್ರಮಪಟ್ಟು ಅಧ್ಯಯನ ಮಾಡಬೇಕು’ ಎಂದು ಸಲಹೆ ನೀಡಿದರು.

ಮುಖಂಡ ನೂರೊಂದುಶೆಟ್ಟಿ ಅವರು ಮಾತನಾಡಿ, ‘ಶಿಕ್ಷಣ ಹಾಗೂ ಆರೋಗ್ಯ ಜೀವನದ ಎರಡು ಮುಖ್ಯವಾದ ಸಂಗತಿಗಳು. ವಿದ್ಯಾರ್ಥಿಗಳು ಇವೆರಡೂ ವಿಚಾರಗಳಲ್ಲಿ ಸಮತೋಲನ ಕಾಪಪಾಡಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಜ್ಞಾನಕ್ಕಿಂತ ಮಿಗಿಲಾದದ್ದು ಪ್ರಪಂಚದಲ್ಲಿ ಯಾವುದೂ ಇಲ್ಲ. ಸಮಾಜದ ಪರಿವರ್ತನೆಗೆ ಶಿಕ್ಷಣ ಅತ್ಯಂತ ಮುಖ್ಯ’ ಎಂದರು. 

ಎಸ್‌ಐ ಹುದ್ದೆಯಿಂದ ಸಿಪಿಐಗೆ ಬಡ್ತಿ ಹೊಂದಿದ ಶಿವಲಿಂಗಶೆಟ್ಟಿ, ಚಿಕ್ಕರಾಜಶೆಟ್ಟಿ, ಅಂಬೇಡ್ಕರ್ ಫೆಲೋಶಿಪ್‌ಗೆ ಆಯ್ಕೆಯಾದ ರವಿ, ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಂತಹ ಗೋಪಾಲ್, ಶೇ 80ಕ್ಕಿಂತ ಹೆಚ್ಚು ಅಂಕ ಪಡೆದ, ದೃಷ್ಟಿ ದೋಷ ಹೊಂದಿರುವ ವಿದ್ಯಾರ್ಥಿನಿ ಲಕ್ಷ್ಮಿ ಅವರನ್ನು ಸನ್ಮಾನಿಸಲಾಯಿತು. 

ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್, ಜಿಲ್ಲಾ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಲಿಂಗರಾಜು, ಕೃಷ್ಣಸ್ವಾಮಿ, ಮಲೆ ಮಹದೇಶ್ವರ ಪ್ರಾಧಿಕಾರದ ಸದಸ್ಯೆ ಕಾವೇರಿ ಶಿವಕುಮಾರ್, ಗಡಿ ಯಜಮಾನರಾದ ಕೃಷ್ಣಶೆಟ್ಟಿ, ಜಯಸ್ವಾಮಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಪುಟ್ಟಸ್ವಾಮಿ, ವೈ.ಕೆ.ನಾಗರಾಜು, ಸಿದ್ದಪ್ಪಾಜಿ, ಕ್ಯಾತಶೆಟ್ಟಿ, ಸೋಮಣ್ಣ, ಬಾಗಳಿ ರೇವಣ್ಣ, ಗೋವಿಂದರಾಜು, ಕುಮಾರ್, ಬಸವಣ್ಣ, ಸೋಮಣ್ಣ ಉಪ್ಪಾರ್, ಸೇರಿದಂತೆ ಗಡಿಕಟ್ಟೆಮನೆ ಯಜಮಾನರು, ಮುಖಂಡರು, ಉಪ್ಪಾರ ಸಮಾಜದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)