ಹೋಳಿ: ವಿಶೇಷ ವೇಷದವಿಶಿಷ್ಟ ಕುಣಿತ

ಮಂಗಳವಾರ, ಏಪ್ರಿಲ್ 23, 2019
31 °C

ಹೋಳಿ: ವಿಶೇಷ ವೇಷದವಿಶಿಷ್ಟ ಕುಣಿತ

Published:
Updated:
Prajavani

ತಲೆ ತುಂಬಾ ಮುಂಡಾಸು, ಮುಂಡಾಸಿನ ಸುತ್ತಲೂ ಅಬ್ಬಲಿಗೆ (ಕನಕಾಂಬರ), ಸುರಗಿ ಹೂವಿನ ಸಿಂಗಾರ. ಮುಂಡಾಸಿನ ಮೇಲೆ ಸಿಕ್ಕಿಸಿರುವ ಹಟ್ಟಿಮುದ್ದ ಹಕ್ಕಿಯ ಗರಿ, ಮೈ ಮೇಲೆ ಬಿಳಿಯ ನಿಲುವಂಗಿ, ಕೆಳಗೆ ಸೀರೆಯ ನೆರಿಗೆ, ಅಂಗಿಯ ಮೇಲೆ ಬಣ್ಣ ಬಣ್ಣದ ಪಟ್ಟೆಯ ದಾರ ಹೀಗೆ ವೇಷ ತೊಟ್ಟು, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ವೃತ್ತಾಕಾರವಾಗಿ ನಿಂತು ಹಾಡುತ್ತಾ, ನೃತ್ಯ ಮಾಡಲು ಆರಂಭಿಸಿದ್ದಾರೆ ಎಂದರೆ ಉಡುಪಿ ಜಿಲ್ಲೆಯ ಸುತ್ತಲಿನ ಕುಡುಬಿ ಜನಾಂಗದವರು ಹೋಳಿ ಹಬ್ಬವನ್ನು ಆರಂಭಿಸಿದ್ದಾರೆ ಎಂದೇ ಅರ್ಥ.

ಉತ್ತರ ಕರ್ನಾಟಕದಲ್ಲಿ ಹೋಳಿಹಬ್ಬವನ್ನು ಬಣ್ಣ ಎರಚಿ, ತಮಟೆ ಬಡಿದು, ನೃತ್ಯ ಮಾಡುತ್ತಾ ಆಚರಿಸುತ್ತಾರೆ. ಆದರೆ, ಉಡುಪಿ ಭಾಗದಲ್ಲಿನ ಈ ಸಮುದಾಯ ಹೋಳಿ ಹಬ್ಬವನ್ನು ಇಂಥ ವಿಶೇಷ ವೇಷತೊಟ್ಟು ನೃತ್ಯ ಮಾಡುತ್ತಾ ಆಚರಿಸುತ್ತಾರೆ. ಉಡುಪಿ, ಕುಂದಾಪುರ ತಾಲ್ಲೂಕಿನ ಭಾಗಗಳಾದ ಹಾಲಾಡಿ, ಚೋರಾಡಿ, ಗೋಳಿಯಂಗಡಿ, ಶೇಡಿಮನೆ, ಬಾರ್ಕೂರು ಹಾಗೂ ಕೊರ್ಕಣೆ, ಮುದ್ದೂರು ಭಾಗದಲ್ಲಿರುವ ಕುಡುಬಿಗಳು ಈ ರೀತಿ ಹಬ್ಬವನ್ನು ಸಂಭ್ರಮಿಸುತ್ತಾರೆ.

ಶಿವನ ಆರಾಧಕರಾದ ಇವರು ಶಿವನನ್ನು ಮೆಚ್ಚಿಸುವ ಸಲುವಾಗಿ ಹೋಳಿ ವೇಷ ಧರಿಸಿ, ತಮ್ಮ ಭಾಷೆಯ (ಕೊಂಕಣಿ ಮಿಶ್ರಿತ ಮರಾಠಿ) ಹಾಡು ಹೇಳುತ್ತಾ ನೃತ್ಯ ಮಾಡುತ್ತಾರೆ. ಹೋಳಿ ಹಬ್ಬದಲ್ಲಿ ಗುಮ್ಮಟೆ ಹಾಗೂ ಕೋಲಾಟದ ನೃತ್ಯ ವಿಶೇಷ. ಹುಣ್ಣಿಮೆಗೆ ಮೂರ್ನಾಲ್ಕು ದಿನ ಮುನ್ನಾ ಆರಂಭವಾಗುವ (ದ್ವಾದಶಿಯಿಂದ) ಹೋಳಿ ಆಚರಣೆ ಹುಣ್ಣಿಮೆ ದಿನ (ಕಾಮದಹನದ ದಿನ) ಮುಗಿಯುತ್ತದೆ. ಐದು ದಿನಗಳ ಕಾಲ ವೇಷ ಧರಿಸಿ ಮನೆ ಮನೆಗೆ ಹೋಗಿ ನರ್ತಿಸುವ ಕುಡುಬಿ ಜನಾಂಗದ ಪುರುಷರು ಐದು ದಿನವೂ ತೊಟ್ಟ ವೇಷವನ್ನು ಕಳಚುವುದಿಲ್ಲ, ಸ್ನಾನವೂ ನಿಷಿದ್ಧ. 

ಹೋಳಿ ಕುಣಿತದ ಆರಂಭದ ದಿನ ಗುರಕಾರನ ಮನೆಯಲ್ಲಿ ಪೂಜೆ ಸಂಪ್ರದಾಯಗಳನ್ನು ನೆರವೇರಿಸಿ ಕುಣಿತಕ್ಕೆ ಬೇರೆ ಊರುಗಳಿಗೆ ತೆರಳುತ್ತಾರೆ. ಎರಡು ದಿನ ಬೇರೆ ಊರುಗಳಲ್ಲಿ ಕುಣಿದು 3ನೇ ದಿನ ತಮ್ಮ ಊರಿಗೆ ಮರಳುತ್ತಾರೆ. ನಂತರ ಊರಿನ ಮನೆ ಮನೆಗೂ ತೆರಳಿ ಕುಣಿಯುತ್ತಾರೆ. ಕುಣಿತದ ನಂತರ ಗೌರವ ರೂಪದಲ್ಲಿ ವೀಳ್ಯದೆಲೆ ಹಾಗೂ ತೆಂಗಿನಕಾಯಿ, ಅಕ್ಕಿಯನ್ನು ಸಂಗ್ರಹಿಸುವುದು ವಾಡಿಕೆ. 

ಹಟ್ಟಿಮುದ್ದ ಹಕ್ಕಿಯ ಗರಿ ಕೀಳುವುದು

ಹೋಳಿ ಹಬ್ಬದಲ್ಲಿ ಹಟ್ಟಿಮುದ್ದ ಹಕ್ಕಿಯ ಬಾಲವನ್ನು ಕುಡುಬಿಗಳು ಧರಿಸಲೇಬೇಕು. ಈ ಹಕ್ಕಿ ನವೆಂಬರ್ ತಿಂಗಳಲ್ಲಿ ಪಶ್ಚಿಮಘಟ್ಟದ ತಪ್ಪಲಿನ ಕಾಡುಗಳಿಗೆ ವಲಸೆ ಬರುತ್ತದೆ. ಅದು ಇಲ್ಲಿಗೆ ಬಂದು ಕೆಲ ಕಾಲ ನೆಲೆಸಿದ ಮೇಲೆ ಬಾಲ ಬೆಳೆಯುತ್ತದೆ. ಈ ಬಾಲ ಕೀಳುವ ಪರಿಣತರು ಈ ಜನಾಂಗದಲ್ಲಿದ್ದಾರೆ. ‘ಈ ಹಕ್ಕಿ ಬೆಳಿಗ್ಗೆ 6.30 ರಿಂದ 8.30ರ ಹೊತ್ತಿಗೆ ಮರದ ಮೇಲೆ ಮಲಗುತ್ತದೆ. ಮಲಗುವ ಮುನ್ನ ಒಂದು ರೀತಿಯ ವಿಚಿತ್ರ ಶಬ್ದ ಹೊರಡಿಸುತ್ತದೆ. ಆ ಶಬ್ದದ ಆಧಾರದ ಮೇಲೆ ಇದು ಮಲಗಿರುವ ಮರವನ್ನು ಗುರುತಿಸಿ ಬಾಲವನ್ನು ಕೀಳುತ್ತಾರೆ. ಬಾಲ ಕಿತ್ತ ತಕ್ಷಣ ಆ ಹಕ್ಕಿ ಅಲ್ಲಿಂದ ಹಾರಿ ಹೋಗುತ್ತದೆ’ ಎನ್ನುತ್ತಾರೆ ಗೋಳಿಯಂಗಡಿಯ ನಾರಾಯಣ ನಾಯ್ಕ. 

ಹಬ್ಬ ಮುಗಿಯುವ ಅಂದರೆ ಐದನೇ ದಿನ ಮತ್ತೆ ಗುರಿಕಾರನ ಮನೆ ಸೇರಿ ವೇಷ ಕಳಚಿ ವಿಧಿವಿಧಾನಗಳನ್ನು ಪಾಲಿಸಿ ಊರಿನ ಹೊಳೆಯಲ್ಲಿ ವೇಷಧಾರಿಗಳು ಸಾಮೂಹಿಕ ಸ್ನಾನ ಮಾಡುತ್ತಾರೆ. ನಂತರ ತಮ್ಮ ವೇಷ ಭೂಷಣಗಳಿಗೆ ಪೂಜೆ ಮಾಡಿ ರಾತ್ರಿ ಕಾಮದಹನ ಮಾಡುತ್ತಾರೆ. ಅಂದರೆ ಬೆಂಕಿ ಹಾಕಿ ತಾವು ಧರಿಸಿದ್ದ ವೇಷಗಳನ್ನು ತಲೆ ಮೇಲೆ ಹೊತ್ತು ಕೆಂಡ ಹಾಯುತ್ತಾರೆ.
ನಂತರ ತಾವು ಸಂಗ್ರಹಿಸಿದ ದವಸ ಧಾನ್ಯಗಳನ್ನು ಹಂಚಿಕೊಂಡು ತಮ್ಮ ಮೂಲ ದೇವರಿಗೆ ಪೂಜೆ ಸಲ್ಲಿಸುತ್ತಾರೆ. ಮರುದಿನ ಕಾಡಿನಲ್ಲಿ ಬೇಟೆಯಾಡುವ ಮೂಲಕ ಆ ವರ್ಷದ ಹೋಳಿ ಹಬ್ಬವನ್ನು ಸಂಪೂರ್ಣವಾಗಿ ಮುಗಿಸುತ್ತಾರೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !