ಮಹಿಳೆಯರು ಕಾನೂನು ಅರಿವು ಪಡೆದುಕೊಳ್ಳಬೇಕು

ಮಂಗಳವಾರ, ಮಾರ್ಚ್ 26, 2019
33 °C
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅಭಿಮತ

ಮಹಿಳೆಯರು ಕಾನೂನು ಅರಿವು ಪಡೆದುಕೊಳ್ಳಬೇಕು

Published:
Updated:
Prajavani

ಚಾಮರಾಜನಗರ: ‘ಮಹಿಳೆಯರಿಗೆ ಕಾನೂನಿನ ಅರಿವಿದ್ದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅಭಿಪ್ರಾಯಪಟ್ಟರು.

ನಗರದ ನ್ಯಾಯಾಲಯದ ಆವರಣದಲ್ಲಿರುವ ವ್ಯಾಜ್ಯಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೂ ಆಸ್ತಿ ಹಕ್ಕು ಇದೆ. ಆದರೆ, ಇಂದಿಗೂ ಮಹಿಳೆಯರು ತಮ್ಮ ಹಕ್ಕುಗಳನ್ನು ಚಲಾಯಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಮರ್ಪಕವಾಗಿ ಕಾನೂನು ಅರಿಯಬೇಕು. ಆಗಮಾತ್ರ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.

ಜಲ್ಲೆಯ ವಿಶೇಷ:ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೇರಿದಂತೆ ಅನೇಕರು ಮಹಿಳೆಯರೇ ಇದ್ದಾರೆ. ಇದು ಚಾಮರಾಜನಗರ ಜಿಲ್ಲೆಯ ವಿಶೇಷತೆಗಳಲ್ಲಿ ಒಂದಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ರಮೇಶ್ ಮಾತನಾಡಿ, ‘ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ಇಂದು ಮನೆಯಿಂದಲೇ ಶೋಷಣೆಗಳು ನಡೆಯುತ್ತಿದೆ. ಪೋಷಕರು ಮನೆಯಲ್ಲಿ ಸಮಾನತೆಯಿಂದ ಕಾಣಬೇಕು. ಇಲ್ಲವಾದರೆ ಹೆಚ್ಚಿನ ಅಪಾಯ ತಂದುಕೊಳ್ಳಬೇಕಾಗುತ್ತದೆ. ಹೆಣ್ಣುಮಕ್ಕಳು ಗಂಡು ಮಕ್ಕಳಿಗಿಂತ ಹತ್ತು ಪಟ್ಟು ಸಮಾನರು’ ಎಂದು ಹೇಳಿದರು.

ಪ್ರಕೃತಿಯಲ್ಲಿ ಭೂಮಿತಾಯಿಗೆ ಬೀಜ ಬಿತ್ತಿದರೆ ಅದಕ್ಕೆ ಜೀವ ಸೃಷ್ಠಿ ಮಾಡಿ ಫಸಲು ನೀಡುತ್ತಾಳೆ. ಅದರಂತೆ ಮಹಿಳೆ ಜೀವತುಂಬಿ ಮಗುವಿಗೆ ಜನ್ಮ ನೀಡುವ ಶಕ್ತಿ ಹೊಂದಿದ್ದಾಳೆ. ಅವಳಿಗೆ ನಗುವನ್ನು ಕೊಟ್ಟರೆ ಪ್ರೀತಿ ತುಂಬಿದ ಹೃದಯವನ್ನೇ ಕೊಡುತ್ತಾಳೆ ಆದ್ದರಿಂದ ಹೆಣ್ಣು ಗಂಡಿಗಿಂತ ಹತ್ತುಪಟ್ಟು ಹೆಚ್ಚು. ಇಲ್ಲಿ ಗಂಡು ನಿಮಿತ್ತ ಮಾತ್ರ ಎಂದು ಹೇಳಿದರು.

ಹೆಣ್ಣಿನ ಜೀವನ ತ್ಯಾಗಮಯ. ಹೆಣ್ಣು ಮಕ್ಕಳನ್ನು ಮೂರ್ಖರನ್ನಾಗಿ ಮಾಡಿ ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಆದ್ದರಿಂದ, ಮಹಿಳೆಯರು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ವ್ಯವಧಾನ ಬೆಳೆಸಿಕೊಳ್ಳಬೇಕು. ಸಂಸಾರವನ್ನು ನಿಭಾಯಿಸಿ ಸುಖವಾಗಿರಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಜಿ.ಬಸವರಾಜ ಅವರ ತಾಯಿ ಹಾಗೂ ಸಹೋದರಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಪ್ರಧಾನ ಕಾರ್ಯದರ್ಶಿ ಆರ್.ಅರುಣ್‌ ಕುಮಾರ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ವಿ.ದೀಪಾ, ಸಿವಿಲ್‌ ನ್ಯಾಯಾಧೀಶ ಉಮೇಶ್, ಹಿರಿಯ ಸಹಾಯಕ ಅಭಿಯೋಜಕಿ ಜಯಶ್ರೀ ಶೇಣೈ, ಕಾನೂನು ಅಧಿಕಾರಿ ಶಕೀಲಾ ಅಬೂಬಕರ್‌, ವಿಶೇಷ ಸರ್ಕಾರಿ ಅಭಿಯೋಜಕ ಕೆ.ಯೋಗೇಶ್, ಜಿಲ್ಲಾ ಸರ್ಕಾರಿ ವಕೀಲ ಎಚ್.ಎನ್.ಲೋಕೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !